ಮೀಸಲು ಉದ್ದೇಶ ಈಡೇರಲಿ: ಮಹಿಳೆ ಹೆಸರಿನಲ್ಲಿ ಪುರುಷರ ಆಡಳಿತಕ್ಕೆ ಅವಕಾಶವಾಗದಿರಲಿ

Samvidhan Sadan
Published on

ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಪ್ರತಿಶತ 33ರಷ್ಟು ಮೀಸಲಾತಿಗೆ ಕಾಲ ಕೂಡಿ ಬರುತ್ತಿದೆ. ಲೋಕಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತಿದ್ದು, ರಾಜ್ಯಸಭೆಯಲ್ಲೂ ಬಹುಮತ ಇರುವ ಕಾರಣ ಅಂಗೀಕಾರ ಸಿಗುವ ವಿಶ್ವಾಸ ಕೇಂದ್ರ ಸರ್ಕಾರಕ್ಕಿದೆ. ಕಾಂಗ್ರೆಸ್ ಪಕ್ಷವೂ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಭಾಗಿದಾರ ಪಕ್ಷಗಳು ಮಸೂದೆ ಪರ ಇರುವುದರಿಂದ ಮೇಲ್ಮನೆಯಲ್ಲೂ ಅನುಮೋದನೆ ಪಡೆಯಲು ಯಾವುದೇ ಅಡ್ಡಿ ಆತಂಕಗಳಿಲ್ಲ. ಆದರೆ ಈ ಮೀಸಲಾತಿಯ ಉದ್ದೇಶ ಈಡೇರುವಂತೆ ನೋಡಿಕೊಳ್ಳುವುದು ಮಹತ್ವದ್ದು. ಮಹಿಳೆಯರ ಹೆಸರಿನಲ್ಲಿ ಮತ್ತೆ ಪುರುಷರೇ ಆಡಳಿತ ನಡೆಸುವುದಾದರೆ ಮೀಸಲಾತಿಯ ಉದ್ದೇಶ ಸಫಲವಾಗದು.

ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು ಎನ್ನುವುದು ಹಲವು ದಶಕಗಳ ಪ್ರಯತ್ನ. ಆದರೆ ಕಾಲಕಾಲಕ್ಕೆ ಹಲವು ರಾಜಕೀಯ ಪಕ್ಷಗಳಿಂದ ಸಹಮತ ವ್ಯಕ್ತವಾಗದೆ ಮಹಿಳಾ ಮೀಸಲು ಮಸೂದೆಗೆ ಅನುಮೋದನೆ ಸಿಕ್ಕಿರಲಿಲ್ಲ. ಕಡೆಗೂ ಕಾಲ ಕೂಡಿಬಂದಿದೆ. ಚುನಾವಣಾ ರಾಜಕಾರಣದಲ್ಲಿ ಸಕ್ರಿಯರಾಗಬೇಕು ಎಂಬ ಮಹಿಳೆಯರ ಆಸೆ ಈಡೇರುವ ದಿನಗಳು ಸಮೀಪಿಸುತ್ತಿವೆ.

ಈ ಮೀಸಲಾತಿ ಎಂದಿನಿಂದ ಅನ್ವಯವಾಗಬೇಕು ಎಂಬ ವಿಚಾರದಲ್ಲಿ ಮಾತ್ರ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳಲ್ಲಿ ಸಹಮತ ಇಲ್ಲ. ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ನಂತರ ಜಾರಿಗೆ ಕೇಂದ್ರ ಸರ್ಕಾರ ಒಲವು ಹೊಂದಿದೆ. ಆದರೆ ಬರಲಿರುವ ಚುನಾವಣೆಗಳಲ್ಲೇ ಮಹಿಳೆಯರಿಗೆ ಈ ಮೀಸಲಾತಿ ಸವಲತ್ತು ಸಿಗಬೇಕು ಎಂಬುದು ಕಾಂಗ್ರೆಸ್ ಸೇರಿದಂತೆ ಬಹುತೇಕ ಪ್ರತಿಪಕ್ಷಗಳ ಆಗ್ರಹವಾಗಿದೆ. ಕಾಂಗ್ರೆಸ್ ಸಹಿತ ಹಲವು ಪಕ್ಷಗಳು ಮಸೂದೆ ಮೇಲಿನ ಚರ್ಚೆಯಲ್ಲಿ ಒಳಮೀಸಲಾತಿ ಪ್ರಸ್ತಾಪ ಮಾಡಿವೆ. ಮಸೂದೆ ಮಂಡನೆ ಸಮಯದಲ್ಲೇ ಕೇಂದ್ರ ಸರ್ಕಾರ, ಈ ಮಸೂದೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಈಗ ನಿಗದಿಯಾಗಿರುವ ಮೀಸಲು ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಹಿಳೆಯರ ಹೆಸರಿನಲ್ಲಿ ಪುರುಷರೇ ಆಡಳಿತ ನಡೆಸುವಂತಹ ಪರಿಸ್ಥಿತಿ ನಿಯಂತ್ರಿಸುವುದೇ ಮೀಸಲು ನಿಗದಿ ನಂತರ ಎದುರಾಗುವ ಸವಾಲು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗುವ ಸದಸ್ಯರು ನೆಪಮಾತ್ರವಾಗಿದ್ದು, ಅವರ ಪತಿ ಇಲ್ಲವೇ ಮಕ್ಕಳೇ ಅಧಿಕಾರ ಚಲಾಯಿಸಿದ ನಿದರ್ಶನಗಳು ಇಲ್ಲದಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಇಂಥ ಹಲವು ಪ್ರಕರಣಗಳು ವರದಿಯಾಗಿವೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲಿ ಮಹಿಳಾ ಮೀಸಲು ಕಾರಣಕ್ಕೆ ಸ್ಪರ್ಧೆಯ ಅವಕಾಶ ಕಳೆದುಕೊಂಡವರು ತಮ್ಮಪತ್ನಿ ಇಲ್ಲವೇ ಮಗಳನ್ನು ಕಣಕ್ಕಿಳಿಸಿ, ಗೆದ್ದ ನಂತರ ಅವರ ಹೆಸರಿನಲ್ಲಿ ಪುರುಷರೇ ಆಡಳಿತ ನಡೆಸಿದ್ದಾರೆ. ಅಧಿಕಾರಿಗಳೂ ಕೂಡ ಮಹಿಳಾ ಸದಸ್ಯರನ್ನು ಪರಿಗಣಿಸದೆ ಅವರ ಪತಿ ಇಲ್ಲವೇ ತಂದೆಯ ಮಾತಿಗೆ ಮನ್ನಣೆ ನೀಡಿದ ನಿದರ್ಶನಗಳೂ ಇವೆ. ಸ್ಥಳೀಯ ಸಂಸ್ಥೆಗಳಿರಲಿ, ಶಾಸನಸಭೆಗಳಿರಲಿ ಮಹಿಳಾ ಮೀಸಲು ಕ್ಷೇತ್ರಗಳಲ್ಲಿ ಆಯ್ಕೆಯಾದ ಸದಸ್ಯರ ಅಧಿಕಾರವನ್ನು ಅವರ ಕುಟುಂಬದ ಸದಸ್ಯರು ಹೇಗೆ ದುರ್ಬಳಕೆ ಮಾಡಿಕೊಂಡಿದ್ದಾರೆ? ಮಹಿಳೆ ಹೆಸರಿನಲ್ಲಿ ಹೇಗೆ ಹಿಂಬಾಗಿಲಿನಿಂದ ಅಧಿಕಾರ ಚಲಾಯಿಸಲಾಗುತ್ತಿದೆ? ಈ ರೀತಿಯ ಅಧಿಕಾರ ದುರ್ಬಳಕೆಗೆ ಹೇಗೆ ಕಡಿವಾಣ ಹಾಕಬೇಕು ಎಂಬುದೂ ಸ್ಪಷ್ಟವಾಗಬೇಕು. ಹಾಗೆಯೇ ಮಹಿಳಾ ಮೀಸಲು ಉದ್ದೇಶ ಈಡೇರಬೇಕಾದರೆ ದುರ್ಬಳಕೆ ಮಾಡಿಕೊಂಡವರನ್ನು ಶಿಕ್ಷೆಗೆ ಗುರಿಪಡಿಸುವುದು ಸೂಕ್ತವೂ ಹೌದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net