ಸೌಹಾರ್ದ ಮುಖ್ಯ ಆದರ್ಶದ ಅನುಸರಣೆಯಾಗಲಿ

co-operation
Published on

ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆ ವಿಚಾರ ವಿವಾದದ ಸ್ವರೂಪ ಪಡೆದುಕೊಂಡು, ರಾಜಕೀಯ ಬಣ್ಣವನ್ನೂ ಪಡೆದು ಅಂತೂ ಸುಖಾಂತ್ಯ ಕಂಡಿದೆ. ಆ ಗ್ರಾಮದ ವೃತ್ತದಲ್ಲಿ ರಾಯಣ್ಣನ ಪ್ರತಿಮೆ ಹಾಗೂ ವೃತ್ತಕ್ಕೆ ಶಿವಾಜಿ ಹೆಸರು ಇಡುವುದಕ್ಕೆ ಶುಕ್ರವಾರ ಸಂಜೆ ನಡೆದ ಶಾಂತಿಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಗೊಂದಲದ ಪರಿಸ್ಥಿತಿ ತಿಳಿಯಾಗು ವಂತಾಗಿದೆ. ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಬೇಕು ಎಂಬ ಬೇಡಿಕೆ ಹೊಸದೇನಲ್ಲ. ಹಲವು ವರ್ಷಗಳಿಂದ ಇಂಥ ಆಗ್ರಹ ಇದೆ.

ಛತ್ರಪತಿ ಶಿವಾಜಿ ಮತ್ತು ಸಂಗೊಳ್ಳಿ ರಾಯಣ್ಣ ಇಬ್ಬರೂ ಅದಮ್ಯ ದೇಶಭಕ್ತರೇ. ರಾಷ್ಟ್ರಕ್ಕಾಗಿ ಅವರು ನಡೆಸಿದ ಹೋರಾಟ, ತ್ಯಾಗದ ಮೌಲ್ಯಗಳು ಎಂದಿಗೂ ಪ್ರೇರಣಾದಾಯಿ. ಇಂಥ ರಾಷ್ಟ್ರಭಕ್ತರು, ಸ್ವಾತಂತ್ರ್ಯ ಹೋರಾಟಗಾರರ ವಿಷಯದಲ್ಲೂ ತಾರತಮ್ಯ ಅಥವಾ ವಿವಾದ ಸೃಷ್ಟಿಸುವುದು ಸರಿಯಾದ ಕ್ರಮವಲ್ಲ. ಇದೆಲ್ಲವೂ ನಮ್ಮನ್ನು ನಾವು ಅವಲೋಕಿಸಿಕೊಳ್ಳಬೇಕಾದ ಹೊತ್ತು. ಮಹಾಪುರುಷರು, ರಾಷ್ಟ್ರಭಕ್ತರ ಜೀವನಾದರ್ಶ, ಇತರ ಮೌಲ್ಯಗಳನ್ನು ವರ್ತಮಾನದ ಕಾಲಘಟ್ಟ ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದೆ ಎಂದು ಯೋಚಿಸಬೇಕಾದ ಅಗತ್ಯವಿದೆ. ಹೀಗಿರುವಾಗ ವೃಥಾ ವಿವಾದಗಳು ಸೃಷ್ಟಿಯಾಗಬಾರದು.

ಈಗಾಗಲೇ ಸಮಾಜ ಹಲವು ಗಂಭೀರ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದೆ. ಕರೊನಾ ಸೋಂಕಿನ ಹಾವಳಿ ಮತ್ತು ಅದು ತಂದೊಡ್ಡಿರುವ ಆರ್ಥಿಕ ಹಿನ್ನಡೆ ವಿಪರೀತ ತಲ್ಲಣಕ್ಕೆ ಕಾರಣವಾಗಿದೆ. ಈ ಸಮಸ್ಯೆಯಿಂದ ಹೊರಬರಲು ಸಾಮೂಹಿಕ ಪ್ರಯತ್ನ ನಡೆಯಬೇಕಿದೆ. ಅದೇನೆ ಇರಲಿ. ಸೌಹಾರ್ದ,ಏಕತೆಯ ಭಾವವನ್ನು ಗಟ್ಟಿಗೊಳಿಸಿ, ಮಹಾಪುರುಷರ ಆದರ್ಶದ ಬೆಳಕಿನಡಿಯಲ್ಲಿ ಉತ್ತಮ ಚಿಂತನೆ ಮತ್ತು ಮೌಲ್ಯಗಳ ಹಾದಿಯಲ್ಲಿ ಸಾಗಬೇಕೆ ಹೊರತು, ವಿವಾದವನ್ನು ದೊಡ್ಡದಾಗಿಸಿ, ಅದಕ್ಕೆ ರಾಜಕೀಯ ಸ್ವರೂಪ ಕೊಡುವುದು ಬೇಡ.

ದೇಶಭಕ್ತರ ಬಗೆಗಿನ ಗೌರವ ಇನ್ನಷ್ಟು ಹೆಚ್ಚುವಂತೆ ಮಾದರಿಯ ನಡೆಯನ್ನು ಅನುಸರಿಸಬೇಕಿದೆ. ಆ.27ರ ಮಧ್ಯರಾತ್ರಿ ಪೀರನವಾಡಿ ಗ್ರಾಮದಲ್ಲಿ ಕನ್ನಡಪರ ಕಾರ್ಯಕರ್ತರು, ರಾಯಣ್ಣನ ಅಭಿಮಾನಿಗಳು ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಿ, ವಿಜಯೋತ್ಸವ ಆಚರಿಸಿದ್ದಾರೆ. ಇದಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ವಿರೋಧ ವ್ಯಕ್ತಪಡಿಸಿ, ರಾಜಕೀಯ ಬಣ್ಣ ಬಳಿಯಲು ಮುಂದಾಗಿತ್ತು. ಅದೇ ಸ್ಥಳದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪಿಸಲು ಕೆಲ ಯುವಕರು ಯತ್ನಿಸಿದಾಗ ಪೊಲೀಸರು ಅವಕಾಶ ನೀಡಲಿಲ್ಲ. ಈ ಎಲ್ಲ ಬೆಳವಣಿಗೆಗಳನ್ನು ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ‘ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬೇಡಿ. ಶಾಂತಿಯುತವಾಗಿ ಪರಿಸ್ಥಿತಿ ನಿಭಾಯಿಸಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಆ ಪ್ರಕಾರ ಶಾಂತಿಸಭೆ ನಡೆದದ್ದು ಸಮಾಧಾನಕರ ಬೆಳವಣಿಗೆ.

‘ಶಿವಾಜಿ ಮತ್ತು ರಾಯಣ್ಣ ಇಬ್ಬರೂ ದೇಶಭಕ್ತರು. ಅವರ ಗೌರವ ಕಾಪಾಡುವ ಕೆಲಸ ಮಾಡುತ್ತೇವೆ’ ಎಂದು ಗೃಹ ಸಚಿವರು ಆಶ್ವಾಸನೆ ನೀಡಿದ್ದಾರೆ. ಅಷ್ಟಕ್ಕೂ, ಪ್ರತಿಮೆ ಸ್ಥಾಪನೆಯಷ್ಟೇ ಸಾಲದು. ಅಂಥ ದೇಶಭಕ್ತರ ತತ್ತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಒಳ್ಳೆಯ ನಾಗರಿಕರಾಗಿ, ಸಮಾಜದ ಆಸ್ತಿಯಾಗಿ ಬಾಳುವುದು ಮುಖ್ಯ. ಈ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂಬುದನ್ನು ಮರೆಯದಿರೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net