ಬಂಧಕ್ಕೆ ಹೊಸ ಸ್ವರೂಪ: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಎರಡೂ ದೇಶ ಉತ್ಸುಕ

Editorial
Published on

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ವಿವಿಧ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ಮಾತಾಡಿದರು. ಮುಖ್ಯವಾಗಿ ಎರಡೂ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್​ಟಿಎ) ಏರ್ಪಡುವ ಬಗ್ಗೆ ಒಲವು ತೋರಿದರು. ಉಭಯ ದೇಶಗಳ ನಡುವೆ ಸಮಗ್ರ ಪಾಲುದಾರಿಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿಯೂ ಇಬ್ಬರೂ ನಾಯಕರಿಂದ ಸಹಮತ ವ್ಯಕ್ತವಾಯಿತು. ‘ಭಾರತ ಮತ್ತು ಬ್ರಿಟನ್ ನಡುವೆ ಸಾಕಷ್ಟು ವಿನಿಮಯಗಳು ನಡೆಯಬೇಕಿದೆ. ಈ ಎರಡೂ ಪ್ರಜಾಪ್ರಭುತ್ವ ದೇಶಗಳು ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಜತೆಗೆ ರಕ್ಷಣೆ ಹಾಗೂ ಆರ್ಥಿಕ ಪಾಲುದಾರಿಕೆಯ ಕುರಿತು ಚರ್ಚೆಗಳು ನಡೆಯಬೇಕಿದೆ’ಎಂದು ಸುನಕ್ ಹೇಳಿದ್ದಾರೆ.

ಈ ಮಾತುಕತೆ ಬೆನ್ನಲ್ಲೇ ಬ್ರಿಟನ್ ವಿದೇಶಾಂಗ ಸಚಿವ ಜೇಮ್್ಸ ಕ್ಲೆವರ್ಲಿ ಶುಕ್ರವಾರ ಭಾರತಕ್ಕೆ ಬಂದಿದ್ದು, ವಿದೇಶಾಂಗ ಸಚಿವ ಎಸ್.ಜೈಶಂಕರ್ ಜತೆ ಚರ್ಚೆ ನಡೆಸಲಿದ್ದಾರೆ. ರಿಷಿ ಸುನಕ್ ಭಾರತ ಮೂಲದವರು ಅವರ ಸರ್ಕಾರ ಭಾರತದ ಜತೆ ಹೇಗೆ ವ್ಯವಹರಿಸುತ್ತದೆ, ದ್ವಿಪಕ್ಷೀಯ ಸಂಬಂಧವನ್ನು ಮತ್ತೊಂದು ಮಜಲಿಗೇರಿಸಲು ಶ್ರಮಿಸುವದೇ ಇತ್ಯಾದಿ ಕುತೂಹಲ ಸಹಜವಾಗಿ ಮೂಡಿದೆ. ಇದರೊಟ್ಟಿಗೆ, ಅಪಾರ ಸಂಕಷ್ಟಕ್ಕೆ ಸಿಲುಕಿರುವ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುನಕ್ ಹೇಗೆ ನಿರ್ವಹಿಸುತ್ತಾರೆ ಮತ್ತು ಕನ್ಸರ್ವೆಟಿವ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲವೂ ಇದೆ. ಅಲ್ಲಿ 2023ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಸುನಕ್ ಆಡಳಿತ ಶೈಲಿ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಅವರು ಹಣಕಾಸು ಸಚಿವರಾಗಿ ಗಮನಾರ್ಹ ಕಾರ್ಯನಿರ್ವಹಣೆಗೈದಿದ್ದರು. ಬ್ರಿಟನ್ನಿನಲ್ಲಿ ಹಣದುಬ್ಬರ ಕಳೆದ ನಾಲ್ಕು ದಶಕದಲ್ಲಿ ಅತಿ ಹೆಚ್ಚಿನ ಮಟ್ಟಕ್ಕೇರಿದ್ದು, ಇದನ್ನು ನಿರ್ವಹಿಸಲಾಗದೆ ಲಿಜ್ ಟ್ರಸ್ ಅವರು ಕೇವಲ 44 ದಿನಗಳಲ್ಲಿ ಪ್ರಧಾನಿ ಹುದ್ದೆಯಿಂದ ನಿರ್ಗಮಿಸುವಂತಾದುದನ್ನು ಮರೆಯುವಂತಿಲ್ಲ. ಯೂರೋಪ್ ಒಕ್ಕೂಟದಿಂದ ಹೊರಬರುವ (ಬ್ರೆಕ್ಸಿಟ್) ನಿರ್ಧಾರದಿಂದ ಆಗಿರುವ ಸನ್ನಿವೇಶವನ್ನು ನಿಭಾಯಿಸುವುದು ಮತ್ತೊಂದು ಸವಾಲು.

ವಾಸ್ತವದಲ್ಲಿ ಮುಕ್ತ ವ್ಯಾಪಾರ ಒಪ್ಪಂದ ಈಗಾಗಲೇ ಜಾರಿಯಾಗಬೇಕಿತ್ತಾದರೂ, ಬ್ರಿಟನ್ ರಾಜಕೀಯದಲ್ಲಿನ ಏರಿಳಿತಗಳು ಒಪ್ಪಂದ ನನೆಗುದಿಗೆ ಬೀಳಲು ಕಾರಣವಾಗಿದೆ. ಈ ದೀಪಾವಳಿ ಹೊತ್ತಿಗೆ ಒಪ್ಪಂದದ ಸಾಧ್ಯತೆ ಬಗ್ಗೆ ಹೇಳಲಾಗಿತ್ತಾದರೂ ಅದು ಕೈಗೂಡಲಿಲ್ಲ. ಯಾವುದೇ ಎರಡು ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟರೆ, ವ್ಯಾಪಾರ ವ್ಯವಹಾರದಲ್ಲಿನ ಅನೇಕ ಅಡೆತಡೆಗಳು ಇಲ್ಲವಾಗುವುದಲ್ಲದೆ, ಹೂಡಿಕೆಗೆ ಇರುವ ತೊಂದರೆಗಳೂ ನಿವಾರಣೆಯಾಗುತ್ತವೆ. ಇದರಿಂದ ಎರಡೂ ಪಾಲುದಾರ ದೇಶಗಳಿಗೆ ವಾಣಿಜ್ಯ ಪ್ರಯೋಜನವಾಗುತ್ತದೆ. ಕೋವಿಡ್​ನಿಂದಾಗಿ ಎಲ್ಲ ದೇಶಗಳ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮವಾಗಿದ್ದು, ಮುಂಚಿನ ಸ್ಥಿತಿಗೆ ಮರಳಲು ಇನ್ನೂ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಇಂಥ ಕ್ಷಿಷ್ಟ ಸನ್ನಿವೇಶದಲ್ಲಿ ಎರಡು ದೇಶಗಳ ನಡುವಿನ ಸಂಬಂಧ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಸಂಬಂಧಗಳನ್ನು ಪುನರ್​ರೂಪಿಸಿಕೊಳ್ಳುವುದು ಕಾಲದ ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net