

ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಬೃಹತ್ ಪ್ರಮಾಣದ ಮಾದಕವಸ್ತು ಕಳ್ಳಸಾಗಣೆ ಮತ್ತು ಪೆಡ್ಲಿಂಗ್ ಜಾಲವನ್ನು ಜಮ್ಮು-ಕಾಶ್ಮೀರ ಪೊಲೀಸರು ಭೇದಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಮಾದಕದ್ರವ್ಯ ಸಾಗಣೆ ಪ್ರಕರಣದಲ್ಲಿ ಬಂಧಿತ 17 ಜನರ ಪೈಕಿ ಐವರು ಪೊಲೀಸರೂ ಸೇರಿರುವುದು. ಸ್ಥಳೀಯ ಯುವಕರ ಭವಿಷ್ಯವನ್ನು ಹಾಳುಮಾಡುವ ದುರುದ್ದೇಶದಿಂದ ಕಾಶ್ಮೀರ ಕಣಿವೆಯಲ್ಲಿ ಮಾದಕ ದ್ರವ್ಯಗಳನ್ನು ಸುರಿಯುವ ಈ ದುಷ್ಕೃತ್ಯದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ನೇರ ಕೈವಾಡ ಇರುವುದು ಕೂಡ ತನಿಖೆಯಲ್ಲಿ ಬಹಿರಂಗಪಟ್ಟಿದೆ. ತಮ್ಮ ಸಹೋದ್ಯೋಗಿಗಳು ಹಾಗೂ ಭಯೋತ್ಪಾದಕರು ಕೂಡಿಕೊಂಡು ನಡೆಸುತ್ತಿರುವ ಈ ಅಪರಾಧವನ್ನು ಪತ್ತೆ ಮಾಡಿರುವ ರಾಜ್ಯ ಪೊಲೀಸರ ಶ್ರಮ ಶ್ಲಾಘನೀಯವಾಗಿದೆ.
ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯನ್ನು ದಾಟಿ 1990ರಲ್ಲಿಯೇ ಪಾಕ್ ಆಕ್ರಮಿತ ಗಡಿ ಪ್ರದೇಶದಲ್ಲಿ ಭಯೋತ್ಪಾದನೆ ತರಬೇತಿ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬ ಈಗ ಮಗನ ಮೂಲಕ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿರುವ ವಿಚಾರ ಕೂಡ ಬೆಳಕಿಗೆ ಬಂದಿದೆ. ಈ ವರ್ಷ ಕುಪ್ವಾರ ಜಿಲ್ಲೆಯೊಂದರಲ್ಲಿಯೇ ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದಂತೆ 161 ಜನರ ವಿರುದ್ಧ 85 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ದಂಧೆಯಲ್ಲಿ ತೊಡಗಿರುವ ಸಾಕಷ್ಟು ಜನರನ್ನು ಪಿಐಟಿ-ಎನ್ಡಿಪಿಎಸ್ ಕಾಯ್ದೆಯಡಿ ಬಂಧಿಸಿ ವಿವಿಧ ಜೈಲುಗಳಿಗೆ ಅಟ್ಟಲಾಗಿದೆ. ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ 220ಕ್ಕೂ ಅಧಿಕ ಜನರನ್ನು ರಾಜಧಾನಿ ಶ್ರೀನಗರವೊಂದರಲ್ಲೇ ಈ ವರ್ಷ ಬಂಧಿಸಲಾಗಿದೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ (ಏಮ್್ಸ) ರಾಷ್ಟ್ರೀಯ ಔಷಧ ಅವಲಂಬನೆ ಚಿಕಿತ್ಸಾ ಕೇಂದ್ರದ ಇತ್ತೀಚಿನ ಸಮೀಕ್ಷೆಯ ಪ್ರಕಾರ ಕಣಿವೆ ರಾಜ್ಯದಲ್ಲಿ ಆರು ಲಕ್ಷಕ್ಕೂ ಹೆಚ್ಚು ಜನರು ಮಾದಕ ವ್ಯಸನಕ್ಕೆ ಬಲಿಯಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರವು ಸಮಾಜದಿಂದ ಮಾದಕ ವ್ಯಸನವನ್ನು ತೊಡೆದುಹಾಕುವ ದೃಷ್ಟಿಯಿಂದ ಸಮಗ್ರ ಮಾದಕ ವ್ಯಸನ ನಿಗ್ರಹ ನೀತಿ ಅಳವಡಿಸಿಕೊಂಡಿದ್ದು, ಇಂತಹ ನೀತಿ ಅನುಷ್ಠಾನಗೊಳಿಸುತ್ತಿರುವ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶವಾಗಿ ಹೊರಹೊಮ್ಮಿದೆ. ಅಲ್ಲಿ ಮಾದಕ ವಸ್ತು ಜಾಲ ಬೆಳೆಯಲು ಪ್ರಮುಖ ಕಾರಣ ಪಾಕಿಸ್ತಾನ. ಭಾರತದ ವಿರುದ್ಧ ನೇರಯುದ್ಧದಲ್ಲಿ ಸಾಲು ಸಾಲು ಸೋಲನುಭವಿಸಿರುವ ಪಾಕಿಸ್ತಾನವು ಅನೇಕ ದಶಕಗಳಿಂದ ಪರೋಕ್ಷ ಯುದ್ಧದಲ್ಲಿ ತೊಡಗಿದೆ. ಭಯೋತ್ಪಾದಕ ಸಂಘಟನೆಗಳ ಪೋಷಣೆ, ನಕಲಿ ನೋಟುಗಳ ಜಾಲ, ಮಾದಕ ವಸ್ತು ಕಳ್ಳಸಾಗಣೆ ಮುಂತಾದವು ಈ ಛಾಯಾಸಮರದ ಪ್ರಮುಖ ಅಸ್ತ್ರಗಳಾಗಿವೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ವಿಧಿ 370ರ ರದ್ದತಿ, ಈ ರಾಜ್ಯವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆ, ಸೇನಾಪಡೆಗಳಿಗೆ ಹೆಚ್ಚಿನ ಅಧಿಕಾರ ಮುಂತಾದ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡ ಹಿನ್ನೆಲೆಯಲ್ಲಿ ಭಯೋತ್ಪಾದನೆ ಪ್ರಮಾಣವು ಸಾಕಷ್ಟು ತಗ್ಗಿದೆ. ಮಾದಕವಸ್ತು ತಯಾರಿಕೆಗೆ ಬಳಸಲಾಗುವ ಅಫೀಮಿನ ಶೇ. 80ರಷ್ಟನ್ನು ಅಪ್ಘಾನಿಸ್ತಾನ, ಪಾಕಿಸ್ತಾನ, ಇರಾನ್ಗಳಲ್ಲಿ ಉತ್ಪಾದಿಸಲಾಗುತ್ತಿದೆ. ಕಾಶ್ಮೀರವು ಭೌಗೋಳಿಕವಾಗಿ ಈ ರಾಷ್ಟ್ರಗಳಿಗೆ ಸಮೀಪದಲ್ಲಿರುವುದರಿಂದ ಪಾಕಿಸ್ತಾನವು ಮಾದಕವಸ್ತು ಜಾಲವನ್ನು ಹರಡುವ ಪ್ರಯತ್ನವನ್ನು ತೀವ್ರಗೊಳಿಸಿದೆ. ಪಂಜಾಬ್ ರಾಜ್ಯದಲ್ಲಿಯೂ ಡ್ರಗ್ಸ್ ದಂಧೆ ಹರಡಲು ಈ ಹಿಂದೆ ಪಾಕಿಸ್ತಾನ ಯತ್ನಿಸಿತ್ತು. ಈಗ ಕಾಶ್ಮೀರದಲ್ಲಿ ಅಂಥದೇ ಯತ್ನ ನಡೆಸುತ್ತಿದ್ದು, ತಕ್ಕ ಉತ್ತರ ನೀಡಬೇಕಿದೆ.