

ಕರೊನಾ ಸೋಂಕು ಮತ್ತು ದಿಗ್ಬಂಧನ ತಂದೊಡ್ಡಿರುವ ಆರ್ಥಿಕ ಸಂಕಷ್ಟದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿ, ಶ್ರಮಿಕ, ರೈತ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸೇರಿ ಹಲವು ವಲಯಗಳಿಗೆ ನೆರವಾಗಿದೆ. ಇದರಿಂದ ಆರ್ಥಿಕ ಚಟುವಟಿಕೆಗಳು ಮತ್ತೆ ಸಾಮಾನ್ಯಗೊಳ್ಳಲು ನೆರವಾಗಲಿದೆ. ಈ ಹಿಂದೆ ಕೂಡ ಹಲವು ಚೇತರಿಕೆ ಕ್ರಮಗಳನ್ನು ಪ್ರಕಟಿಸಿದ್ದ ಆರ್ಬಿಐ ಶುಕ್ರವಾರ ಮತ್ತಷ್ಟು ಸೌಲಭ್ಯ, ವಿನಾಯ್ತಿಗಳನ್ನು ಘೋಷಿಸಿದೆ. ರೆಪೊ ದರದಲ್ಲಿ (ಆರ್ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) 40 ಅಂಶ ಕಡಿತ ಮಾಡಿ, ಶೇಕಡ 4ಕ್ಕೆ ನಿಗದಿ ಪಡಿಸಿದೆ. ರಿವರ್ಸ್ ರೆಪೊ ದರವನ್ನು ಶೇ.3.75ರಿಂದ ಶೇ.3.35ಕ್ಕೆ ಇಳಿಸಲಾಗಿದೆ. ಕಳೆದ ತಿಂಗಳಷ್ಟೇ ರೆಪೊ ದರದಲ್ಲಿ 75 ಅಂಶ ಕಡಿತ ಮಾಡಿ, ಶೇ.4.4ಕ್ಕೆ ನಿಗದಿ ಮಾಡಲಾಗಿತ್ತು. ಅದೇ ರೀತಿ ರಿವರ್ಸ್ ರೆಪೊ ದರ ಶೇ.025ರಷ್ಟು ಕಡಿತ ಮಾಡಿದ್ದರಿಂದ ಶೇ.3.75ಕ್ಕೆ ಇಳಿಸಲಾಗಿತ್ತು. ಅಲ್ಲದೆ, ಇಎಂಐ ಪಾವತಿಗೆ ನೀಡಿದ್ದ ಮೂರು ತಿಂಗಳ ಅವಕಾಶವನ್ನು ಮತ್ತೆ ಮೂರು ತಿಂಗಳಿಗೆ (ಆಗಸ್ಟ್ 31ರವರೆಗೆ) ವಿಸ್ತರಿಸಲಾಗಿದೆ. ಕರೊನಾ ಸಂಕಷ್ಟ ಹಿನ್ನೆಲೆಯಲ್ಲಿ ದೇಶದ ರಫ್ತು ಪ್ರಮಾಣ ಶೇ.60.5 ಕಡಿಮೆ ಆಗಿದೆ. ಕೈಗಾರಿಕೆ ಉತ್ಪಾದನೆಯೂ ಕುಸಿದಿದೆ.
ಹೀಗಾಗಿ, ಆರ್ಬಿಐ ಮಾರುಕಟ್ಟೆಗಳ ಕಾರ್ಯಾ ಚರಣೆ ಉತ್ತಮ ಪಡಿಸಲು, ರಾಜ್ಯ ಸರ್ಕಾರಗಳ ಹಣಕಾಸು ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ. ಅಲ್ಲದೆ, ಹಣದ ಹರಿವು ಹೆಚ್ಚಿಸಲು ಕ್ರಮ ಕೈಗೊಂಡಿದೆ. ಆರ್ಥಿಕ ಬಿಕ್ಕಟ್ಟು ನಿರ್ವಹಣೆಯಲ್ಲಿ ಈ ಕ್ರಮಗಳು ಸಹಕಾರಿ ಆಗಲಿವೆ. ಆದರೆ, ಆರ್ಬಿಐನ ಕ್ರಮಗಳು, ಅದು ಘೋಷಿಸಿದ ವಿನಾಯ್ತಿಗಳ ಲಾಭವನ್ನು ಬ್ಯಾಂಕುಗಳು ಗ್ರಾಹಕರಿಗೆ ತಲುಪಿಸುತ್ತಿಲ್ಲ ಎಂಬುದು ವಿಪರ್ಯಾಸದ ಸಂಗತಿ. ಕಾಲಕಾಲಕ್ಕೆ ಆರ್ಬಿಐ ಹಲವು ಸೌಲಭ್ಯ ಘೋಷಿಸಿದರೂ, ಬ್ಯಾಂಕುಗಳು ಮಾತ್ರ ಅದನ್ನು ಗ್ರಾಹಕರಿಗೆ ವರ್ಗಾಯಿಸಲು ನಿರಾಸಕ್ತಿ ತಳೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸಾಲಗಳ ಬಡ್ಡಿದರ ಕಡಿಮೆ ಆಗಬೇಕಿತ್ತು. ಕೆಲ ಬೆರಳೆಣಿಕೆ ಬ್ಯಾಂಕುಗಳನ್ನು ಹೊರತು ಪಡಿಸಿದರೆ ಉಳಿದವು ಬಡ್ಡಿದರ ತಗ್ಗಿಸಿಲ್ಲ. ಇಎಂಐ ಪಾವತಿಗೆ ನೀಡಿರುವ ವಿನಾಯ್ತಿ ಬಗ್ಗೆಯೂ ಬ್ಯಾಂಕುಗಳು ಅನವಶ್ಯಕ ಗೊಂದಲ ಮೂಡಿಸುತ್ತಿವೆ. ಆದ್ದರಿಂದ, ಆರ್ಬಿಐನ ಪ್ರಯತ್ನಗಳೆಲ್ಲ ಬ್ಯಾಂಕುಗಳ ನಿರಾಸಕ್ತಿ ಕಾರಣ ಫಲ ಕಾಣದಂತಾಗಿವೆ.
ಅದರಲ್ಲೂ, ನಮ್ಮಲ್ಲಿ ರೈತರು ಮತ್ತು ಕೆಳ ಮಧ್ಯಮ, ಮಧ್ಯಮ ವರ್ಗದವರು ಬಹುತೇಕ ಸಹಕಾರಿ ಬ್ಯಾಂಕುಗಳಿಂದಲೇ ಸಾಲಸೌಲಭ್ಯ ಪಡೆಯುತ್ತಾರೆ. ಆದರೆ, ಸಹಕಾರಿ ಬ್ಯಾಂಕುಗಳಿಗೆ ಸಂಬಂಧಿಸಿ ಯಾವುದೇ ವಿನಾಯ್ತಿಯನ್ನು ನೀಡಲಾಗಿಲ್ಲ. ಹಾಗಾಗಿ, ಹೆಚ್ಚಿನವರು ಮತ್ತೆ ಸಂಕಷ್ಟ ಎದುರಿಸುತ್ತ, ಸಾಲ ಮರುಪಾವತಿಗಾಗಿ ಪರದಾಡುತ್ತಿದ್ದಾರೆ. ಸರ್ಕಾರ ಮತ್ತು ಆರ್ಬಿಐ ಈ ಬಗ್ಗೆಯೂ ಗಮನ ಹರಿಸಬೇಕು. ಮುಖ್ಯವಾಗಿ, ಬ್ಯಾಂಕುಗಳು ಎಚ್ಚೆತ್ತುಕೊಂಡು ಈ ಕಷ್ಟಕಾಲದಲ್ಲಿ ಗ್ರಾಹಕರ ನೆರವಿಗೆ ಬರಬೇಕು, ಆ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವ ಪ್ರಕ್ರಿಯೆಯಲ್ಲಿ ಪ್ರಧಾನವಾದ ಪಾತ್ರ ವಹಿಸಬೇಕು.