

ಕರಾವಳಿ ಪ್ರದೇಶವನ್ನು ವ್ಯಾಪಕವಾಗಿ ಹೊಂದಿರುವ ದೇಶ ಭಾರತ. ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರವಲ್ಲದೆ ಉತ್ತರದ ಹಲವು ರಾಜ್ಯಗಳು ಕರಾವಳಿ ಪ್ರದೇಶವನ್ನು ಹೊಂದಿದ್ದು, ಇಲ್ಲಿನ ಆರ್ಥಿಕ ಜೀವನಾಡಿಯೇ ಮೀನುಗಾರಿಕೆ. ಲಕ್ಷಾಂತರ ಜನರ ಜೀವನಾಧಾರವಾಗಿರುವ ಮೀನುಗಾರಿಕೆ ಕಾಲಕ್ಕೆ ತಕ್ಕಂತೆ ಹೊಸ ಸಾಧ್ಯತೆಯತ್ತ ಹೊರಳಬೇಕಿರುವುದು ಅಗತ್ಯವಾಗಿತ್ತು. ಈ ನಿಟ್ಟಿನಲ್ಲಿ ಹಿಂದೆ ಕೆಲ ಪ್ರಯತ್ನಗಳು ನಡೆದವಾದರೂ, ಅಷ್ಟೊಂದು ಪರಿಣಾಮ ಬೀರಿರಲಿಲ್ಲ. ಮೀನುಗಾರಿಕೆಗೆ ಹೊಸ ಶಕ್ತಿ ತುಂಬುವುದಲ್ಲದೆ, ಮೀನುಗಾರರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಅವಶ್ಯವಾಗಿತ್ತು. ಕೇಂದ್ರ ಸರ್ಕಾರ ಇದಕ್ಕಾಗಿ ಮಹತ್ವದ ಹೆಜ್ಜೆ ಇರಿಸಿದ್ದು, ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಮತ್ತು ಕೃಷಿಕರಿಗೆ ಅಗತ್ಯ ಮಾಹಿತಿಗಳನ್ನು ನೀಡಲು ಇ-ಗೋಪಾಲ ಆಪ್ಗೆ ಚಾಲನೆ ನೀಡಿದ್ದಾರೆ. ಈ ಯೋಜನೆ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬರಲಿದ್ದು, 55 ಲಕ್ಷ ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆ ಇದೆ.
‘ಆತ್ಮನಿರ್ಭರ ಭಾರತ’ ಯೋಜನೆಯನ್ವಯ ದೇಶದ ರಕ್ಷಣೆ, ಉತ್ಪಾದನಾ ವಲಯ ಸೇರಿ ಹಲವು ಕ್ಷೇತ್ರಗಳನ್ನು ಸ್ವಾವಲಂಬಿಯಾಗಿಸುವ ಮಹತ್ವದ ಪ್ರಕ್ರಿಯೆ ಆರಂಭವಾಗಿದೆ. ಇದರ ಭಾಗವಾಗಿಯೇ ಮೀನುಗಾರಿಕೆಗೆ ಉತ್ತೇಜನ ನೀಡಲು ಮತ್ಸ್ಯ ಸಂಪದ ಯೋಜನೆಗೆ ಚಾಲನೆ ಸಿಕ್ಕಿದೆ. ಮುಂದಿನ ಐದು ವರ್ಷಗಳಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ -ಠಿ; 20,500 ಕೋಟಿ ಹೂಡಿಕೆಯಾಗುವ ನಿರೀಕ್ಷೆ ಇದೆ. ಇದು ಈ ವಲಯದ ಈವರೆಗಿನ ಅತಿದೊಡ್ಡ ಮೊತ್ತದ ಹೂಡಿಕೆಯಾಗಲಿದೆ. ಇದರಲ್ಲಿ ಸಾಗರ, ಒಳನಾಡು ಮೀನುಗಾರಿಕೆ ಮತ್ತು ಅಕ್ವಾಕಲ್ಚರ್ಗಾಗಿ -ಠಿ; 12,340 ಕೋಟಿ ಹಾಗೂ ಮೀನುಗಾರಿಕೆ ಮೂಲಸೌಕರ್ಯಕ್ಕಾಗಿ -ಠಿ; 7,710 ಕೋಟಿ ಹೂಡಿಕೆಯಾಗಲಿದೆ.
ಮೀನುಗಾರಿಕೆ ವಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಕೃಷಿ ವಲಯದ ನಿರುಪಯುಕ್ತ ವಸ್ತುಗಳನ್ನು ಮೀನುಗಾರಿಕೆಯಲ್ಲಿ ಬಳಸಲು ಚಿಂತನೆ ಮಾಡಲಾಗಿದೆ. ಇದರಿಂದ ಕೃಷಿ ತ್ಯಾಜ್ಯವೂ ತಗ್ಗಲಿದೆ. ಜಲಚರ ಸಾಕಣೆಗಾಗಿ ಕೊಳ, ಫಿನ್ಫಿಶ್ ಮೊಟ್ಟೆ ಕೇಂದ್ರಗಳು, ಹೊಸ ಕೊಳಗಳ ನಿರ್ಮಾಣ ನಡೆಯಲಿದೆ. ಅಲಂಕಾರಿಕ ಮೀನುಸಾಕಣೆ ಘಟಕಗಳು, ಶೈತ್ಯೀಕರಣ ವಾಹನಗಳು, ಐಸ್ಬಾಕ್ಸ್ ಸಹಿತ ವಾಹನಗಳಿಗೆ ನೆರವು ಸಿಗಲಿದ್ದು, ಮೀನು ಸಾಕಣೆಗಾರರಿಗೆ ಸಕಾಲದಲ್ಲಿ ಕೈಗೆಟಕುವ ದರದಲ್ಲಿ ಗುಣಮಟ್ಟದ ಮೀನು ಮೊಟ್ಟೆ ಲಭ್ಯತೆಗೆ ಆದ್ಯತೆ ನೀಡಲಾಗಿದೆ. 2024-25ರ ವೇಳೆಗೆ ಹೆಚ್ಚುವರಿ 70 ಲಕ್ಷ ಟನ್ ಮೀನುಗಾರಿಕೆ ಉತ್ಪನ್ನ ರಫ್ತು ಮಾಡುವ ಗುರಿ ಹೊಂದಲಾಗಿದೆ.
ಮೀನುಗಾರಿಕೆ ವಲಯಕ್ಕೆ ಸೀಮಿತವಾಗಿ ಇಂಥದ್ದೊಂದು ಯೋಜನೆ ಅಗತ್ಯವಿತ್ತು. ಈ ವಲಯಕ್ಕೆ ಸೂಕ್ತ ಮೂಲಸೌಕರ್ಯ ಕಲ್ಪಿಸಲೂ ಈ ಮೂಲಕ ನೆರವಾಗಲಿದೆ. ಮೀನುಗಾರರಿಗೆ ಸುಲಭವಾಗಿ, ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಲಿದೆ. ಸಮಗ್ರ ಅಭಿವೃದ್ಧಿಗೆ ನಮ್ಮಲ್ಲೇ ಇರುವ ಇಂಥ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಆರ್ಥಿಕತೆಗೂ, ಉದ್ಯೋಗಸೃಷ್ಟಿಗೂ ಪೂರಕ. ಮುಂದಿನ ದಿನಗಳಲ್ಲಿ ಯೋಜನೆ ಸಮರ್ಪಕ ಅನುಷ್ಠಾನ ಕಾಣುವಂತಾಗಲಿ.