ವಿಳಂಬ ಸಲ್ಲದು: ರಾಜ್ಯದಲ್ಲಿ ಮಳೆ ಅಭಾವ, ಬರ ಪರಿಹಾರ ಕ್ರಮ

Draught
Published on

ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದ್ದು, ಬರಗಾಲದ ಮುನ್ಸೂಚನೆ ಕಂಡುಬರುತ್ತಿದೆ. ರಾಜ್ಯದ 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಸಾಕಷ್ಟು ಪ್ರಮಾಣದಲ್ಲಿ ಮಳೆಯ ಅಭಾವವಾಗಿದೆ. ಕಳೆದ ಜೂನ್ ತಿಂಗಳಲ್ಲಿ ಸರಾಸರಿಗಿಂತ ಶೇಕಡಾ 56ರಷ್ಟು ಕೊರತೆಯಾಗಿದೆ. ಜುಲೈ ತಿಂಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಮೊದಲೆರಡು ವಾರಗಳಲ್ಲಿ ಶೇಕಡಾ 34ರಷ್ಟು ಮಳೆ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಬೇಕೆಂಬ ಬೇಡಿಕೆ ಕೇಳಿಬರುತ್ತಿದ್ದರೂ ರಾಜ್ಯ ಸರ್ಕಾರವು ಇನ್ನಷ್ಟು ದಿನ ಕಾದು ನೋಡುವ ನೀತಿಯನ್ನು ಅನುಸರಿಸಲು ಮುಂದಾದಂತಿದೆ.

ಈ ಹಿಂದೆಯೇ ಬರಗಾಲ ಘೊಷಣೆ ಮಾಡಬೇಕೆಂಬ ಬೇಡಿಕೆಯಿತ್ತು. ಆದರೆ, ಜುಲೈ ತಿಂಗಳ 2ನೇ ವಾರ ರಾಜ್ಯದ ಕೆಲವು ಕಡೆ ಉತ್ತಮ ಮಳೆಯಾಗಿದ್ದರಿಂದ ಕಾದು ನೋಡುವ ತಂತ್ರ ಅನುಸರಿಸಲಾಗುತ್ತಿದೆ. ಬರಗಾಲ ಘೊಷಣೆ ಕುರಿತಂತೆ ಕಂದಾಯ ಸಚಿವರ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಈಗಾಗಲೇ ಈ ಸಮಿತಿಯು ಸಭೆ ಸೇರಿ ರ್ಚಚಿಸಿದ್ದು, ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ನಿರ್ಧಾರ ಕೈಗೊಳ್ಳಲಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿರುವುದು ಸರ್ಕಾರದ ನಿಲುವಿನ ಪ್ರತೀಕವಾಗಿದೆ. ಮಳೆ ಕೊರತೆ ಜುಲೈ ಮೊದಲ ವಾರದಲ್ಲೂ ಮುಂದುವರಿದರೆ ಬರ ಪರಿಸ್ಥಿತಿ ಘೋಷಿಸುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಕಳೆದ ತಿಂಗಳು ಹೇಳಿದ್ದರು. ಆದರೀಗ ಜುಲೈನಲ್ಲಿ ಮಳೆ ಕೊರತೆಯಾದರೂ ಈ ಕುರಿತು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲು ಏಕೆ ಮುಂದಾಗಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ. ರಾಜ್ಯ ಸರ್ಕಾರ ಬರ ಘೊಷಣೆ ಮಾಡಿ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂಪಾಯಿ ಅನುದಾನ ಘೊಷಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ವಿವಿಧ ಕೃಷಿ ಬೆಳೆಗಳನ್ನು 82.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳುವ ಗುರಿಯನ್ನು ಹೊಂದಲಾಗಿದೆ. ಆದರೆ, ಜುಲೈ ಮೊದಲ ವಾರದವರೆಗೂ 26.82 ಲಕ್ಷ ಹೆಕ್ಟೇರ್, ಅಂದರೆ ಶೇಕಡಾ 33ರಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಬಳ್ಳಾರಿ, ಕೊಡಗು, ತುಮಕೂರು ಜಿಲ್ಲೆಗಳಲ್ಲಂತೂ ಬಿತ್ತನೆ ಕ್ಷೇತ್ರದ ಪ್ರಮಾಣ ಶೇಕಡಾ 10ಕ್ಕಿಂತ ಕಡಿಮೆ ಇರುವುದು ಆತಂಕಕಾರಿಯಾಗಿದೆ.

ಮಳೆಯ ಕೊರತೆ, ಬಿತ್ತನೆಯ ವಿಸ್ತೀರ್ಣ, ಸಾಮಾನ್ಯೀಕರಿಸಿದ ವ್ಯತ್ಯಾಸ ಸಸ್ಯವರ್ಗ ಸೂಚ್ಯಂಕ ಮತ್ತು ತೇವಾಂಶದ ಸಮರ್ಪಕತೆ ಅಂಶಗಳನ್ನು ಸಾಮಾನ್ಯವಾಗಿ ಪರಿಗಣಿಸಿ ಬರ ಘೊಷಣೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಸೂಚಕಗಳ ಮಾಹಿತಿಯು ತಾಲೂಕು, ಜಿಲ್ಲಾ ಮಟ್ಟದಲ್ಲಿ ಲಭ್ಯವಿರುತ್ತದೆ. ರಾಜ್ಯ ಸರ್ಕಾರವು ತಕ್ಷಣವೇ ಸಮೀಕ್ಷಾ ವರದಿ ತರಿಸಿಕೊಂಡು ಬರಗಾಲ ಘೊಷಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವುದು ಅಪೇಕ್ಷಣೀಯ. ರಾಜ್ಯದ ಎಲ್ಲೆಡೆಯಲ್ಲದಿದ್ದರೂ ತೀವ್ರ ಮಳೆ ಕೊರತೆ ಇರುವ ತಾಲೂಕುಗಳಲ್ಲಾದರೂ ತಕ್ಷಣವೇ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net