

ಪರಿಸರ ಸಂರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿವೆ. ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ ವರದಿಯನ್ನು ಗಮನಿಸಿದರೆ ಸರ್ಕಾರಗಳ ಈ ಯೋಜನೆಗಳು ಎಷ್ಟರಮಟ್ಟಿಗೆ ಫಲ ನೀಡಿವೆ ಎಂಬುದು ವೇದ್ಯವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಾಲಿನ್ಯ ಮಟ್ಟ ಮೀರಿದ ಪರಿಣಾಮ ಭಾರತೀಯರ ಸರಾಸರಿ ಜೀವಿತಾವಧಿ 5.3 ವರ್ಷ ಕಡಿಮೆಯಾಗಲಿದೆ ಎಂದು ವರದಿ ತಿಳಿಸಿದೆ.
ವಿಶ್ವದಲ್ಲೇ ಅತಿ ಹೆಚ್ಚು ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿ ಅಗ್ರಸ್ಥಾನದಲ್ಲಿದೆ. ಕರ್ನಾಟಕ ರಾಜ್ಯವನ್ನು ಪರಿಗಣಿಸಿದರೆ ರಾಜ್ಯದ ರಾಜಧಾನಿ ಬೆಂಗಳೂರು ಕೂಡ ಅತಿ ಹೆಚ್ಚು ಕಲುಷಿತವಾಗುತ್ತಿದೆ. ಪರಿಸರ ಮಾಲಿನ್ಯ ಈ ಪ್ರಮಾಣದಲ್ಲಿ ಹೆಚ್ಚಾಗಲು ಏನು ಕಾರಣ ಎಂಬುದನ್ನು ಪತ್ತೆ ಮಾಡಲು ಸಂಶೋಧನೆಯ ಅಗತ್ಯವೇನೂ ಬೀಳದು. ಮಾಲಿನ್ಯ ಕೊಡುಗೆಯ ಭಾಗೀದಾರರು ಯಾರು ಎಂಬುದು ನಮಗೂ ಗೊತ್ತಿದೆ ಸರ್ಕಾರಗಳಿಗೂ ತಿಳಿದಿದೆ.
ಅರಣ್ಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ತದ್ವಿರುದ್ಧವಾಗಿ ಉದ್ದಿಮೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಕೈಗಾರಿಕೆಗಳು ಹೊರಸೂಸುವ ಇಂಗಾಲದ ಪ್ರಮಾಣ ಹೆಚ್ಚಾಗುತ್ತಿದೆ. ಕೃಷಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿಕೊಳ್ಳುವ ಬದಲಿಗೆ ಸುಡುವ ಪ್ರವೃತ್ತಿ ಹೆಚ್ಚುತ್ತಿದೆ. ಕೃಷಿ ತ್ಯಾಜ್ಯ ಮಾತ್ರ ಅಲ್ಲ, ಇತರ ಹಲವು ಸ್ವರೂಪದ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲಿಗೆ ಸುಟ್ಟು ನಾಶಪಡಿಸುವ ಸುಲಭ ಮಾರ್ಗವನ್ನೇ ಬಹುತೇಕರು ಪಾಲನೆ ಮಾಡುತ್ತಿದ್ದಾರೆ.
ಪಂಜಾಬ್ ರಾಜ್ಯದಲ್ಲಿ ಗದ್ದೆಗಳಲ್ಲಿನ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕುವುದು ಸಾಮಾನ್ಯವಾಗುತ್ತಿದ್ದು, ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ದೆಹಲಿ ನಿವಾಸಿಗಳಿಗೆ ಇದರ ಬಿಸಿ ಪ್ರತಿ ವರ್ಷದಂತೆ ಈ ವರ್ಷವೂ ತಟ್ಟಿದೆ. ದಟ್ಟ ಹೊಗೆ ಕಾರಣ ಉಸಿರಾಟದ ಸಮಸ್ಯೆ ಉಂಟಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಪರಿಸ್ಥಿತಿ ರಾಷ್ಟ್ರ ರಾಜಧಾನಿಗೆ ಬಂದೊದಗಿದೆ. ಜೀವನಮಟ್ಟ ಸುಧಾರಣೆಯಾದಂತೆ ವಾಹನಗಳ ಸಂಖ್ಯೆಯೂ ಹೆಚ್ಚುವುದು ಸಹಜವೇ ಸರಿ. ಹೀಗಾಗಿ ವಾಹನಗಳ ಸಂಖ್ಯೆಯೂ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇದು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ವರ್ಷ ರಸ್ತೆಗೆ ಬರುವ ಹೊಸ ವಾಹನಗಳ ಸಂಖ್ಯೆ ಮತ್ತು ಅವುಗಳು ಮಾಲಿನ್ಯಕ್ಕೆ ನೀಡುವ ಕೊಡುಗೆ ನಿರ್ಲಕ್ಷ್ಯ ಮಾಡುವಂಥದ್ದೇನೂ ಅಲ್ಲ.
ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಮಾಲಿನ್ಯ ಸಹಜ. ಆದರೆ ಸರ್ಕಾರಗಳು ನಿಗದಿಪಡಿಸುವ ಮಾಲಿನ್ಯ ನಿಯಂತ್ರಣ ಕ್ರಮಗಳು ಪರಿಣಾಮಕಾರಿಯಾಗದಿದ್ದಾಗ ಉದ್ದೇಶ ವಿಫಲವಾಗುತ್ತದೆ. ಚಿಕಾಗೋ ವಿವಿಯ ಸಂಶೋಧನಾ ವರದಿಯನ್ನು ಎಚ್ಚರಿಕೆಯ ಗಂಟೆ ಎಂದು ಭಾವಿಸಿ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕಾಗುತ್ತದೆ. ನಗರ ಸ್ಥಳೀಯ ಸಂಸ್ಥೆಗಳು, ಇಲಾಖೆಗಳು, ಮಾಲಿನ್ಯ ನಿಯಂತ್ರಣ ಮಂಡಳಿಗಳು, ವಾಣಿಜ್ಯೋದ್ಯಮ ಸಂಸ್ಥೆಗಳ ಜತೆಗೆ ಸಾಮಾನ್ಯ ಜನರ ಹೊಣೆಗಾರಿಕೆಯೂ ಹೆಚ್ಚಿದೆ.