

ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿಢೀರ್ ಆಗಿ ಏರಿಕೆ ಕಂಡಿದ್ದು, ಜನರು ಆತಂಕಿತಗೊಂಡಿದ್ದಾರೆ. ‘ಸೋಂಕು ಪ್ರಕರಣಗಳು ಹೆಚ್ಚಿದರೂ, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಆರೋಗ್ಯ ವ್ಯವಸ್ಥೆ ಸನ್ನದ್ಧವಾಗಿದೆ’ ಎಂದು ಹಲವು ಸಚಿವರು ಹೇಳಿಕೊಂಡೇ ಬಂದಿದ್ದರು. ಆದರೆ, ಪ್ರಕರಣಗಳ ಸಂಖ್ಯೆ ಹೆಚ್ಚಿದ ಕೆಲ ದಿನಗಳಲ್ಲೇ ವ್ಯವಸ್ಥೆಯ ಹುಳುಕುಗಳು ಒಂದೊಂದಾಗಿ ಹೊರಬಿದ್ದವಲ್ಲದೆ, ಸಮರ್ಪಕ ಸಿದ್ಧತೆ, ಸೌಕರ್ಯ ಯಾವುದೂ ಇಲ್ಲ ಎಂಬುದು ಸ್ಪಷ್ಟವಾಯಿತು. ಕೋವಿಡ್ ದೃಢಪಟ್ಟ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾದರೆ, ಆಂಬುಲೆನ್ಸ್ ವಿಳಂಬದಿಂದ ರೋಗಿಯೋರ್ವರು ಪ್ರಾಣ ಕಳೆದುಕೊಂಡ ದುರದೃಷ್ಟಕರ ಘಟನೆಯೂ ನಡೆಯಿತು.
ಕರೊನಾ ನಿಯಂತ್ರಣಕ್ಕೆ ಸರ್ಕಾರದಿಂದ ಮತ್ತಷ್ಟು ಕ್ರಮ
ಮತ್ತೊಂದೆಡೆ, ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವೇಳೆಯೂ ಅಮಾನವೀಯ ವರ್ತನೆ ಕಂಡುಬಂದವು. ಇಷ್ಟೆಲ್ಲ ಅವ್ಯವಸ್ಥೆಗಳ ದರ್ಶನ ಆಗುತ್ತಿದ್ದರೂ ಕರೊನಾ ನಿರ್ವಹಣೆ ವಿಚಾರದಲ್ಲಿ ಸಚಿವರ ನಡುವಿನ ಸಮನ್ವಯ ಕೊರತೆ, ಅಧಿಕಾರಿಗಳ ಅಸಹಕಾರ ಮುಂದುವರಿದು ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಈ ಮಧ್ಯೆ ಮಂಗಳವಾರ ಕೇಂದ್ರ ತಂಡ ಬೆಂಗಳೂರಿಗೆ ಭೇಟಿ ನೀಡಿ, ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಿ ಕೆಲವು ಎಚ್ಚರಿಕೆಗಳನ್ನು ನೀಡಿತು. ಹಾಗಾಗಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದು, ಕರೊನಾ ನಿರ್ವಹಣೆ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು ಮುಂದಾಗಿದ್ದಾರೆ.
ಬುಧವಾರ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿಗಳು, ಸಮನ್ವಯ ಸರಿಪಡಿಸಿಕೊಳ್ಳಲು ಮತ್ತು ವಾರ್ ರೂಂಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. ಕರೊನಾ ಭಯದಿಂದ ಎಷ್ಟೋ ಜನರು ಬೆಂಗಳೂರು ಬಿಟ್ಟು ಹಳ್ಳಿಗಳಿಗೆ ಮರಳುತ್ತಿರುವ ಸಂಗತಿಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ ತಳೆಯಲಾಗಿದ್ದು, ಕರೊನಾ ನಿಯಂತ್ರಣಕ್ಕಾಗಿ ಬೆಂಗಳೂರನ್ನು ಎಂಟು ವಲಯಗಳನ್ನಾಗಿ ರೂಪಿಸಿ ಎಂಟು ಸಚಿವರಿಗೆ ಉಸ್ತುವಾರಿ ನೀಡಲಾಗಿದೆ.
ಅಲ್ಲದೆ, ಬೆಂಗಳೂರು ಹೊರವಲಯದಲ್ಲಿ ನಿರ್ವಿುಸಲಾಗುತ್ತಿರುವ 10 ಸಾವಿರ ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ, ಸಿದ್ಧತೆ ಪರಿಶೀಲಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಈ ಕೇಂದ್ರ ಒಂದು ವಾರದೊಳಗೆ ಸೇವೆಗೆ ಲಭ್ಯವಾಗಲಿದೆ, 2200 ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದಿದ್ದಾರೆ. ‘ಕರೊನಾ ವಿರುದ್ಧ ಒಟ್ಟಾಗಿ ಹೋರಾಡಬೇಕಿದೆ. ಜನರು ವಿಶ್ವಾಸ ಕಳೆದುಕೊಳ್ಳಬಾರದು, ಜನರ ಆರೋಗ್ಯ ಕಾಪಾಡುವಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ’ ಎಂದೂ ಹೇಳಿದ್ದಾರೆ. ಹೆಚ್ಚುತ್ತಿರುವ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ಜನರು ಭಯಭೀತಗೊಂಡಿರುವಾಗ ಇಂಥದ್ದೊಂದು ವಿಶ್ವಾಸ ಮೂಡಿಸುವ ಪ್ರಯತ್ನ ಅಗತ್ಯವಾಗಿತ್ತು. ಹಾಗಂತ ಸವಾಲುಗಳು ಮುಗಿದಿಲ್ಲ. ವ್ಯವಸ್ಥೆಯನ್ನು ಸರಿಪಡಿಸುವ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡುವ ಹೊಣೆಗಾರಿಕೆ ಆಯಾ ಸಚಿವರ ಮೇಲಿದೆ. ಸರ್ಕಾರದ ಘೋಷಣೆ, ಆಶ್ವಾಸನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ, ಆ ಮೂಲಕ ಮತ್ತೆ ಜನರಲ್ಲಿ ವಿಶ್ವಾಸ ಮೂಡಿಸುವ ಜವಾಬ್ದಾರಿ ಸಚಿವರು ಮತ್ತು ಅಧಿಕಾರಗಳ ಮೇಲಿದೆ.