

ಜಿ 20 ಅಧ್ಯಕ್ಷತೆಯನ್ನು ಇದೇ ಮೊದಲ ಬಾರಿಗೆ ವಹಿಸಿಕೊಂಡಿರುವ ಭಾರತವು ನವದೆಹಲಿಯಲ್ಲಿ ಇಂದು ಮತ್ತು ನಾಳೆ ಆಯೋಜಿಸಿರುವ ಶೃಂಗಸಭೆಯು ಐತಿಹಾಸಿಕವಾದುದು. ಜಾಗತಿಕವಾಗಿ ಭಾರತದ ಸ್ಥಾನಮಾನವನ್ನು ಇನ್ನಷ್ಟು ವರ್ಧಿಸಲು ಕೊಡುಗೆ ನೀಡುವ ಅಪೂರ್ವ ಅವಕಾಶವನ್ನು ಇದು ಸೃಷ್ಟಿಸಿದೆ. ವಿಶ್ವದ ಅತ್ಯಂತ ಪ್ರಭಾವಶಾಲಿ ಆರ್ಥಿಕತೆ ಇರುವ ರಾಷ್ಟ್ರಗಳೊಂದಿಗೆ ತೊಡಗಿಸಿಕೊಳ್ಳಲು, ಜಾಗತಿಕ ನೀತಿಗಳನ್ನು ರೂಪಿಸಲು, ದೇಶದ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ಮತ್ತಷ್ಟು ಬೆಳವಣಿಗೆ ಸಾಧಿಸಲು ಸೂಕ್ತ ವೇದಿಕೆಯೂ ಇದಾಗಿದೆ.
20 ರಾಷ್ಟ್ರಗಳಿಂದ ಕೂಡಿರುವ ಜಿ20 ಸಂಘಟನೆಯು ಜಾಗತಿಕ ಆರ್ಥಿಕ ಸಹಕಾರ ಮತ್ತು ನೀತಿ ಮಾರ್ಗಸೂಚಿಗಳ ಪ್ರಮುಖ ಅಂತಾರಾಷ್ಟ್ರೀಯ ವೇದಿಕೆಯಾಗಿದೆ. ಈ ಸಂಘಟನೆಯಲ್ಲಿರುವ ಸದಸ್ಯ ರಾಷ್ಟ್ರಗಳು ಜಾಗತಿಕ ಜಿಡಿಪಿಯಲ್ಲಿ (ವಿಶ್ವದ ಒಟ್ಟು ಆರ್ಥಿಕತೆಯಲ್ಲಿ) ಶೇಕಡಾ 80ರಷ್ಟು; ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಶೇಕಡಾ 75ರಷ್ಟು ಪಾಲನ್ನು ಹೊಂದಿವೆ. ಜಾಗತಿಕ ಜನಸಂಖ್ಯೆಯ ಮೂರನೇ ಎರಡರಷ್ಟು ಮತ್ತು ವಿಶ್ವದ ಭೂಪ್ರದೇಶದ ಶೇಕಡಾ 60ರಷ್ಟನ್ನು ಒಳಗೊಂಡಿರುವುದು ಈ ಸಂಘಟನೆಯ ಮಹತ್ವವನ್ನು ಸಾರುತ್ತದೆ.
ಭಾರತ ಆತಿಥ್ಯ ವಹಿಸುತ್ತಿರುವ ಈ ಶೃಂಗಸಭೆಯ ಕಾಲವು ಸವಾಲಿನಿಂದ ಕೂಡಿದೆ. ಪ್ರಸ್ತುತ ಜಾಗತಿಕ ಆರ್ಥಿಕ ಚಟುವಟಿಕೆಯಲ್ಲಿ ಮಂದಗತಿ ಇದೆ. ಭೌಗೋಳಿಕ- ರಾಜಕೀಯ ಬಿಕ್ಕಟ್ಟುಗಳೂ ಸಾಕಷ್ಟಿವೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ 2 ವರ್ಷಗಳ ಕಾಲ ನಲುಗಿದ ಜಗತ್ತು ಚೇತರಿಸಿಕೊಳ್ಳುವ ಹೊತ್ತಿನಲ್ಲಿಯೇ ರಷ್ಯಾ- ಯೂಕ್ರೇನ್ ಸಮರ ಸಾಗಿದೆ. ಇದರಿಂದಾಗಿ ಆಹಾರ ಮತ್ತು ಸಾಮಗ್ರಿಗಳ ಪೂರೈಕೆ ಸರಪಳಿಗಳು ತುಂಡರಿಸಿವೆ. ಇಂಧನ ಬೆಲೆಗಳು ಗಗನಮುಖಿಯಾಗಿವೆ. ಬೆಲೆ ಏರಿಕೆಯಿಂದಾಗಿ ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ. ಹವಾಮಾನ ಬದಲಾವಣೆ, ಭಯೋತ್ಪಾದನೆ, ಗಡಿ ಬಿಕ್ಕಟ್ಟು ಮೊದಲಾದ ಸಮಸ್ಯೆಗಳು ಬಾಧಿಸುತ್ತಿವೆ. ಹಸಿರು ಭವಿಷ್ಯಕ್ಕಾಗಿ, ಸುಸ್ಥಿರ ಅಭಿವೃದ್ಧಿಗಾಗಿ ಜಗತ್ತು ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿಯೇ ಭಾರತವು ತನ್ನ ಆಧ್ಯಾತ್ಮಿಕ ಪ್ರತಿಪಾದನೆಯಾದ ವಸುಧೈವ ಕುಟುಂಬಕಂ ಉಕ್ತಿಯನ್ನು ವಿಸ್ತರಿಸಿ, ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಘೋಷಣೆಯನ್ನು ಜಿ 20 ಶೃಂಗಸಭೆಗೆ ನೀಡಿರುವುದು ಈ ಎಲ್ಲ ಜಾಗತಿಕ ಸಮಸ್ಯೆಗಳಿಗೆ ಪರಿಹಾರದ ಪ್ರಕಾಶವಾಗಿ ಗೋಚರಿಸುತ್ತದೆ.
ಜಾಗತಿಕ ನಾಯಕನಾಗಿ ಪಾತ್ರವನ್ನು ನಿರ್ವಹಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಹಾಕಲು ಈ ಶೃಂಗಸಭೆಯು ನಿಸ್ಸಂಶಯವಾಗಿ ಭಾರತಕ್ಕೆ ಅಪೂರ್ವ ಅವಕಾಶ ಒದಗಿಸಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಧಾನಿ ಮೋದಿ ಅವರೂ ದಾಪುಗಾಲು ಹಾಕಿದಂತಿದೆ. ಶೃಂಗಸಭೆಯಲ್ಲದೆ, ಇದರಲ್ಲಿ ಭಾಗವಹಿಸುವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲು ಈ ಅಲ್ಪಾವಧಿಯ ಸಮಯವನ್ನು ಪರಿಣಾಮ ಕಾರಿಯಾಗಿ ಬಳಸಿಕೊಳ್ಳಲು ಅವರು ಮುಂದಾಗಿರುವುದು ಶ್ಲಾಘನೀಯ ಕ್ರಮವಾಗಿದೆ.
ಜಿ 20 ಅಧ್ಯಕ್ಷತೆ ವಹಿಸಿಕೊಂಡಿರುವ ಭಾರತದ ಜವಾಬ್ದಾರಿಯು ಹೆಚ್ಚಿದ್ದು, ಅಂತಾರಾಷ್ಟ್ರೀಯ ಸಮುದಾಯದ ವ್ಯಾಪಕ ನಿರೀಕ್ಷೆಗೂ ಕಾರಣವಾಗಿದೆ. ‘ಭಾರತವು ತನ್ನ ಜಿ 20 ಅಧ್ಯಕ್ಷತೆ ಅವಧಿಯಲ್ಲಿ ಭೌಗೋಳಿಕ ರಾಜಕೀಯ ವಿಭಜನೆಗಳನ್ನು ನಿವಾರಿಸಲು ಸಾಧ್ಯವಾದ ಎಲ್ಲವನ್ನೂ ಮಾಡುತ್ತದೆ. ವಿಶ್ವ ನಾಯಕರ ಈ ನಿರ್ಣಾಯಕ ಸಭೆಯು ಸಂಭವನೀಯ ಫಲಿತಾಂಶಗಳೊಂದಿಗೆ ಮುಕ್ತಾಯಗೊಳ್ಳುತ್ತದೆ’ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ನಿರೀಕ್ಷೆ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ. ಜಿ 20 ಶೃಂಗಸಭೆಯಲ್ಲಿ ಚೀನಾ ಆದ್ಯಕ್ಷ ಕ್ಸಿ ಜಿನ್ ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಪಾಲ್ಗೊಳ್ಳದಿರುವ ಕುರಿತು ಪ್ರತಿಪಕ್ಷ ಕಾಂಗ್ರೆಸ್ ಲೇವಡಿ ಮಾಡಿದೆ. ಆದರೆ, ಇದೇ ವೇಳೆ ಇದೇ ಪಕ್ಷದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ‘ವಿದೇಶಿ ನೀತಿಗಳನ್ನು ಆಂತರಿಕ ರಾಜಕಾರಣಕ್ಕೆ ಬಳಸಿಕೊಳ್ಳಬಾರದು’ ಎಂದು ಹೇಳಿರುವುದು ಪ್ರಬುದ್ಧತೆಯ ಸಂಕೇತವಾಗಿ ಗೋಚರಿಸುತ್ತದೆ.