

ಹಾಸನ: ಹಾಸನಾಂಬೆ ದರ್ಶನ ಈ ವರ್ಷ ತೀವ್ರ ಗೊಂದಲಕ್ಕೆಡೆ ಮಾಡಿಕೊಟ್ಟಿದೆ. ವೃದ್ಧರು, ಮಹಿಳೆಯರು, ಮಕ್ಕಳು ಕಣ್ಣೀರು ಹಾಕುತ್ತಲೇ ತಳ್ಳಾಟ, ನೂಕಾಟದಲ್ಲೇ ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ. ತಾಳ್ಮೆಯಿಂದ ಸರತಿ ಸಾಲಿನಲ್ಲಿ ಕಾಯುತ್ತಿದ್ದ ಭಕ್ತರು ಗುರುವಾರ ಮಧ್ಯಾಹ್ನ ಮಳೆ ಸುರಿಯುತ್ತಿದ್ದಂತೆ, ಬ್ಯಾರಿಕೇಡ್ ತಳ್ಳಿ ಬೇರೆಡೆ ಆಶ್ರಯ ಪಡೆಯಲು ಪರದಾಡಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಭಕ್ತರ ನಡುವೆ ವಾಗ್ವಾದ ನಡೆದಿದೆ. ಸಾಲಿನಲ್ಲಿ ನಿಲ್ಲಲಾಗದವರು ದರ್ಶನ ಮಾಡದೆ ದೇವಸ್ಥಾನದ ಹೊರಗಿನಿಂದಲೇ ದೇವಿಗೆ ಕೈಮುಗಿದು ವಾಪಸಾದ ದೃಶ್ಯಗಳು ಸಾಮಾನ್ಯವಾಗಿದ್ದವು. ಅಕ್ಟೋಬರ್ 24ರಂದು ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುತ್ತಿರುವ ಹಾಸನಾಂಬ ದೇವಿ ದೇಗುಲ ಬಾಗಿಲನ್ನು ವಿಧ್ಯುಕ್ತವಾಗಿ ನಾಳೆ (ನ.3) ಮಧ್ಯಾಹ್ನ ಮುಚ್ಚಲಾಗುತ್ತದೆಯಾದರೂ, ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಶನಿವಾರ ಮಾತ್ರ ಅವಕಾಶ ಇದೆ. ಕಳೆದ ವರ್ಷ 12 ದಿನಗಳ ಸಾರ್ವಜನಿಕ ದರ್ಶನದಲ್ಲಿ 15 ಲಕ್ಷ ಭಕ್ತರು ಆಗಮಿಸಿದ್ದರು. ಈ ಬಾರಿಯಂತೂ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಮೊದಲ ಏಳು ದಿನಗಳಲ್ಲೇ ಅಂದಾಜು 18ರಿಂದ 20 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಆದರೆ, ಜಿಲ್ಲಾಡಳಿತ ಸೂಕ್ತ ಸಿದ್ಧತೆ ಮಾಡಿಕೊಳ್ಳದ ಪರಿಣಾಮ ಭಕ್ತರು ಪರದಾಡುವಂತಾಯಿತು.
ಅಲ್ಲದೆ, ವಿಐಪಿ, ವಿವಿಐಪಿ ದರ್ಶನದ ಪಾಸ್ಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಮುದ್ರಿಸಿ ಹಂಚಿದ್ದು, ಒಂದು ಸಾವಿರ ರೂ. ಪಾಸುಗಳನ್ನು ದೊಡ್ಡ ಸಂಖ್ಯೆಯಲ್ಲಿ ಮಾರಾಟ ಮಾಡಿದ್ದು, ಕೆಲವು ರಾಜಕಾರಣಿಗಳ ವಿಪರೀತ ಹಸ್ತಕ್ಷೇಪ, ಅಧಿಕಾರಿಗಳ ಪೂರ್ವಯೋಜನೆಯಲ್ಲಿನ ನ್ಯೂನತೆಗಳು ಈ ಬಾರಿಯ ಅವ್ಯವಸ್ಥೆಗೆ ಕಾರಣವಾಗಿವೆ. ವರ್ಷಕ್ಕೊಮ್ಮೆ 13 ದಿನಗಳ ಕಾಲ ತೆರೆಯುತ್ತಿದ್ದ ದೇಗುಲ ಈ ಬಾರಿ 9 ದಿನ ಮಾತ್ರ ತೆರೆದಿರುವುದು ಕೂಡ ಈ ಜನಜಂಗುಳಿಗೆ ಕಾರಣವಾಗಿರಬಹುದು. ಇದೆಲ್ಲ ಏನೇ ಇದ್ದರೂ ದೊಡ್ಡ ಸಂಖ್ಯೆಯಲ್ಲಿ ಭಕ್ತಸಮೂಹ ಬರುವುದು ಆರಂಭವಾಗುತ್ತಿದ್ದಂತೆಯೇ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳೆಲ್ಲ ಸೇರಿ ಸೂಕ್ತ ವ್ಯವಸ್ಥೆ, ಭದ್ರತೆ ಏರ್ಪಾಡು ಮಾಡಬೇಕಿತ್ತು.
ಲಕ್ಷಾಂತರ ಭಕ್ತರು ಆಗಮಿಸಿ, ಅವರು ಸಲ್ಲಿಸುವ ಕಾಣಿಕೆಯಿಂದ ಹಾಸನಾಂಬಾ ದೇಗುಲಕ್ಕೂ ಒಳ್ಳೆಯ ಆದಾಯ ಬರುತ್ತದೆ. ಅಲ್ಲದೆ, ಹಾಸನಕ್ಕೆ ದೇವಿಯ ದರ್ಶನಕ್ಕಾಗಿಯೇ ದೂರದೂರದ ಊರುಗಳಿಂದ ಜನರು ಆಗಮಿಸುತ್ತಿರುವುದರಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗುತ್ತದೆ. ಹೀಗಿರುವಾಗ ಜಿಲ್ಲಾಡಳಿತ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಕಾಳಜಿ ವಹಿಸದಿರುವುದು ಸೂಕ್ತವಲ್ಲ. ದರ್ಶನಕ್ಕೆ ಸುವ್ಯವಸ್ಥಿತ ಸರತಿ ಸಾಲು, ಶುದ್ಧ ಕುಡಿಯುವ ನೀರು ಸೇರಿದಂತೆ
ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಿತ್ತು. ಈ ಬಾರಿ ಆಗಿರುವ ಲೋಪಗಳು, ತೊಂದರೆಗಳಿಂದ ಜಿಲ್ಲಾಡಳಿತ ಪಾಠ ಕಲಿಯಬೇಕಿದೆ. ರಾಜ್ಯದ ಇತರ ದೊಡ್ಡ ದೇಗುಲಗಳ ನಿಯೋಜನಾ ವ್ಯವಸ್ಥೆಯನ್ನು ಅಭ್ಯಸಿಸಿ, ಸೂಕ್ತ ಕ್ರಮಗಳನ್ನು ಇಲ್ಲಿ ಜಾರಿಗೆ ತರಬೇಕಿದೆ. ಮುಖ್ಯವಾಗಿ, ಮುಂದಿನ ಬಾರಿಯಾದರೂ ಇಂತಹ ಅಪಸವ್ಯಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ಒಳಿತು.