ಸಂಪಾದಕೀಯ | ಸನ್ನದ್ಧ ಸ್ಥಿತಿಯಲ್ಲಿ ಭಾರತ

tejas
Published on

ಗಡಿಯಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಇದೆ. ಪೂರ್ವ ಲಡಾಖ್​ನ ಪ್ಯಾಂಗಾಂಗ್ ತ್ಸೊ ಸರೋವರದ ವ್ಯಾಪ್ತಿಯಲ್ಲಿ ಮೂರನೇ ಬಾರಿ ಒತ್ತುವರಿಗೆ ಯತ್ನಿಸಿದ ಚೀನಾ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಇದರಿಂದ ವಿಚಲಿತರಾದ ಆ ರಾಷ್ಟ್ರದ ಯೋಧರು ಭಾರತೀಯ ಯೋಧರಿಗೆ ಮುಖಾಮುಖಿಯಾಗಿ ಅತ್ಯಂತ ಸಮೀಪದಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜತೆಗೆ ಮಾರಕಾಸ್ತ್ರಗಳನ್ನು ಹೊಂದಿದ್ದರು. ಚೀನಾ ಸೇನೆ ಪದೇಪದೆ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್​ಎಸಿ) ಯಥಾಸ್ಥಿತಿ ಬದಲಿಸಲು ಪ್ರಯತ್ನ ಮಾಡುತ್ತಿರುವುದು, ಅದರ ಪುಂಡಾಟಿಕೆಗೆ ಸಾಕ್ಷಿ.

ಚೀನಾದ ಈ ಆಕ್ರಮಣಕಾರಿ ಧೋರಣೆಯಿಂದ ಎಚ್ಚೆತ್ತುಕೊಂಡಿರುವ ಭಾರತ ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಹೆಚ್ಚುವರಿಯಾಗಿ 7 ಸಾವಿರ ಸೈನಿಕರು ಮತ್ತು ಯುದ್ಧ ಟ್ಯಾಂಕ್​ಗಳನ್ನು ನಿಯೋಜಿಸಿದೆ. ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕವೇ ಭಾರತ ಚೀನಾವನ್ನು ಹಲವು ಆಯಾಮಗಳಿಂದ ಕಟ್ಟಿಹಾಕಲು ಆ ದೇಶದ ನೂರಾರು ಆಪ್​ಗಳನ್ನು ನಿಷೇಧಿಸಿತು, ಆಮದಿನ ಅವಲಂಬನೆ ತಗ್ಗಿಸಲು ಕ್ರಮ ಕೈಗೊಂಡಿತು. ಅಲ್ಲದೆ, ಗಡಿಯಲ್ಲಿ ಅಶಾಂತಿ ಸೃಷ್ಟಿಸುವುದನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಎಚ್ಚರಿಕೆಯನ್ನೂ ಡ್ರಾ್ಯಗನ್ ರಾಷ್ಟ್ರಕ್ಕೆ ರವಾನಿಸಿತು. ಆ ಬಳಿಕ ಮೆತ್ತಗಾದ ಚೀನಾ, ವಿವಾದಿತ ಪ್ರದೇಶದಿಂದ ಸೇನೆ ಹಿಂಪಡೆಯುವುದಾಗಿ ಹೇಳಿಕೊಂಡಿತು. ಆದರೆ, ಮಾತುಕತೆ ವೇಳೆ ಏರ್ಪಟ್ಟ ಒಪ್ಪಂದಗಳನ್ನು ಸಾರಾಸಗಟಾಗಿ ಉಲ್ಲಂಘಿಸುತ್ತಿರುವ ಅದು, ಮಧ್ಯಯುಗೀನ ಕಾಲದಂತೆ ಯಾವುದ್ಯಾವುದೋ ಅಸ್ತ್ರಗಳನ್ನು ಹಿಡಿದು, ಶಾಂತಿಗೆ ಕೊಳ್ಳಿ ಇಡುತ್ತಿರುವುದು ಹತಾಶೆಯನ್ನು ದರ್ಶಿಸುತ್ತಿದೆ. ಮತ್ತು ಅಂತಾರಾಷ್ಟ್ರೀಯ ವಲಯ ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಮತ್ತೊಂದೆಡೆ, ಪಾಕಿಸ್ತಾನ ಚೀನಾದ ಚಿತಾವಣೆಯಿಂದ ಕಾಶ್ಮೀರ ಗಡಿಯಲ್ಲಿ ಭಯೋತ್ಪಾದಕರನ್ನು ನುಸುಳಿಸಲು ಇನ್ನಿಲ್ಲದಂತೆ ಯತ್ನಿಸುತ್ತಿದೆ. ಹಲವು ಬಾರಿ ಮುಖಭಂಗ ಅನುಭವಿಸಿದರೂ ಪಾಠ ಕಲಿಯದ ಪಾಕ್, ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಹಾಗಂತ, ಭಾರತವೇನೂ ಕೈಕಟ್ಟಿ ಕುಳಿತುಕೊಂಡಿಲ್ಲ. ಶತ್ರುರಾಷ್ಟ್ರಗಳಿಗೆ ಸ್ಪಷ್ಟ ಸಂದೇಶ ರವಾನಿಸಲೆಂದೇ ರಕ್ಷಣಾ ವಲಯವನ್ನು ಸನ್ನದ್ಧಗೊಳಿಸಿ, ಸೇನೆಯನ್ನು ಮುಂಚೆಗಿಂತ ಹೆಚ್ಚು ಬಲಶಾಲಿಯಾಗಿಸಿದೆ.

ಕೆಲ ದಿನಗಳ ಹಿಂದೆಯಷ್ಟೇ ಭಾರತಕ್ಕೆ ಆಗಮಿಸಿದ್ದ ರಫೇಲ್ ಯುದ್ಧ ವಿಮಾನಗಳು ಇಂದು (ಗುರುವಾರ) ಅಧಿಕೃತವಾಗಿ ವಾಯುಪಡೆಗೆ ಸೇರ್ಪಡೆಗೊಳ್ಳುತ್ತಿರುವುದು, ವಿಶ್ವಾಸವೃದ್ಧಿಯ ಸಂಕೇತ. ಅಂಬಾಲಾ ವಾಯುನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್​ರೊಂದಿಗೆ ಫ್ರಾನ್ಸ್​ನ ರಕ್ಷಣಾ ಸಚಿವರೂ ಭಾಗವಹಿಸಲಿದ್ದಾರೆ. ಈ ವರ್ಷಾಂತ್ಯಕ್ಕೆ ಮತ್ತೆ ಐದು ರಫೇಲ್ ಯುದ್ಧವಿಮಾನಗಳು ಭಾರತಕ್ಕೆ ಬರಲಿದ್ದು, 2021ರೊಳಗೆ 36 ರಫೇಲ್ ವಾಯುಪಡೆಗೆ ಸಿಗಲಿವೆ. ರಕ್ಷಣಾ ವೆಚ್ಚ ಕೊಂಚ ಹೆಚ್ಚಿದರೂ, ದೇಶದ ಸಾರ್ವಭೌಮತೆಯನ್ನು ರಕ್ಷಿಸಲು, ವಿನಾಕಾರಣ ಗಡಿಯಲ್ಲಿ ಉಪಟಳ ಕೊಡುವವರನ್ನು ಎದುರಿಸಲು ಇಂಥ ಕ್ರಮ ಅಗತ್ಯವೇ ಆಗಿದೆ. ಈ ಮೂಲಕ ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಸನ್ನದ್ಧವಾಗಿದೆ ಎಂಬ ಸಂದೇಶ ರವಾನೆಯಾಗಿದ್ದು, ಗಡಿಯಲ್ಲಿ ಉದ್ವಿಗ್ನತೆ ತಗ್ಗಿಸುವುದು ಮೊದಲ ಆದ್ಯತೆ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net