ಸಂಪಾದಕೀಯ | ಹೆಚ್ಚುತ್ತಿರುವ ಡ್ರಗ್ಸ್ ಜಾಲ: ಪ್ರತ್ಯೇಕ ನಿಗಾ ವ್ಯವಸ್ಥೆ ಈ ಕ್ಷಣಕ್ಕೆ ಅವಶ್ಯ

Drugs (3)
Published on

ರಾಜ್ಯದೆಲ್ಲೆಡೆ ಅಪರಾಧ ಕೃತ್ಯಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಕೊಲೆ, ಅತ್ಯಾಚಾರ, ಹಲ್ಲೆ ಮತ್ತಿತರ ಹಿಂಸಾಕೃತ್ಯಗಳಿಗೆ ಮಾದಕ ಪದಾರ್ಥಗಳ ಬಳಕೆ ವ್ಯಾಪಕವಾಗಿರುವುದೇ ಕಾರಣ ಎಂಬುದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ. ಬಹುತೇಕ ಕೃತ್ಯಗಳಲ್ಲಿ ಮಾದಕವ್ಯಸನಿಗಳೇ ಭಾಗಿಯಾಗುತ್ತಿರುವುದು. ಡ್ರಗ್ಸ್ ಅಮಲಿನಲ್ಲಿ ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿ ಸಮೂಹ ಡ್ರಗ್ಸ್​ಗೆ ಬಲಿಯಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಬೆಳಕಿಗೆ ಬರುತ್ತಿರುವ ಅಪರಾಧ ಕೃತ್ಯಗಳ ಬಹುತೇಕ ಆರೋಪಿಗಳು ಮಾದಕ ವ್ಯಸನಿಗಳೆಂಬುದು ಗಮನಾರ್ಹ ಸಂಗತಿ.

ಆತಂಕದ ವಿಷಯವೆಂದರೆ ಕೆಲವು ಕಾಲೇಜುಗಳ ಬಳಿ ಗಾಂಜಾ, ಕೊಕೇನ್ ಮತ್ತಿತರ ಮಾದಕ ಪದಾರ್ಥಗಳು ಧಾರಾಳವಾಗಿ ಸಿಗುತ್ತಿವೆ. ಇದರ ಹಿಂದೆ ವ್ಯವಸ್ಥಿತ ಜಾಲ ಇರುವುದನ್ನು ತಳ್ಳಿಹಾಕುವಂತಿಲ್ಲ. ಕಳೆದ ಕೆಲವು ತಿಂಗಳ ಹಿಂದೆ ಆಂಧ್ರಪ್ರದೇಶದಿಂದ ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಕರ್ನಾಟಕದ ಪೊಲೀಸರು ಪತ್ತೆ ಮಾಡಿ ಜಪ್ತಿ ಮಾಡಿದರು. ಆದರೆ ಮೂಲಕ್ಕೆ ಹೋಗಲು ಅವರಿಗೆ ಸಾಧ್ಯವಾಗಿಲ್ಲ. ಮತ್ತೊಂದು ಘಟನೆಯಲ್ಲಿ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ಕೇರಳದ ವಿದ್ಯಾರ್ಥಿಗಳು ವಾಸಕ್ಕೆ ಬಾಡಿಗೆ ಮನೆ ಪಡೆದು ಗಾಂಜಾ ಬೆಳೆಯಲು ಮನೆಯೊಳಗೆ ಪೂರಕವಾದ ಕೃತಕ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿಕೊಂಡಿದ್ದರು. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಾಗ ಆತಂಕಕಾರಿ ಸಂಗತಿ ಬಯಲಿಗೆ ಬಂದಿತ್ತು. ಈ ವೈದ್ಯಕೀಯ ವಿದ್ಯಾರ್ಥಿಗಳು ಗಾಂಜಾ ಬೆಳೆದು ತಾವು ಬಳಕೆ ಮಾಡುವುದಲ್ಲದೆ ವಿವಿಧೆಡೆ ಪೂರೈಕೆ ಮಾಡುತ್ತಿದ್ದರು. ಮನೆಯಲ್ಲಿ ಗಾಂಜಾ ಬೆಳೆಯಲು ಮಾಡಿಕೊಂಡಿದ್ದ ಕೃತಕ ವ್ಯವಸ್ಥೆಯನ್ನು ನೋಡಿ ಪೊಲೀಸರೇ ದಂಗಾಗಿದ್ದರು.

ಇನ್ನೂ ಅಚ್ಚರಿಯ ಸಂಗತಿ ಎಂದರೆ ಈ ವಿದ್ಯಾರ್ಥಿಗಳು ಕೇರಳದ ಪ್ರತಿಷ್ಠಿತ ಕುಟುಂಬದಿಂದ ಬಂದವರಾಗಿದ್ದರು. ಈ ಮೊದಲು ಕೂಲಿಕಾರ್ವಿುಕರು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗಿರುತ್ತಿದ್ದರು. ಈಗ ವಿದ್ಯಾರ್ಥಿ ಸಮೂಹ ಮೊದಲ ಸ್ಥಾನದಲ್ಲಿದೆ. ಎಂಬಿಎ ವಿದ್ಯಾರ್ಥಿಯೊಬ್ಬ ಗಾಂಜಾ ಮಾರಾಟ ಜಾಲದ ಸೂತ್ರಧಾರನಾಗಿದ್ದು, ಆತನ ಬಳಿ ದೊಡ್ಡ ಮೊತ್ತದ ಗಾಂಜಾವನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದರು. ಪೊಲೀಸ್ ಇಲಾಖೆಯ ಮಾಹಿತಿಯನ್ನು ಆಧರಿಸಿ ಹೇಳುವುದಾದರೆ ಮಾದಕ ಜಾಲಕ್ಕೆ ಬಲಿಯಾದವರಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸೆಕ್ಯುರಿಟಿ ಇದ್ದರೂ ಕೂಡ ಜೈಲುಗಳಲ್ಲೂ ಮಾದಕ ಪದಾರ್ಥಗಳು ಸಿಗುತ್ತಿರುವುದು ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿ. ವರ್ಷದಲ್ಲಿ ಬೆಂಗಳೂರು ಪೊಲೀಸರು 50 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಾರ್ಕೆಟಿಕ್ ವಶಪಡಿಸಿಕೊಂಡಿದ್ದಾರೆ. ಇದೇ ಅವಧಿಯಲ್ಲಿ ಬೆಂಗಳೂರಿನಲ್ಲಿ ವಶಪಡಿಸಿಕೊಂಡ ಗಾಂಜಾ ಪ್ರಮಾಣ 12 ಕೋಟಿ ರೂ.ಗಳಿಗೂ ಅಧಿಕ. ಮಲೆನಾಡಿನ ಕೆಲವೆಡೆ ಹೊಲಗಳಲ್ಲಿ ಕೃಷಿಯ ನಡುವೆ ಗಾಂಜಾ ಬೆಳೆಯುತ್ತಿರುವ ಪ್ರಕರಣಗಳು ಇವೆ.

ಇನ್ನು ನೆರೆ ರಾಜ್ಯಗಳಿಂದ ಭಾರಿ ಪ್ರಮಾಣದಲ್ಲಿ ಗಾಂಜಾದಂತಹ ಸರಕು ರಾಜ್ಯಕ್ಕೆ ಬರುತ್ತಿರುವುದು ಪದೇಪದೆ ಖಚಿತವಾಗುತ್ತಿದೆ. ಮೊನ್ನೆ ಸಿನಿಮೀಯ ಶೈಲಿಯಲ್ಲಿ ಗಾಂಜಾ ಸಾಗಣೆ ಪತ್ತೆಯಾಗಿದ್ದು ಕೂಡ ಹೊರ ರಾಜ್ಯದಿಂದಲೇ ಬಂದದ್ದು. ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ಪತ್ತೆ ಮಾಡುತ್ತಿರುವುದು ಇದು ನಿರಂತರವಾಗಿ ನಡೆಯುತ್ತಿರುವ ಕೃತ್ಯ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಕರ್ನಾಟಕ ಡ್ರಗ್ಸ್​ಮುಕ್ತ ರಾಜ್ಯವಾಗಬೇಕಾದರೆ ಪೊಲೀಸ್ ಇಲಾಖೆ ಮೇಲೆ ಪ್ರಭಾವಿಗಳ ಹಸ್ತಕ್ಷೇಪ ನಿಯಂತ್ರಣವಾಗಬೇಕು. ಮಾದಕವಸ್ತುಗಳ ನಿಯಂತ್ರಣಕ್ಕೆ ಚುರುಕಾದ ಪ್ರತ್ಯೇಕ ವ್ಯವಸ್ಥೆ ಬೇಕಿದೆ. ಕೆಲವು ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳೂ ಜಾಲಕ್ಕೆ ಕೈ ಜೋಡಿಸಿರುವ ಉದಾಹರಣೆಗಳಿರುವಾಗ ಸರ್ಕಾರದ ವಿಶೇಷ ಗಮನವೂ ಸದ್ಯದ ಸ್ಥಿತಿಯಲ್ಲಿ ಹೆಚ್ಚಿನ ಅಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net