

ಜಮೀನು, ನಿವೇಶನ ಮಾರಾಟದಲ್ಲಿ ವಂಚನೆ ತಡೆಯುವ ನಿಟ್ಟಿನಲ್ಲಿ ಕಾನೂನುಬದ್ಧವಾಗಿ ಭೂದಾಖಲೆಗಳನ್ನು ಪರಿಶೀಲಿಸಿ ಖರೀದಿದಾರರಿಗೆ ಅಧಿಕೃತ ಮಾಹಿತಿ ಒದಗಿಸಲು ಏಜೆನ್ಸಿಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಕಂದಾಯ ಆಡಳಿತದಲ್ಲಿ ಮತ್ತೊಂದು ಪ್ರಮುಖ ನಿರ್ಧಾರವಾಗಿದ್ದು, ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತಂದರೆ ಇದೊಂದು ಜನಸ್ನೇಹಿ ವ್ಯವಸ್ಥೆಯಾಗಿ ರೂಪುಗೊಳ್ಳುವುದು ನಿಶ್ಚಿತ. ಭೂಮಿ ಖರೀದಿಯಲ್ಲಿ ಎಣೆಯಿಲ್ಲದಷ್ಟು ಅಕ್ರಮ, ಅವ್ಯವಹಾರ, ವಂಚನೆಗಳು ನಿರಂತರವಾಗಿ ವರದಿಯಾಗುತ್ತಲೇ ಇರುತ್ತವೆ. ಜಮೀನಿನ ನೈಜ ಮಾಲಿಕರ ಬದಲು ಪಹಣಿ ಪತ್ರಿಕೆಯಲ್ಲಿ ಇನ್ನಾರದೋ ಹೆಸರು ಇರುತ್ತದೆ. ಒಂದೇ ನಿವೇಶನವನ್ನು ಅನೇಕರ ಹೆಸರಲ್ಲಿ ನೋಂದಣಿ ಮಾಡಲಾಗುತ್ತದೆ. ಖಾಲಿ ನಿವೇಶನಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲಾಗುತ್ತದೆ. ಸಿಎ (ನಾಗರಿಕ ಸೌಲಭ್ಯ) ನಿವೇಶನಗಳನ್ನು ಕೂಡ ಮಾರಾಟ ಮಾಡಲಾಗುತ್ತದೆ. ಹೀಗೆ ತರಹೇವಾರಿ ರೀತಿಯಲ್ಲಿ ಭೂ ಮಾರಾಟದಲ್ಲಿ ವಂಚನೆ ನಡೆಯುತ್ತಲೇ ಇದೆ. ಸಾಮಾನ್ಯವಾಗಿ ಜನರು ಯಾವುದೇ ಜಮೀನು ಅಥವಾ ನಿವೇಶನ ಖರೀದಿಸುವಾಗ ವಕೀಲರ ಬಳಿ ಕಾನೂನು ಅಭಿಪ್ರಾಯ ಪಡೆದುಕೊಳ್ಳುತ್ತಾರೆ. ಖರೀದಿಸುವ ಭೂಮಿಗೆ ಸಾಲ ಪಡೆಯಲು ಮುಂದಾದರೆ ಬ್ಯಾಂಕ್ಗಳೇ ಸೂಚಿಸಿದ ವಕೀಲರಿಂದ ಲೀಗಲ್ ಒಪಿನಿಯನ್ ಪಡೆದುಕೊಳ್ಳಬೇಕಾಗುತ್ತದೆ. ಈ ವಕೀಲರು ದಾಖಲೆಗಳನ್ನು ಪರಿಶೀಲಿಸಿ ಜಮೀನು ಖರೀದಿಗೆ ಯೋಗ್ಯವಾಗಿದೆ ಎಂದು ಅಭಿಪ್ರಾಯ ನೀಡಿದರೂ ವಂಚನೆ ಆಗುವುದಿಲ್ಲ ಎಂಬ ಖಾತರಿ ಇರುವುದಿಲ್ಲ. ಏಕೆಂದರೆ, ಒಬ್ಬ ವ್ಯಕ್ತಿ ಜಮೀನು ಅಥವಾ ನಿವೇಶನ ಖರೀದಿಸಿದ ನಂತರ ಅದು ಉತಾರದಲ್ಲಿ ದಾಖಲಾಗಲು 30ರಿಂದ 45 ದಿನಗಳ ಕಾಲಾವಕಾಶ ಬೇಕಾಗುತ್ತದೆ. ಈ ಅವಧಿಯಲ್ಲಿ ಜಮೀನನ್ನು ಬೇರೊಬ್ಬರಿಗೆ ಮಾರುವ ಸಂಚನ್ನು ವಂಚಕರು ರೂಪಿಸುವ ಸಾಧ್ಯತೆಗಳು ಇರುತ್ತವೆ. ಅಲ್ಲದೆ, ವಕೀಲರು ದಾಖಲೆ ಪರಿಶೀಲಿಸುವ ರೀತಿಯನ್ನು ಬಲ್ಲ ವಂಚಕರು ಅದಕ್ಕೆ ತಕ್ಕಂತೆಯೇ ದಾಖಲೆಗಳನ್ನು ಸೃಷ್ಟಿಸುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ.
ಭೂದಾಖಲೆಗಳನ್ನು ಪರಿಶೀಲಿಸಲು ಉದ್ದೇಶಿತ ಏಜೆನ್ಸಿಗಳ ವ್ಯವಸ್ಥೆಯು ಜನರಿಗೆ ಹೆಚ್ಚು ವಿಶ್ವಾಸಾರ್ಹತೆ ಒದಗಿಸಬಹುದಾಗಿದೆ. ಈ ಏಜೆನ್ಸಿಗಳು ಮಾರಾಟ ಮಾಡುವವರು ಮತ್ತು ಕೊಳ್ಳುವವರ ಬಳಿ ದಾಖಲೆಗಳನ್ನು ಪಡೆದು ನೈಜತೆ ಪರಿಶೀಲಿಸಲಿವೆ. ಅಲ್ಲದೆ, ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಸರ್ಕಾರಿ ಕಚೇರಿಗಳಿಂದ ಅಧಿಕೃತ ದಾಖಲೆಗಳನ್ನು ತರಿಸಿಕೊಂಡು ಭೂ ಒಡೆತನದ ಬಗೆಗೆ ಸ್ಪಷ್ಟತೆ ಒದಗಿಸುತ್ತವೆ. ಹೀಗಾಗಿ, ಖರೀದಿದಾರರಿಗೆ ಮೋಸ ಆಗುವುದಿಲ್ಲವೆಂಬ ಖಾತರಿಯನ್ನು ಈ ಏಜೆನ್ಸಿಗಳ ಮೂಲಕ ನೀಡಲು ಸಾಧ್ಯವಾಗುತ್ತದೆ ಎಂಬುದು ಸಕಾರಾತ್ಮಕ ಅಂಶ. ಭೂಮಿ ಮತ್ತು ನಿವೇಶನ ಖರೀದಿದಾರರಿಗೆ ಮೋಸ ಮಾಡುವುದು ದೊಡ್ಡ ದಂಧೆಯೇ ಆಗಿದೆ. ಇದಕ್ಕೆಲ್ಲ ಬ್ರೇಕ್ ಹಾಕಲು ಏಜೆನ್ಸಿಗಳನ್ನು ಸ್ಥಾಪಿಸುತ್ತಿದೆ ಎಂದಿರುವ ಕಂದಾಯ ಸಚಿವ ಆರ್. ಅಶೋಕ್, ರಾಜ್ಯಾದ್ಯಂತ ಒಂದೇ ಏಜೆನ್ಸಿ ಇರಬೇಕೆ ಅಥವಾ ಜಿಲ್ಲೆಗೊಂದು ಏಜೆನ್ಸಿ ಸ್ಥಾಪಿಸಬೇಕೆ ಎಂದು ಶೀಘ್ರ ನಿರ್ಧರಿಸಲಾಗುತ್ತದೆ ಎಂದಿದ್ದಾರೆ. ಆದರೆ, ರಾಜ್ಯಕ್ಕೆ ಒಂದೇ ಏಜೆನ್ಸಿ ಸ್ಥಾಪಿಸಿದರೆ ಕಾರ್ಯದೊತ್ತಡ ಹೆಚ್ಚಾಗಿ ಜನರಿಗೆ ಕಾಲಮಿತಿಯಲ್ಲಿ ಸೇವೆ ಒದಗಿಸಲು ಸಾಧ್ಯವಾಗಲಿಕ್ಕಿಲ್ಲ. ಹೀಗಾಗಿ, ಪ್ರತಿ ಜಿಲ್ಲೆ ಮತ್ತು ರಾಜ್ಯದ ಪ್ರಮುಖ ನಗರಗಳಲ್ಲಿ ಇಂತಹ ಏಜೆನ್ಸಿಗಳನ್ನು ಸ್ಥಾಪಿಸಿದರೆ ಅನುಕೂಲವಾಗಬಹುದು.