

ಪಾಲ್ಗರ್: ನಿಮ್ಮ ಹೆಸರಿನಲ್ಲಿ 2 ಎಕರೆ ಜಮೀನನ್ನು ಇಂಡಸ್ಟ್ರಿಯಲ್ ಏರಿಯಾದಲ್ಲಿ ಖರೀದಿಸಬೇಕೆಂದಿದ್ದೇವೆ. ನೀವು ದುಡ್ಡು ಕೊಟ್ರೆ ಖರೀದಿಸುವುದಕ್ಕೆ ಅನುಕೂಲ ಆಗುತ್ತೆ ಅಂತ ಯಾರಾದ್ರೂ ಹೇಳಿದ್ರೆ ಏನ್ ಮಾಡ್ತೀರೋ ಗೊತ್ತಿಲ್ಲ. ಪಾಪ ಈ ಮಹಿಳೆ ಬರೋಬ್ಬರಿ 57 ಲಕ್ಷ ರೂಪಾಯಿ ಕೊಟ್ಟೇ ಬಿಟ್ರು!
ಜಮೀನು ಸಿಕ್ತಾ ಕೇಳಿದ್ರೆ ಇಲ್ಲ!. ಹೀಗೆ ವಂಚನೆಗೊಳಗಾದ ಮಹಿಳೆ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಸಾಯಿಯ ನಿವಾಸಿ. ವಯಸ್ಸು 69. ಪೊಲೀಸರು ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿಲ್ಲ. ಆದರೆ ವಂಚನೆಗೊಳಗಾದ ರೀತಿಯನ್ನು ಬಹಿರಂಗಪಡಿಸಿದ್ದಾರೆ. ಫೇಸ್ಬುಕ್ ಫ್ರೆಂಡ್ಶಿಪ್ನ ಕಥೆ-ವ್ಯಥೆಯ ಸರಣಿಯಲ್ಲಿ ಇದೂ ಒಂದು!
ಸಂತ್ರಸ್ತೆ ಕೊಟ್ಟ ದೂರಿನ ಪ್ರಕಾರ, ಬ್ರಿಟನ್ನ ಲಿಯೋ ಜೋವಹಾ ಎಂಬಾತ ಈ ಮಹಿಳೆಗೆ ಫೇಸ್ಬುಕ್ ಫ್ರೆಂಡ್. ತಾನು ಸ್ಕಾಟ್ಲೆಂಡ್ನ ಪ್ರಜೆಯಾಗಿದ್ದು, ಬ್ರಟಿಷ್ ಏರ್ಲೈನ್ಸ್ನ ಪೈಲಟ್ ಎಂದು ಪರಿಚಯಿಸಿಕೊಂಡಿದ್ದ. ಪರಿಚಯ ಸಲುಗೆಯಾಗಿ ಮಾರ್ಪಟ್ಟು, ಈಗ ಕೆಲವು ದಿನಗಳ ಹಿಂದೆ ಮಹಿಳೆಗೆ ಕರೆಮಾಡಿದ ಲಿಯೋ, ಎರಡು ಎಕರೆ ಜಮೀನು ನಿಮ್ಮ ಹೆಸರಿಗೆ ಖರೀದಿ ಮಾಡಬೇಕೂ ಅಂತ ಇದ್ದೇನೆ. ಏನಂತೀರಿ? ಅಂತ ಕೇಳಿದ್ದಾನೆ.
ಜಮೀನಿನ ಆಸೆಗೆ, ಓಹೋ ಹೌದಾ.. ಎಲ್ಲಿ? ಎಂದು ಮರುಪ್ರಶ್ನೆ ಹಾಕಿದ್ದಾಳೆ ಮಹಿಳೆ.
ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಂತ ಉತ್ತರಿಸಿದ ಲಿಯೋ, ಸ್ವಲ್ಪ ಅಮೌಂಟ್ ಕಳುಹಿಸಿದ್ರೆ ಜಮೀನು ಖರೀದಿ ಕೆಲಸ ಸುಗಮವಾದೀತು ಎಂದು ಹೇಳಿದ್ದಾನೆ. ಅದನ್ನು ನಂಬಿದ ಮಹಿಳೆ, ಇನ್ನಷ್ಟು ಕೆದಕಿದಾಗ ವಿವರ ತಿಳಿಸುವುದಾಗಿ ಹೇಳಿದ ಲಿಯೋ.
ಅದಾಗಿ ಸ್ವಲ್ಪ ಹೊತ್ತಿನ ಬಳಿಕ ಜೋಶಿಲಾ ಎಂಬ ಹೆಸರಿನವಳೊಬ್ಬಳಿಂದ ಈ ಮಹಿಳೆಗೆ ಕರೆ ಬಂದಿದೆ. ನಿಮಗೊಂದು ಕೊರಿಯರ್ ಬಂದಿದೆ. ಏರ್ಪೋರ್ಟ್ನಲ್ಲಿದೆ. ಸರ್ಕಾರದ ತೆರಿಗೆ ಸ್ವಲ್ಪ ಹೆಚ್ಚಿದ್ದು ಪಾವತಿಸಿದರೆ ಕೊರಿಯರ್ ಕಳುಹಿಸುವುದಾಗಿ ತಿಳಿಸಿದ್ದಾಳೆ. ಕಾಲ ಕಾಲಕ್ಕೆ ಬೇರೆ ಬೇರೆ ನೆಪವೊಡ್ಡಿ ಆ ಜೋಶಿಲಾ ಈ ಮಹಿಳೆ ಕರೆ ಮಾಡಿ ಬೇರೆ ಬೇರೆ ಖಾತೆಗಳಿಗೆ ಹಣ ಜಮೆ ಮಾಡಿಸಿದ್ದಾಳೆ. ಹೀಗೆ ಕಂತು ಕಂತಾಗಿ ಮಹಾರಾಷ್ಟ್ರದ ಈ ಮಹಿಳೆ ವಿವಿಧ ಖಾತೆಗಳಿಗೆ ಜಮೆಮಾಡಿದ ಹಣದ ಮೊತ್ತ 57.36 ಲಕ್ಷ ರೂಪಾಯಿ ಆಗಿತ್ತು.
ಇಷ್ಟಾದ ಬಳಿಕ ಮಹಿಳೆಗೆ ಸಂದೇಹ ಮೂಡಿ ಲಿಯೋ ಜೋವಹಾ ಮತ್ತು ಜೋಶಿಲಾಗೆ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಫಲಕೊಡಲಿಲ್ಲ. ಆಗ ತಾನು ಮೋಸ ಹೋಗಿರುವ ವಿಚಾರ ಅರ್ಥವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪಾಲ್ಗರ್ ಪೊಲೀಸ್ ವಕ್ತಾರ ಸಚಿನ್ ನಾವಡ್ಕರ್ ತಿಳಿಸಿದ್ದಾರೆ. (ಏಜೆನ್ಸೀಸ್)