ಗಂಭೀರ ಕ್ರಮ ಅಗತ್ಯ: ವಿಳಂಬದಿಂದಾಗಿ ಬೃಹತ್ ಯೋಜನೆಗಳ ವೆಚ್ಚ ಹೆಚ್ಚಳ

Industry
Published on

ದೇಶದ 408 ಪ್ರಮುಖ ಮೂಲಸೌಕರ್ಯ ಯೋಜನೆಗಳ ಯೋಜನಾ ವೆಚ್ಚದಲ್ಲಿ ಅಗಾಧ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಇವುಗಳ ಯೋಜನಾ ವೆಚ್ಚದಲ್ಲಿ 4.80 ಲಕ್ಷ ಕೋಟಿ ರೂಪಾಯಿಯಷ್ಟು ಏರಿಕೆಯಾಗಿದೆ ಎಂಬುದು ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಈಚೆಗೆ ಬಿಡುಗಡೆ ಮಾಡಿರುವ ವರದಿಯಿಂದ ಬೆಳಕಿಗೆ ಬಂದಿರುವುದು ಕಳವಳಕಾರಿ ಸಂಗತಿಯಾಗಿದ್ದು, ಕಳೆದ ಒಂಭತ್ತು ವರ್ಷಗಳಲ್ಲಿ ಹಲವು ಎಕ್ಸ್​ಪ್ರೆಸ್ ವೇಗಳು, ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೇ, ಏರ್​ಪೋರ್ಟ್ ಮತ್ತಿತರ ಕಾಮಗಾರಿಗಳು ಶರವೇಗದಲ್ಲಿ ಪೂರ್ಣಗೊಂಡಿದ್ದರೂ, ಒಟ್ಟಾರೆ ಅಂಕಿ-ಅಂಶ ಗಮನಿಸುವಾಗ ಬೃಹತ್ ಯೋಜನೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಹಾಗೂ ಕಾಲಮಿತಿಯಲ್ಲಿ ಜಾರಿಗೊಳಿಸುತ್ತಿಲ್ಲ ಎಂಬ ಅನುಮಾನವನ್ನು ಹುಟ್ಟುಹಾಕುತ್ತದೆ.

ಸಚಿವಾಲಯವು ವರದಿಯಲ್ಲಿ ಪ್ರಸ್ತಾಪಿಸಿರುವ ಈ ಎಲ್ಲ ಯೋಜನೆಗಳು -ಠಿ;150 ಕೋಟಿ ಹಾಗೂ ಅದಕ್ಕಿಂತ ಅಧಿಕ ವೆಚ್ಚದ್ದಾಗಿವೆ. ಇಂತಹ 1,681 ಯೋಜನೆಗಳ ಸ್ಥಿತಿಗತಿ ಕುರಿತಂತೆ ಸಚಿವಾಲಯವು ಕಳೆದ ಮೇ ಅಂತ್ಯದ ಅವಧಿಯವರೆಗಿನ ವರದಿ ಬಿಡುಗಡೆ ಮಾಡಿದೆ. ಇವುಗಳಲ್ಲಿ 408 ಯೋಜನೆಗಳ ವೆಚ್ಚವು ಹೆಚ್ಚಳ ಕಂಡಿದ್ದರೆ, 814 ಯೋಜನೆಗಳ ಅನುಷ್ಠಾನ ವಿಳಂಬವಾಗಿದೆ. ಈ ಎಲ್ಲ 1681 ಯೋಜನೆಗಳ ಮೂಲ ಯೋಜನಾ ವೆಚ್ಚವನ್ನು -ಠಿ;24.16 ಲಕ್ಷ ಕೋಟಿ ಎಂದು ನಿಗದಿಪಡಿಸಲಾಗಿದ್ದರೂ ಪೂರ್ಣಗೊಳ್ಳುವ ವೇಳೆಗೆ ಇವುಗಳ ವೆಚ್ಚವು -ಠಿ;28.96 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ. ಮೂಲ ವೆಚ್ಚಕ್ಕಿಂತ ಶೇ 19.86ರಷ್ಟು ಅಂದರೆ, 4.80 ಲಕ್ಷ ಕೋಟಿ ರೂ. ಹೆಚ್ಚಳ ಆಗಬಹುದಾಗಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಆದರೆ, ಈ ಯೋಜನೆಗಳ ಜಾರಿಯಲ್ಲಿ ಮತ್ತಷ್ಟು ವಿಳಂಬ, ಬದಲಾವಣೆಯಾದರೆ ವೆಚ್ಚವು ಇನ್ನಷ್ಟು ಅಧಿಕವಾಗುವ ಸಾಧ್ಯತೆ ತಳ್ಳಿಹಾಕಲಾಗದು. ಇನ್ನು 419 ಯೋಜನೆಗಳು ಆರಂಭಗೊಳ್ಳುವ ಹಾಗೂ ಪೂರ್ಣಗೊಳ್ಳುವ ಅಂದಾಜು ಸಮಯದ ಕುರಿತಂತೆ ಮಾಹಿತಿಯೇ ಇಲ್ಲ ಎಂದು ವರದಿ ಹೇಳಿರುವುದನ್ನು ಗಮನಿಸಿದರೆ, ಯೋಜನೆಗಳ ಅನುಷ್ಠಾನದಲ್ಲಿ ತೋರಲಾಗಿರುವ ಲೋಪ ಕಂಡುಬರುತ್ತದೆ.

ಯೋಜನೆಗೆ ಬೇಕಾದ ಭೂಮಿಯ ಸ್ವಾಧೀನ, ಅರಣ್ಯ ಮತ್ತು ಪರಿಸರ ಅನುಮೋದನೆ ಪಡೆದುಕೊಳ್ಳುವಲ್ಲಿ ವಿಳಂಬ, ಪೂರಕವಾದ ಸೌಲಭ್ಯಗಳ ಕೊರತೆಯು ಯೋಜನೆಗಳ ಅನುಷ್ಠಾನ ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ. ಹಣಕಾಸು ಕೊರತೆ, ತಾಂತ್ರಿಕ ಅಂಶ ಅಂತಿಮಗೊಳಿಸುವಲ್ಲಿ ವಿಳಂಬ, ಟೆಂಡರ್ ಪ್ರಕ್ರಿಯೆ, ಕಾರ್ಯಾದೇಶ ಪ್ರಕ್ರಿಯೆಯಲ್ಲಿ ತಡವಾಗುವುದು, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳ ಕಾರಣದಿಂದಾಗಿ ಯೋಜನೆಗಳ ವೆಚ್ಚ ಹೆಚ್ಚಾಗಿದೆ ಎಂದು ವರದಿಯಲ್ಲಿ ಗುರುತಿಸಲಾಗಿದೆ. ಯಾವುದೇ ಬೃಹತ್ ಸರ್ಕಾರಿ ಯೋಜನೆ ಜಾರಿಯಲ್ಲಿ ಸಾಮಾನ್ಯವಾಗಿ ಎದುರಾಗಬಹುದಾದ ನಿರೀಕ್ಷಿತ ಸಂಗತಿಗಳೇ ಇವುಗಳು ಎನ್ನಬಹುದಾಗಿದೆ. ವಿಳಂಬಗೊಂಡ 814 ಯೋಜನೆಗಳ ಪೈಕಿ 200 ಯೋಜನೆಗಳು 1-12 ತಿಂಗಳು; 183 ಯೋಜನೆಗಳು 13-24 ತಿಂಗಳು; 300 ಯೋಜನೆಗಳು 25-60 ತಿಂಗಳು ತಡವಾಗಿವೆ. ಆದರೆ, 131 ಯೋಜನೆಗಳು 60 ತಿಂಗಳಿಗಿಂತ ಹೆಚ್ಚು ವಿಳಂಬವಾಗಿರುವುದನ್ನೂ ವರದಿ ಗುರುತಿಸಿದೆ.

ಒಟ್ಟಾರೆಯಾಗಿ ಈ ವರದಿಯನ್ನು ನೋಡಿದರೆ, ಯೋಜನೆಗಳ ಜಾರಿ ವಿಳಂಬಕ್ಕೆ ಹಳೆಯ ಕಾರಣಗಳೇ ಮುಂದುವರಿದಿವೆ. ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯಾಂಗದ ಪ್ರಕ್ರಿಯೆಗಳಲ್ಲಿ ವ್ಯಾಪಕ ಪ್ರಗತಿ, ಸುಧಾರಣೆಗಳು ನಡೆದಿಲ್ಲ ಎಂಬ ಅಭಿಪ್ರಾಯವನ್ನು ಈ ವರದಿ ಸೂಚಿಸುವಂತಿದೆ. 150 ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತದ ಬೃಹತ್ ಯೋಜನೆಗಳ ಪರಿಸ್ಥಿತಿಯೇ ಇದಾದರೆ ಇನ್ನು ಕಡಿಮೆ ವೆಚ್ಚದ ಯೋಜನೆಗಳ ಗತಿ ಏನಾಗಿರಬಹುದು ಎಂಬ ಆತಂಕವೂ ಉಂಟಾಗುತ್ತದೆ. ಕಾಲಮಿತಿಯೊಳಗೆ ಯೋಜನೆಗಳನ್ನು ಜಾರಿಗೊಳಿಸಲು ಹಾಗೂ ಯೋಜನೆ ವೆಚ್ಚ ಏರಿಕೆ ತಡೆಗಟ್ಟಲು ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕೆಂಬ ವಾಸ್ತವವನ್ನು ಈ ವರದಿ ತೆರೆದಿಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net