

ರಾಜ್ಯದಲ್ಲಿರುವ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಹಳೆಯ ಕಂಪ್ಯೂಟರ್, ಪ್ರಿಂಟರ್ಗಳೇ ಇರುವುದರಿಂದ ದಿನನಿತ್ಯದ ಕಾರ್ಯನಿರ್ವಹಣೆಗೆ ಸಾಕಷ್ಟು ಅಡಚಣೆ ಉಂಟಾಗುತ್ತಿದೆ. ಈ ಹಳೆಯ ಕಂಪ್ಯೂಟರ್, ಪ್ರಿಂಟರ್ಗಳು ಹಾಳಾದರೆ; ಬಿಡಿಭಾಗಗಳನ್ನು ಬದಲಾಯಿಸಬೇಕಾದರೆ ಪೊಲೀಸ್ ಸಿಬ್ಬಂದಿಯೇ ಸ್ವಂತ ಖರ್ಚಿನಲ್ಲಿ ರಿಪೇರಿ ಮಾಡಿಸಬೇಕಾದ ಚಿಂತಾಜನಕ ಪರಿಸ್ಥಿತಿ ಕೂಡ ತಲೆದೋರಿದೆ.
ಮಾಹಿತಿ ತಂತ್ರಜ್ಞಾನದ ಪ್ರಸ್ತುತ ಯುಗದಲ್ಲಿ ಕಂಪ್ಯೂಟರ್ ಬಳಕೆ ಇಲ್ಲದೆ ಯಾವುದೇ ಕಚೇರಿಯಲ್ಲಿ ಕೆಲಸ ಸಾಗದು. ಕಾನೂನು- ಸುವ್ಯವಸ್ಥೆ ಕಾಪಾಡಬೇಕಾದ, ಅಪರಾಧ ಪತ್ತೆ- ನಿಯಂತ್ರಣದಲ್ಲಿ ತೊಡಗುವ ಮಹತ್ವದ ಕಾರ್ಯ ನಿಭಾಯಿಸುವ ಪೊಲೀಸ್ ಇಲಾಖೆಗಂತೂ ಇಂತಹ ಆಧುನಿಕ ಉಪಕರಣಗಳು ಅಗತ್ಯ. ಸಾರ್ವಜನಿಕರ ಸಮಸ್ಯೆ, ದೂರುಗಳಿಗೆ ಸ್ಪಂದಿಸಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕಾಗಿರುವುದರಿಂದ ಈ ಉಪಕರಣಗಳು ಸದಾ ಸುಸ್ಥಿತಿಯಲ್ಲಿರಬೇಕಾದುದು ಅನಿವಾರ್ಯ ಕೂಡ. ಕಂಪ್ಯೂಟರ್, ಪ್ರಿಂಟರ್ ಮೊದಲಾದ ವಾರ್ಷಿಕ ನಿರ್ವಹಣೆಯನ್ನು ಮಾಡಲು ಈ ಮೊದಲು ಗುತ್ತಿಗೆ ನೀಡುವ ಪದ್ಧತಿ ಚಾಲ್ತಿಯಲ್ಲಿತ್ತು. ಆದರೆ, ಕಾರಣಾಂತರಗಳಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಇದನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಈ ಉಪಕರಣಗಳ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ಧೋರಣೆಯನ್ನು ತಳೆದುಕೊಂಡು ಬರಲಾಗಿದೆ. ಠಾಣೆಗಳಲ್ಲಿನ ಉಪಕರಣಗಳ ನಿರ್ವಹಣೆಗಾಗಿ ಜಿಲ್ಲಾ ಮಟ್ಟದ ಸಂಗ್ರಹ ಶಾಖೆಗೆ ವಾರ್ಷಿಕವಾಗಿ 6ರಿಂದ 8 ಲಕ್ಷ ರೂಪಾಯಿ ಹಣವನ್ನು ಒದಗಿಸಲಾಗುತ್ತದೆ. ಆದರೆ, ಈ ಹಣ ಕೂಡ ಠಾಣೆಗಳಿಗೆ ಸೂಕ್ತ ರೀತಿಯಲ್ಲಿ ಹಂಚಿಕೆ ಆಗುತ್ತಿಲ್ಲ ಎಂಬ ದೂರು ಇದೆ. ಹೀಗಾಗಿ, ಠಾಣೆಗಳಲ್ಲಿರುವ ಪೊಲೀಸ್ ಸಿಬ್ಬಂದಿಯೇ ತಮ್ಮ ಸ್ವಂತ ಖರ್ಚಿನಿಂದ ರಿಪೇರಿ ಮಾಡಿಸಬೇಕಾದ ಅನಿವಾರ್ಯತೆ ತಲೆದೋರಿದೆ. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ಸಮಸ್ಯೆ ವ್ಯಾಪಿಸಿದೆ.
ವಿಶ್ವ ಸಂಸ್ಥೆಯ ಅನುಮೋದಿತ ಮಾನದಂಡದ ಪ್ರಕಾರ ಪ್ರತಿ ಒಂದು ಲಕ್ಷ ಜನರಿಗೆ 250 ಪೊಲೀಸ್ ಸಿಬ್ಬಂದಿ ಇರಬೇಕು. ಆದರೆ, ಕರ್ನಾಟಕದಲ್ಲಿ, 2020ರ ಜನವರಿ 1ರವರೆಗೆ ನೇಮಕಾತಿಗೆ ಅನುಮೋದಿಸಿದ ಪೊಲೀಸ್ ಹುದ್ದೆಗಳ ಸಂಖ್ಯೆಯು 1 ಲಕ್ಷ ಜನಸಂಖ್ಯೆಗೆ 158 ಇದೆ. ಅಲ್ಲದೆ, ಈ ಪೈಕಿ ನೇಮಕವಾಗಿರುವುದು 126 ಮಾತ್ರ. ಅಂದರೆ, ವಿಶ್ವ ಸಂಸ್ಥೆಯ ಮಾನದಂಡಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಸಂಖ್ಯೆ ಅರ್ಧದಷ್ಟು ಮಾತ್ರ ಇದೆ. ಆಯಕಟ್ಟಿನ ಹಾಗೂ ಮಹತ್ವದ ಹುದ್ದೆಗಳಿಗೆ ನೇಮಕಾತಿ ಮಾಡಲು ಅಗತ್ಯ ಅನುಭವ ಇರುವ ಹಿರಿಯ ಅಧಿಕಾರಿಗಳ ಕೊರತೆಯೂ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕಂಡುಬಂದಿದೆ. ಹೀಗಾಗಿ, ಹುದ್ದೆಗೆ ಅಗತ್ಯವಿರುವುದಕ್ಕಿಂತಲೂ ಕಡಿಮೆ ಅನುಭವ ಇರುವವರನ್ನೇ ನೇಮಕ ಮಾಡಲಾಗಿದೆ. ಸಾಮಾನ್ಯ ಪೊಲೀಸರಂತೂ ಪ್ರತಿದಿನ 8 ತಾಸುಗಳ ಬದಲಾಗಿ ಸರಾಸರಿ 12 ಗಂಟೆ ಕರ್ತವ್ಯದ ಮೇಲೆ ಇರುವಂತಾಗಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಂತೂ ಈ ಅವಧಿ ಇನ್ನಷ್ಟು ಹಿಗ್ಗುತ್ತದೆ. ಪೊಲೀಸ್ ಇಲಾಖೆಯ ವಿಚಾರದಲ್ಲಿ ಕರ್ನಾಟಕ ಎಷ್ಟರಮಟ್ಟಿಗೆ ಹಿಂದುಳಿದಿದೆ ಎಂಬುದನ್ನು ಇದು ಸೂಚಿಸುತ್ತದೆ. ಪರಿಸ್ಥಿತಿ ಹೀಗಿರುವಾಗ ಇರುವ ಸಿಬ್ಬಂದಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ತೀವ್ರ ಅಗತ್ಯತೆ ಇದೆ. ಕಾನೂನು- ಸುವ್ಯವಸ್ಥೆ ಕಾಪಾಡುವ, ಅಪರಾಧ ನಿಯಂತ್ರಿಸುವ ಪ್ರಮುಖ ಇಲಾಖೆ ಕುರಿತು ನಿರ್ಲಕ್ಷ್ಯ ಸಲ್ಲದು.