ಏಕತೆಯ ಸಂಕೇತ: ಸಂಸತ್ ಭವನ ಉದ್ಘಾಟನೆ ಬಹಿಷ್ಕಾರ ಬೇಕಿರಲಿಲ್ಲ

Parliament House (1)
Published on

ನೂತನ ಸಂಸತ್ ಭವನದ ಉದ್ಘಾಟನೆ ವಿಚಾರ ಸಲ್ಲದ ಕಾರಣಕ್ಕೆ ವಿವಾದಕ್ಕೆ ಗುರಿಯಾಗಿರುವುದು ಖೇದದ ಸಂಗತಿ. ವಾಸ್ತವದಲ್ಲಿ ಇದು ದೇಶದ ಏಕತೆಯನ್ನು ಬಿಂಬಿಸುವ ರೀತಿಯಲ್ಲಿ ಎಲ್ಲರನ್ನೂ ಒಳಗೊಂಡು ಸಂಭ್ರಮದಿಂದ ನಡೆಯಬೇಕಿತ್ತು. ಆದರೆ ರಾಜಕೀಯ ಭಿನ್ನಾಭಿಪ್ರಾಯವು ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿರುವುದರಿಂದ ಸಡಗರದ ಬದಲು ಮುನಿಸಿನ ಸನ್ನಿವೇಶ ಸೃಷ್ಟಿಯಾಗಿಬಿಟ್ಟಿದೆ.

ಹಾಗೆ ನೋಡಿದರೆ, ಸಂಸತ್ ಭವನದ ನಿರ್ವಣವನ್ನೂ ಒಳಗೊಂಡ ಸೆಂಟ್ರಲ್ ವಿಸ್ಟಾ ಯೋಜನೆಯ ಬಗ್ಗೆ ಆರಂಭದಿಂದಲೂ ವಿಪಕ್ಷಗಳು ತಕರಾರು ಎತ್ತುತ್ತಲೇ ಇವೆ. ಕರೊನಾ ಸಂಕಟದ ಸಮಯದಲ್ಲಿ ಭವ್ಯ ಕಟ್ಟಡದ ಉಸಾಬರಿ ಬೇಕಿತ್ತಾ ಎಂಬುದು ಅವುಗಳ ಆಕ್ಷೇಪ. ಈಗ ಸಂಸತ್ ಭವನ ಉದ್ಘಾಟನೆ ವಿಷಯದಲ್ಲಿ ಈ ಭಿನ್ನಾಭಿಪ್ರಾಯ ತಾರಕಕ್ಕೆ ಹೋಗಿ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಸಮಾರಂಭ ಬಹಿಷ್ಕರಿಸುವುದಾಗಿ ಹೇಳಿವೆ. ಸಂವಿಧಾನದ ಪ್ರಕಾರ, ರಾಷ್ಟ್ರಪತಿಗಳು ದೇಶದ ಮುಖ್ಯಸ್ಥರು. ಪ್ರಧಾನಮಂತ್ರಿ ಸರ್ಕಾರದ ಮುಖ್ಯಸ್ಥರು. ಹೀಗಾಗಿ ರಾಷ್ಟ್ರಪತಿಯಿಂದ ಸಂಸತ್ ಭವನ ಉದ್ಘಾಟನೆ ನೆರವೇರಿಸುವುದೇ ಸೂಕ್ತ ಎಂಬುದು ವಿಪಕ್ಷಗಳ ವಾದ.

ಇದಲ್ಲದೆ, ರಾಷ್ಟ್ರಪತಿಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನವನ್ನೂ ನೀಡದಿರುವುದು ಆ ಅತ್ಯುನ್ನತ ಹುದ್ದೆಯನ್ನು ಅಪಮಾನಿಸಿದಂತೆ ಎಂಬುದು ಅವುಗಳ ಟೀಕೆ. ಜತೆಗೆ, ಸಾವರ್ಕರ್ ಜನ್ಮದಿನದಂದು ಉದ್ಘಾಟನೆ ಹಮ್ಮಿಕೊಳ್ಳುವ ಜರೂರತ್ತು ಏನಿತ್ತು? ಸಂವಿಧಾನ ಜಾರಿಗೆ ಬಂದ ಜನವರಿ 26ರಂದು ಆಗಬಹುದಿತ್ತಲ್ಲ ಎಂದೂ ವಿಪಕ್ಷಗಳು ಹೇಳುತ್ತಿವೆ. ಆಡಳಿತ ಪಕ್ಷ ಇದಕ್ಕೆ ಸಮಜಾಯಿಷಿ ನೀಡಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಸಂಸತ್ ಭವನವನ್ನು ಪ್ರಧಾನಿ ಉದ್ಘಾಟಿಸಬೇಕೇ ಅಥವಾ ರಾಷ್ಟ್ರಪತಿ ಉದ್ಘಾಟಿಸಬೇಕೆ ಎಂಬ ವಿಷಯವಾಗಿ ಸಂವಿಧಾನದಲ್ಲಿ ಉಲ್ಲೇಖವೇನೂ ಇಲ್ಲ. ಕೆಲ ತಜ್ಞರ ಪ್ರಕಾರ, ದೇಶದ ಮುಖ್ಯಸ್ಥರಾಗಿರುವುದರಿಂದ ರಾಷ್ಟ್ರಪತಿ ಉದ್ಘಾಟಿಸುವುದು ಸೂಕ್ತ. ಇನ್ನು ಕೆಲವರ ಪ್ರಕಾರ, ಪ್ರಧಾನಿಯೇ ಸೂಕ್ತ. ಹೀಗಾಗಿ ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ಇದೇನೇ ಇದ್ದರೂ, ವಿಪಕ್ಷಗಳು ಸಮಾರಂಭ ಬಹಿಷ್ಕರಿಸುವಂತಹ ನಿರ್ಣಯ ತಳೆದಿರುವುದು ಅಷ್ಟು ಸೂಕ್ತವಲ್ಲ ಎಂದೇ ಹೇಳಬೇಕಾಗುತ್ತದೆ. ಸರ್ಕಾರದ ನಡೆಗೆ ತಕರಾರು ಇದ್ದರೆ ಅದನ್ನು ವ್ಯಕ್ತಪಡಿಸಲು ಬೇರೆ ಬೇರೆ ಹಾದಿಗಳಿವೆ. ಜಾಗತಿಕ ದೇಶಗಳು ಭಾರತದ ಈ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂಬುದನ್ನು ಜನಪ್ರತಿನಿಧಿಗಳು ಮರೆಯಬಾರದು.

ಸಂಸತ್ ಭವನದ ಉದ್ಘಾಟನೆಯನ್ನು ವೈಭವದಿಂದ ನೆರವೇರಿಸುವ ಮೂಲಕ, ದೇಶದ ಹಿತಾಸಕ್ತಿ ವಿಷಯದಲ್ಲಿ ನಮ್ಮಲ್ಲಿ ಒಗ್ಗಟ್ಟಿದೆ; ರಾಜಕೀಯ ಭಿನ್ನಮತಕ್ಕೂ ಇದಕ್ಕೂ ಸಂಬಂಧವಿಲ್ಲ ಎಂಬ ಸಂದೇಶವನ್ನು ಜಾಗತಿಕವಾಗಿ ರವಾನಿಸಲು ಇದೊಂದು ಉತ್ತಮ ಸಂದರ್ಭವಾಗಿತ್ತು. ‘ರಾಜಕೀಯ ಭಿನ್ನಾಭಿಪ್ರಾಯವನ್ನು ಸಂಸತ್ ಭವನದ ಉದ್ಘಾಟನೆಗೆ ತಳಕು ಹಾಕುವುದು ಸರಿಯಲ್ಲ’ಎಂದು ಮಾಜಿ ಪ್ರಧಾನಿ ದೇವೆಗೌಡ ಹೇಳಿರುವುದು ವಿವೇಚನೆಯ ನಡೆಯಾಗಿ ಗೋಚರಿಸುತ್ತದೆ. ಸಂಸತ್ ಭವನ ಎಂಬುದು ಬರೀ ಕಟ್ಟಡವಲ್ಲ, ಅದು ದೇಶದ ಪ್ರಜಾಪ್ರಭುತ್ವವನ್ನು ಹೆಮ್ಮೆಯಿಂದ ಸಾರುವ ಸಂಕೇತ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವಣ ಭಿನ್ನಮತ ಸಂಸತ್ ಕಲಾಪಗಳ ಮೇಲೂ ಪರಿಣಾಮ ಬೀರುತ್ತಿರುವುದನ್ನು ಕಾಣುತ್ತಿದ್ದೇವೆ. ಇದು ಹೀಗೇ ಮುಂದುವರಿಯುವುದು ದೇಶದ ಒಟ್ಟಾರೆ ಹಿತಾಸಕ್ತಿಗೆ ಮಾರಕ ಎಂಬುದನ್ನು ಎರಡು ಕಡೆಯವರೂ ಮನಗಾಣಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net