ತ್ವರಿತ ನ್ಯಾಯದಾನದ ನಿರೀಕ್ಷೆ: ರಾಜ್ಯ ಸರ್ಕಾರದಿಂದ ಸ್ವಾಗತಾರ್ಹ ಕ್ರಮಗಳು

Grama Nyayalaya
Published on

ವಿಳಂಬ ನ್ಯಾಯದಾನ ಎಂಬುದು ನ್ಯಾಯದಾನವನ್ನು ನಿರಾಕರಿಸಿದಂತೆ ಎಂಬ ಮಾತುಗಳು ವಾಸ್ತವದ ಪ್ರತೀಕವಾಗಿವೆ. ಇದನ್ನು ಮನಗಂಡಿರುವ ರಾಜ್ಯ ಸರ್ಕಾರವು ರಾಜ್ಯದಲ್ಲಿ ನ್ಯಾಯದಾನವನ್ನು ತ್ವರಿತಗೊಳಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವುದು ಕಕ್ಷಿದಾರರ ಹಿತ ಕಾಪಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ನಿರೀಕ್ಷೆಗಳು ಮೂಡಿವೆ.

ರಾಜ್ಯದ ಸಿವಿಲ್ ಪ್ರೊಸೀಜರ್ ಕೋಡ್​ಗೆ ತಿದ್ದುಪಡಿ ಮಾಡಿ, ವಿಧಾನ ಮಂಡಲದ ಉಭಯ ಸದನಗಳಲ್ಲಿ ಅನುಮೋದನೆ ಪಡೆದು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಸಲ್ಲಿಸಲಾಗಿದೆ. 6 ತಿಂಗಳಲ್ಲಿ ವ್ಯಾಜ್ಯಗಳನ್ನು ವಿಲೇವಾರಿ ಮಾಡುವ ಹಾಗೂ ಪ್ರಕರಣಗಳನ್ನು 3ಕ್ಕಿಂತ ಹೆಚ್ಚು ಬಾರಿ ಮುಂದೂಡದಂತೆ ಇದರಲ್ಲಿ ತಿದ್ದುಪಡಿ ಮಾಡಿರುವುದು ನ್ಯಾಯದಾನ ತ್ವರಿತಗೊಳಿಸುವ ನಿಟ್ಟಿನಲ್ಲಿ ಮಹತ್ವದ ಅಂಶಗಳಾಗಿವೆ. ನ್ಯಾಯದಾನ ತ್ವರಿತಗೊಳಿಸುವುದಕ್ಕಾಗಿ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಇನ್ನೊಂದು ಮಹತ್ವದ ಕ್ರಮವೆಂದರೆ ಗ್ರಾಮ ನ್ಯಾಯಾಲಯ. ರಾಜ್ಯದಲ್ಲಿ 2006ರಲ್ಲಿಯೇ ಎರಡು ಗ್ರಾಮ ನ್ಯಾಯಾಲಯಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದರೂ ಈ ಕಲ್ಪನೆ ಮುಂದುವರಿದಿರಲಿಲ್ಲ. ಪ್ರಸ್ತುತ ಸರ್ಕಾರವು ಹಂತಹಂತವಾಗಿ 2000 ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಬರುವ ಸೆಪ್ಟೆಂಬರ್ ತಿಂಗಳಲ್ಲಿಯೇ ರಾಜ್ಯದ ವಿವಿಧೆಡೆ 400 ಗ್ರಾಮ ನ್ಯಾಯಾಲಯಗಳನ್ನು ಆರಂಭಿಸಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ ಅವರು ಈಗಾಗಲೇ ಘೋಷಣೆ ಮಾಡಿರುವುದು ರಾಜ್ಯ ಸರ್ಕಾರ ಈ ವಿಷಯಕ್ಕೆ ನೀಡಿರುವ ಆದ್ಯತೆಯನ್ನು ಸೂಚಿಸುತ್ತದೆ.

2023ರ ಜುಲೈ 1ರವರೆಗೆ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 5.02 ಕೋಟಿ ತಲುಪಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ತಿಳಿಸಿದೆ. ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (ಎನ್​ಜೆಡಿಜಿ) ಮಾಹಿತಿಯ ಪ್ರಕಾರ ಸುಪ್ರೀಂ ಕೋರ್ಟ್​ನಲ್ಲಿ 69,000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ದೇಶಾದ್ಯಂತ 25 ಹೈಕೋರ್ಟ್​ಗಳಲ್ಲಿ 60,62,953; ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಲ್ಲಿ 4,41,35,357 ಪ್ರಕರಣಗಳು ಬಾಕಿ ಉಳಿದಿವೆ. 30 ವರ್ಷಗಳಿಂದಲೂ ಇತ್ಯರ್ಥವಾಗದಿರುವ ಪ್ರಕರಣಗಳ ಸಂಖ್ಯೆ ಜಿಲ್ಲಾ ಹಾಗೂ ಕೆಳ ಹಂತದ ನ್ಯಾಯಾಲಯಗಳಲ್ಲಿ 1,01,837 ಹಾಗೂ ವಿವಿಧ ಹೈಕೋರ್ಟ್​ಗಳಲ್ಲಿ 71,204 ಎಂಬುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ನ್ಯಾಯಾಲಯದ ವ್ಯಾಜ್ಯಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೂ ಮುಂದುವರಿದಿರುವ ಪ್ರಕರಣಗಳಿಗೂ ಬರ ಇಲ್ಲ.

ಕರ್ನಾಟಕದಲ್ಲಿ ಹೆಚ್ಚುವರಿಯಾಗಿ ಎರಡು ಹೈಕೋರ್ಟ್ ಪೀಠ ಸ್ಥಾಪನೆಗೆ ಕ್ರಮ ಕೈಗೊಂಡಿರುವುದು ಬೆಂಗಳೂರು ಹೈಕೋರ್ಟ್ ಮೇಲಿನ ಒತ್ತಡವನ್ನು ವ್ಯಾಪಕ ಪ್ರಮಾಣದಲ್ಲಿ ಕಡಿಮೆ ಮಾಡಲು ಸಹಾಯಕವಾಗಿದೆ. ಗ್ರಾಮ ಮಟ್ಟದಲ್ಲಿ ನ್ಯಾಯಾಲಯ ಸ್ಥಾಪಿಸುವುದು ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳ ಮೇಲಿನ ಒತ್ತಡವನ್ನು ನಿಸ್ಸಂಶಯವಾಗಿ ಕಡಿಮೆ ಮಾಡಲು ಸಹಾಯಕವಾಗಲಿದೆ. ಕಕ್ಷಿದಾರರು ಸ್ಥಳೀಯ ಮಟ್ಟದಲ್ಲಿಯೇ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಲು ನೆರವಾಗಲಿದೆ. ನ್ಯಾಯಾಲಯದ ದೀರ್ಘಕಾಲದ ಪ್ರಕ್ರಿಯೆ ಹಾಗೂ ವ್ಯಾಪಕ ವೆಚ್ಚದ ಕಾರಣದಿಂದ ಎಷ್ಟೋ ಜನರು, ಅದರಲ್ಲೂ ವಿಶೇಷವಾಗಿ ಬಡವರು ನ್ಯಾಯ ಕೋರಿ ಕೋರ್ಟ್ ಮೆಟ್ಟಿಲೇರಲು ಹಿಂಜರಿಯುವಂತಹ ವಾತಾವರಣವೇ ಇದೆ. ಗ್ರಾಮ ನ್ಯಾಯಾಲಯಗಳು ಇಂತಹ ವಾತಾವರಣವನ್ನು ಬದಲಾಯಿಸಿ, ನ್ಯಾಯದಾನದಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ನಿರೀಕ್ಷೆ ಮೂಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net