

ಸರ್ಕಾರಿ ಆಸ್ಪತ್ರೆಗಳ ಸೇವಾ ದರವನ್ನು ರಾಜ್ಯ ಸರ್ಕಾರ ಶೇಕಡ 15ರಿಂದ 20ರಷ್ಟು ಹೆಚ್ಚಿಸಿದೆ. ಇದರಿಂದ ಬೆಲೆಯೇರಿಕೆಯಿಂದ ತತ್ತರಿಸಿರುವ, ಆರೋಗ್ಯ ಸೌಲಭ್ಯಗಳಿಗಾಗಿ ಪರಿತಪಿಸುತ್ತಿರುವ ಶ್ರೀಸಾಮಾನ್ಯರ ಗಾಯಕ್ಕೆ ಬರೆ ಎಳೆದಂತಾಗಿದೆ. ಹೊರರೋಗಿಗಳ ಸೇವೆ, ಒಳರೋಗಿಗಳ ದಾಖಲಾತಿ, ರಕ್ತ ಪರೀಕ್ಷೆ, ವಾರ್ಡ್ ಶುಲ್ಕ, ತ್ಯಾಜ್ಯ ನಿರ್ವಹಣೆ ದರ ಸೇರಿದಂತೆ ವಿವಿಧ ಸೇವೆಗಳ ಶುಲ್ಕವನ್ನು ಹೆಚ್ಚಿಸಲಾಗಿದೆ. ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಆರೋಗ್ಯ ಸಚಿವರು, ‘ಈ ಹಣ ಅನ್ಯ ಕಾರ್ಯಗಳಿಗೆ ಹೋಗದೆ ಆಸ್ಪತ್ರೆಗಳಿಗೇ ಬಳಕೆಯಾಗಲಿದೆ’ ಎಂದಿದ್ದಾರೆ. ಅಲ್ಲದೆ, ಸರ್ಕಾರದ ಗ್ಯಾರಂಟಿ ಯೋಜನೆಗಳಿಗೂ, ಈ ಶುಲ್ಕ ಹೆಚ್ಚಳಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.
ಒಂದೆಡೆ ರಾಜ್ಯದ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದಾಗಿರುವ ಬೆನ್ನಲ್ಲೇ, ಆಸ್ಪತ್ರೆಗಳಲ್ಲಿನ ಸೇವಾ ಶುಲ್ಕ ಹೆಚ್ಚಳವಾಗಿರುವುದು ಜನರನ್ನು ಕಂಗಾಲಾಗಿಸಿದೆ. ಶುಲ್ಕ ಹೆಚ್ಚಳದಿಂದಾದರೂ, ಜನರಿಗೆ ಉತ್ತಮ ಚಿಕಿತ್ಸೆ ದೊರೆಯುತ್ತದೆಯೇ ಎಂಬ ಪ್ರಶ್ನೆಗೆ ಆಶಾದಾಯಕ ಉತ್ತರವಿಲ್ಲ. ಏಕೆಂದರೆ, ರಾಜ್ಯದ ಹಲವು ಸರ್ಕಾರಿ ಆಸ್ಪತ್ರೆಗಳೇ ರೋಗಗ್ರಸ್ತವಾಗಿದ್ದು, ಕಾಯಕಲ್ಪಕ್ಕಾಗಿ ಕಾದಿವೆ. ಚಿಕಿತ್ಸೆಗಾಗಿ ಜನರ ಪರದಾಟ ಮುಂದುವರಿದಿದೆ. ಬಡವರು ಮತ್ತು ಗ್ರಾಮೀಣ ಭಾಗದ ಜನರು ಕೂಡ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಆದರೆ, ಅರ್ಥಿಕವಾಗಿ ದುರ್ಬಲವಾಗಿ ಇರುವವರ ಗತಿ ಏನು? ಜನರ ಕಲ್ಯಾಣದ ಬಗ್ಗೆ ಪುಂಖಾನುಪುಂಖ ಆಶ್ವಾಸನೆಗಳನ್ನು ನೀಡುವ ಜನನಾಯಕರು ಈ ಕುರಿತಂತೆ ಶ್ರೀಸಾಮಾನ್ಯರಿಗೆ ಪೂರಕವಾದ ನೀತಿಗಳನ್ನು ತಳೆಯಬೇಕು.
ಮೂಲಭೂತ ಸೌಕರ್ಯ ಕೊರತೆ, ಔಷಧ, ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಸರ್ಕಾರಿ ಆಸ್ಪತ್ರೆಗಳ ಸುಧಾರಣೆ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಈಗ ವಿವಿಧ ಆರೋಗ್ಯ ಸೇವೆಗಳ ಶುಲ್ಕವನ್ನು ಹೆಚ್ಚಿಸಲಾಗಿದೆ. ಎಷ್ಟೋ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಔಷಧಗಳನ್ನು ಹೊರಗಡೆ ಬರೆದು ಕಳಿಸಲಾಗುತ್ತದೆ. ಔಷಧ ಕೊರತೆಯ ಸಮಸ್ಯೆಯಂತೂ ತೀವ್ರವಾಗಿದ್ದು, ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರೆ, ಜನಸಾಮಾನ್ಯರು ಬೇರೆ ಮಾರ್ಗವಿಲ್ಲದೆ ದುಬಾರಿ ಬೆಲೆ ತೆತ್ತು ಔಷಧ ಖರೀದಿಸುವಂತಾಗಿದೆ. ತಾಲೂಕು, ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಿಟ್ಟರೆ ಸಮಸ್ಯೆಯ ಸರಮಾಲೆಯೇ ತೆರೆದುಕೊಳ್ಳುತ್ತದೆ. ನೈರ್ಮಲ್ಯದ ಕೊರತೆ, ಸಿಬ್ಬಂದಿ ಇಲ್ಲದಿರುವುದು, ಕೆಲವೆಡೆ ಇದ್ದರೂ ರೋಗಿಗಳಿಗೆ ಸರಿಯಾಗಿ ಸ್ಪಂದಿಸದೆ ಇರುವುದು ಹೀಗೆ ಹಲವು ಅಪಸವ್ಯಗಳು ಕಂಡುಬರುತ್ತವೆ. ಜನರು ನಿರ್ಭೀತಿಯಿಂದ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ಆಯ್ಕೆ ಮಾಡಿಕೊಳ್ಳುವ ಸ್ಥಿತಿ ಸೃಷ್ಟಿಯಾಗಬೇಕು. ಬಡವರು, ಮಧ್ಯಮ ವರ್ಗದವರೇ ಹೆಚ್ಚಾಗಿ ಬರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಏರಿಕೆ ಮಾಡಿದರಷ್ಟೆ ಸಾಲದು, ಗುಣಮಟ್ಟದ ಚಿಕಿತ್ಸೆಯೂ ದೊರೆಯುವಂತಾಗಬೇಕು. ಸರ್ಕಾರ ಒಂದು ಕೈಯಿಂದ ಸೌಲಭ್ಯ ಕೊಟ್ಟಂತೆ ಮಾಡಿ, ಮತ್ತೊಂದು ಕೈಯಿಂದ ಕಸಿದುಕೊಳ್ಳುವಂತೆ ವರ್ತಿಸುವುದು ಸೂಕ್ತವಲ್ಲ. ಪ್ರತಿನಿತ್ಯ ಲಕ್ಷಾಂತರ ರೋಗಿಗಳು ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುತ್ತಾರೆ. ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲಾಗದೆ ಎಷ್ಟೋ ಕುಟುಂಬಗಳು ಆರ್ಥಿಕವಾಗಿ ಶೋಚನೀಯ ಸ್ಥಿತಿಗೆ ತಲುಪಿವೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳು ಭರವಸೆ ಮೂಡಿಸುವಂತಾಗಬೇಕೆ ಹೊರತು ಜನರ ಮೇಲೆ ಮತ್ತಷ್ಟು ಹೊರೆ ಹೊರಿಸಬಾರದು.