ಸಂಪಾದಕೀಯ| ಸೂಕ್ತ ಚಿಕಿತ್ಸೆ ಸಿಗಲಿ

Corona Virus 26 May 20
Published on

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ ಹತ್ತು ಸಾವಿರದ ಸನಿಹಕ್ಕೆ ತಲುಪಿದೆ. ರೋಗಿಗಳ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಆಸ್ಪತ್ರೆಗಳು ಸಾಕಾಗುತ್ತಿಲ್ಲ. ಅದರಿಂದಾಗಿ, ಸೋಂಕು ಪತ್ತೆಯಾದ ಬಳಿಕವೂ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸುತ್ತಿರುವ ಅಥವಾ ವಿಳಂಬ ಮಾಡುತ್ತಿರುವ ನಿದರ್ಶನಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ ನಿಗದಿತ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡ 50 ಹಾಸಿಗೆಗಳು ಕರೊನಾ ರೋಗಿಗಳಿಗೇ ಮೀಸಲಿಡಬೇಕು ಎಂದು ಆದೇಶ ಹೊರಡಿಸಿರುವ ಜತೆಗೆ ಚಿಕಿತ್ಸಾ ವೆಚ್ಚವನ್ನೂ ನಿಗದಿ ಮಾಡಿದೆ. ಆರೋಗ್ಯ ಇಲಾಖೆ ಕಳುಹಿಸಿ ಕೊಡುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದಿನವೊಂದಕ್ಕೆ ಸಾಮಾನ್ಯ ವಾರ್ಡ್​ಗೆ 5, 200 ರೂ., ಎಚ್​ಡಿಯು 7 ಸಾವಿರ ರೂ., ಐಸಿಯು 8,500 ರೂ. ಮತ್ತು ವೆಂಟಿಲೇಟರ್ ಇರುವ ಐಸಿಯುವಿಗೆ 10 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ರೋಗಿಗಳೇ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಸಾಮಾನ್ಯ ವಾರ್ಡ್​ಗೆ 10 ಸಾವಿರ ರೂ., ಎಚ್​ಡಿಯು 12 ಸಾವಿರ ರೂ., ಐಸಿಯು 15 ಸಾವಿರ ರೂ., ವೆಂಟಿಲೇಟರ್ ಸಹಿತ ಐಸಿಯುಗೆ 25 ಸಾವಿರ ರೂಪಾಯಿಗಿಂತ ಅಧಿಕ ಶುಲ್ಕ ವಿಧಿಸುವಂತಿಲ್ಲ. ಬೇರೆ ಬೇರೆ ಕಡೆ ಭಿನ್ನ ಚಿಕಿತ್ಸಾ ದರ ವಿಧಿಸುವುದರಿಂದ ರೋಗಿಗಳು ಕಂಗಾಲಾಗಿದ್ದರು. ಏಕರೂಪದ ಚಿಕಿತ್ಸಾದರ ನಿಗದಿಯಿಂದ ಪ್ರಮುಖ ಸಮಸ್ಯೆಯೊಂದು ಬಗೆಹರಿದಂತಾಗಿದೆ. ಆದರೂ, ಹಲವು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ.

ಸರ್ಕಾರಿ ಆಸ್ಪತ್ರೆಗಳಲ್ಲಿ ಕೊವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಅಷ್ಟೇ ಅಲ್ಲದೆ ಆಸ್ಪತ್ರೆಯ ಪರಿಸರವೇ ಅಶುಚಿಯಿಂದ ಕೂಡಿ, ಸೋಂಕಿಗೆ ಆಹ್ವಾನ ನೀಡುವಂತಿವೆ ಎಂದು ರೋಗಿಗಳು ಕಷ್ಟ ಹೇಳಿಕೊಂಡ ಅನೇಕ ಪ್ರಕರಣಗಳು ವ್ಯವಸ್ಥೆಗೆ ಹಿಡಿದ ಕನ್ನಡಿ. ಕೆಲವೆಡೆಯಂತೂ, ರೋಗಿಗಳನ್ನು ಪ್ರಾಣಿಗಳ ಥರ ಕಾಣುತ್ತಿರುವುದು, ಮಾನವೀಯತೆಯೇ ತಲೆ ತಗ್ಗಿಸಿದಂತಾಗಿದೆ. ಮೂಲಸೌಕರ್ಯಗಳು ಇಲ್ಲದಿರುವುದು, ಆಹಾರ ಪೂರೈಕೆಯಲ್ಲಿ ಹತ್ತುಹಲವು ಸಮಸ್ಯೆಗಳು ಸಾಮಾನ್ಯ ಎಂಬಂತಾಗಿದೆ. ಒಂದೆಡೆ, ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದರೆ, ಸರ್ಕಾರಿ ಆಸ್ಪತ್ರೆಗಳ ಇಂಥ ನಡವಳಿಕೆ ಮತ್ತಷ್ಟು ಭೀತಿಯನ್ನು ಸೃಷ್ಟಿಸಿದೆ. ಬೆಂಗಳೂರಿನ ವಿಕ್ಟೋರಿಯಾ ಹಾಗೂ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಊಟ, ನೀರಿನ ಸಮಸ್ಯೆ ಆಗಿರುವ ಸಂಗತಿಯನ್ನು ಒಪ್ಪಿಕೊಂಡಿರುವ ಆರೋಗ್ಯ ಸಚಿವರು, ಅವ್ಯವಸ್ಥೆ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದು ಭರವಸೆಗೆ ಸೀಮಿತವಾಗಿ ಉಳಿಯಬಾರದು. ಬೆಂಗಳೂರು ಮಾತ್ರವಲ್ಲ ರಾಜ್ಯದ ಬಹುತೇಕ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ದಯನೀಯವಾಗಿದೆ. ರೋಗಿಗಳನ್ನು ನಿರ್ಲಕ್ಷಿಸುತ್ತಿರುವಂಥ ಘಟನೆಗಳು ಹೆಚ್ಚುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಲೋಪಗಳನ್ನು ಸರಿಪಡಿಸಬೇಕು. ಕರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜತೆಗೆ ಖಾಸಗಿ ಆಸ್ಪತ್ರೆಗಳೂ ಮಹತ್ವದ ಪಾತ್ರ ವಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net