ಚಿಂತನೆ ಬೇಗ ಕಾರ್ಯಗತವಾಗಲಿ: ಪಂಚಾಯಿತಿಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ 60 ತಿಂಗಳಿಗೆ ವಿಸ್ತರಣೆ

Panchayath Cartoon
Published on

ಪಂಚಾಯತ್​ರಾಜ್ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯನ್ನು 30 ತಿಂಗಳಿನಿಂದ 60 ತಿಂಗಳಿಗೆ ವಿಸ್ತರಣೆ ಮಾಡಲು ಸರ್ಕಾರ ಚಿಂತನೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯನ್ನು 30 ತಿಂಗಳುಗಳಿಗೆ ನಿಗದಿಪಡಿಸಿದರೆ ರಾಜಕಾರಣಿಗಳು ತಮ್ಮ ಬೆಂಬಲಿಗರಿಗೆ ಅಧಿಕಾರದ ಅವಕಾಶ ಕಲ್ಪಿಸಲು ಈ ಅವಧಿಯನ್ನು ತಮಗೆ ತೋಚಿದಂತೆ ಹಂಚಿಕೆ ಮಾಡಲು ಮುಂದಾಗುತ್ತಿದ್ದಾರೆ. 30 ತಿಂಗಳನ್ನು ಅವಧಿಯನ್ನು ಮೂವರಿಂದ ನಾಲ್ವರಿಗೆ ಹಂಚಿಕೆ ಮಾಡಿ ಬೆಂಬಲಿಗರಿಗೆ ಅಧಿಕಾರದ ಭಾಗ್ಯ ಕಲ್ಪಿಸುತ್ತಿದ್ದಾರೆ. ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರಿಗೆ ಈಗ ಇರುವ 30 ತಿಂಗಳ ಅವಧಿಯನ್ನು ಹಂಚಿಕೆ ಮಾಡುವುದರಿಂದ ಐದು ವರ್ಷಗಳ ಅವಧಿಯಲ್ಲಿ ಐದರಿಂದ ಏಳು ಜನ ಅಧ್ಯಕ್ಷ-ಉಪಾಧ್ಯಕ್ಷರು ಅಧಿಕಾರ ನಡೆಸುತ್ತಾರೆ. ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಮೂರು ತಿಂಗಳಿಗೆ ಒಬ್ಬರು ಅಧ್ಯಕ್ಷರಾದ ನಿದರ್ಶನಗಳು ಸಿಗುತ್ತವೆ. ಈ ಅಧಿಕಾರ ಹಂಚಿಕೆಯ ಸೂತ್ರ ಆಡಳಿತ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಪಂಚಾಯತ್ ರಾಜ್ ವ್ಯವಸ್ಥೆಯ ಉದ್ದೇಶವನ್ನೇ ಬುಡಮೇಲು ಮಾಡುವಂತಿದೆ.

ರಾಜಕಾರಣಿಗಳು ತಮ್ಮ ಬೆಂಬಲಿಗರನ್ನು ತೃಪ್ತಿಪಡಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಹಂತದಿಂದ ಜಿಲ್ಲಾ ಪಂಚಾಯಿತಿ ಹಂತದವರೆಗೂ ಅಧಿಕಾರ ಹಂಚಿಕೆ ಸೂತ್ರವನ್ನು ಅಲಿಖಿತವಾಗಿ ಜಾರಿಗೆ ತಂದಿದ್ದಾರೆ. ಇದರಲ್ಲಿ ಪಕ್ಷಭೇದ ಇಲ್ಲ. ಎಲ್ಲ ಪಕ್ಷಗಳ ಮುಖಂಡರೂ ಈ ಸೂತ್ರ ಪಾಲನೆ ಮಾಡುತ್ತಿದ್ದಾರೆ.

ಸರ್ಕಾರ ಈಗ ಅಧ್ಯಕ್ಷ-ಉಪಾಧ್ಯಕ್ಷರಿಗೆ ತಲಾ 30 ತಿಂಗಳ ಅವಧಿಯನ್ನು ನಿಗದಿಪಡಿಸಿದ್ದರೂ ರಾಜ್ಯದ ಯಾವುದೇ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅವಧಿಪೂರ್ಣ ಆಡಳಿತ ನಡೆಸಲು ಅವಕಾಶ ಸಿಕ್ಕಿಲ್ಲ. ಅಧ್ಯಕ್ಷ ಸ್ಥಾನ ಅಲಂಕರಿಸುವ ಪೂರ್ವದಲ್ಲೇ ಎಷ್ಟು ತಿಂಗಳ ನಂತರ ಅಧಿಕಾರದಿಂದ ಕೆಳಗಿಳಿದು ಮತ್ತೊಬ್ಬ ಸದಸ್ಯರಿಗೆ ಅವಕಾಶ ಕಲ್ಪಿಸಬೇಕು ಎಂದು ಒಪ್ಪಂದ ಮಾಡಿಕೊಳ್ಳುವ ಕೆಟ್ಟ ಪರಂಪರೆ ಆರಂಭವಾಗಿದೆ. ಒಂದು ವೇಳೆ ಆಂತರಿಕ ಒಪ್ಪಂದದ ಪ್ರಕಾರ ರಾಜೀನಾಮೆ ಸಲ್ಲಿಸಿ ಮತ್ತೊಬ್ಬರಿಗೆ ಅವಕಾಶ ಕಲ್ಪಿಸದಿದ್ದರೆ ಅವಿಶ್ವಾಸ ಗೊತ್ತುವಳಿ ಮಂಡನೆಯ ಅಸ್ತ್ರ ಪ್ರಯೋಗಿಸಲಾಗುತ್ತದೆ.

ಯಾವುದೇ ಒಂದು ಸಂಸ್ಥೆಯಲ್ಲಿ ಅಧ್ಯಕ್ಷರು ಸರ್ಕಾರ ನಿಗದಿಪಡಿಸಿರುವ 30 ತಿಂಗಳು ಪೂರ್ಣ ಅಧಿಕಾರ ನಡೆಸಿದ ಉದಾಹರಣೆ ಸಿಗಲಾರದು. ತಮಗೆ ಸಿಕ್ಕಿರುವ ಅಧಿಕಾರದ ಅವಧಿ ಬೆರಳೆಣಿಕೆ ತಿಂಗಳು ಮಾತ್ರ ಎಂದು ಗೊತ್ತಿರುವ ಕಾರಣ ಅಧ್ಯಕ್ಷರಿರಲಿ, ಉಪಾಧ್ಯಕ್ಷರಿರಲಿ ಅಭಿವೃದ್ಧಿಯ ಕಡೆ ಗಮನ ಕೊಡುವುದಿಲ್ಲ.

ಈ ಅಧಿಕಾರ ಹಂಚಿಕೆ ಸೂತ್ರದ ಮತ್ತೊಂದು ಸಮಸ್ಯೆ ಎಂದರೆ ಆಂತರಿಕ ಒಪ್ಪಂದದ ಪ್ರಕಾರ ಯಾರಾದರೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಕಾನೂನು ಸಮರ ಆರಂಭವಾಗುತ್ತದೆ. ಇಂತಹ ಹಲವಾರು ನಿದರ್ಶನಗಳು ರಾಜ್ಯದಲ್ಲಿ ಇದ್ದು, ಕಾನೂನು ಸಮರದ ಕಾಲದಲ್ಲಿ ಆಡಳಿತ ವ್ಯವಸ್ಥೆ ಹಳಿ ತಪ್ಪುತ್ತಿದೆ. ಈ ಅಲಿಖಿತ ಅಧಿಕಾರ ಹಂಚಿಕೆ ಸೂತ್ರದ ದುಷ್ಪರಿಣಾಮ ಸರ್ಕಾರದ ಗಮನಕ್ಕೆ ಬಂದಿರಲಿಕ್ಕೂ ಸಾಕು. ಈ ಕಾರಣದಿಂದಲೋ ಏನೋ ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯನ್ನು 60 ತಿಂಗಳಿಗೆ ವಿಸ್ತರಿಸಲು ಚಿಂತನೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಸರ್ಕಾರ ಏನೇ ಮಾಡಿದರೂ ರಂಗೋಲಿ ಕೆಳಗೆ ನುಸುಳುವವರು ಇದ್ದೇ ಇರುತ್ತಾರೆ. ಹೀಗಾಗಿ, ಬೆರಳೆಣಿಕೆ ತಿಂಗಳ ಲೆಕ್ಕದಲ್ಲಿ ಅಧಿಕಾರ ಹಂಚುವ ಅವಕಾಶ ಇಲ್ಲದಂತೆ, ಅವಧಿಪೂರ್ಣ (60 ತಿಂಗಳು) ಆಡಳಿತ ನಡೆಸಲು ಅನುವಾಗುವಂತೆ ಕಾಯ್ದೆ ರೂಪಿಸುವುದು ಒಳ್ಳೆಯದು. ಹಾಗೆಯೇ 60 ತಿಂಗಳು ಸಿಕ್ಕಿದೆ ಎಂದು ಬೇಕಾಬಿಟ್ಟಿ ಆಡಳಿತ ನಡೆಸುವ ಅಧ್ಯಕ್ಷ - ಉಪಾಧ್ಯಕ್ಷರಿಗೂ ಕಡಿವಾಣ ಹಾಕುವ ಅಸ್ತ್ರವೂ ಇರಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net