

ರಾಜ್ಯವು ಮಂಗಳವಾರ ಎರಡು ರಾಷ್ಟ್ರೀಯ ಪಕ್ಷಗಳ ಪ್ರತಿಭಟನೆಗೆ ಸಾಕ್ಷಿಯಾಯಿತು. ಅನ್ನಭಾಗ್ಯ ಯೋಜನೆಯಲ್ಲಿ ಕುಟುಂಬದ ಪ್ರತಿ ವ್ಯಕ್ತಿಗೆ ತಲಾ ಹತ್ತು ಕೆಜಿ ಅಕ್ಕಿ ವಿತರಿಸುವ ಯೋಜನೆಗೆ ಹೆಚ್ಚುವರಿಯಾಗಿ ಅಗತ್ಯವಿರುವ ಅಕ್ಕಿಯನ್ನು ನೀಡುವಂತೆ ಮಾಡಿದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ; ಬೇಕೆಂದೇ ಈ ಯೋಜನೆಗೆ ಅಡ್ಡಿಮಾಡುತ್ತಿದೆ ಎಂದು ಆಪಾದಿಸಿ ಕಾಂಗ್ರೆಸ್ ಪಕ್ಷದ ನಾಯಕರು-ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇನ್ನೊಂದೆಡೆ, ಮತಾಂತರ ನಿಷೇಧ ಕಾಯ್ದೆ ರದ್ದತಿ, ವಿದ್ಯುತ್ ದರ ಹೆಚ್ಚಳ ಮುಂತಾದವನ್ನು ವಿರೋಧಿಸಿ ಹಾಗೂ ಅಧಿಕಾರಗಿಟ್ಟಿಸುವ ಸಲುವಾಗಿ ಕಾಂಗ್ರೆಸ್ ಸುಳ್ಳು ಗ್ಯಾರಂಟಿ ನೀಡಿ ಮೋಸಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.
ಒಟ್ಟಿನಲ್ಲಿ, ರಾಜಕೀಯ ಅಬ್ಬರ ಕಂಡುಬಂತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯೆನ್ನುವುದು ರಾಜಕೀಯ ಪಕ್ಷಗಳಿಗೆ ಇರುವ ಹಕ್ಕು. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲು ಎಲ್ಲರೂ ಸ್ವತಂತ್ರರು. ಆದರೆ ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿದರೆ ಬೇರೆಯದೇ ಭಾವನೆ ಮೂಡುತ್ತದೆ. ಕಾಂಗ್ರೆಸ್ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದಾಗ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ರಾಜಕೀಯ ನಡೆಯಬಹುದು ಎಂಬ ನಿರೀಕ್ಷೆ ಇದ್ದೇ ಇತ್ತು. ಏಕೆಂದರೆ ಇವೆರಡೂ ಪಕ್ಷಗಳ ಸಿದ್ಧಾಂತ ಮತ್ತಿತರ ವಿಚಾರಗಳಲ್ಲಿ ಅಜಗಜಾಂತರವಿದೆ. ಬಿಜೆಪಿ ಸರ್ಕಾರ ಇದ್ದಾಗ ಕೈಗೊಂಡ ಅನೇಕ ನಿರ್ಣಯಗಳ ಬಗ್ಗೆ ಆಗ ಪ್ರತಿಪಕ್ಷವಾಗಿದ್ದ ಕಾಂಗ್ರೆ ಖಡಾಖಡಿ ವಿರೋಧ ವ್ಯಕ್ತಪಡಿಸಿತ್ತು. ಅದರಲ್ಲೂ, ಮತಾಂತರ ನಿಷೇಧ ಖಾಯ್ದೆ, ಪಠ್ಯ ಪರಿಷ್ಕರಣೆ, ಗೋಹತ್ಯೆ ನಿಷೇಧ ಕಾಯ್ದೆ ಇತ್ಯಾದಿ ವಿಚಾರದಲ್ಲಿ ಹೆಚ್ಚು ತಾಕಲಾಟ ನಡೆದಿತ್ತು. ‘ನಾವು ಅಧಿಕಾರಕ್ಕೆ ಬಂದರೆ ಬಿಜೆಪಿ ಅವಧಿಯ ಕೆಲ ನಿರ್ಣಯಗಳನ್ನು ರದ್ದುಗೊಳಿಸುತ್ತೇವೆ’ ಎಂದು ಕಾಂಗ್ರೆಸ್ನ ಪ್ರಮುಖ ನಾಯಕರು ಚುನಾವಣಾ ಪ್ರಚಾರ ಸಂದರ್ಭದುದ್ದಕ್ಕೂ ಹೇಳಿಕೊಂಡೇ ಬಂದಿದ್ದರು. ಅದರಂತೆ, ಸರ್ಕಾರ ರಚನೆಯಾದ ಶುರುವಿನಿಂದಲೇ ಅಂಥ ನಿರ್ಣಯಗಳು ಹೊಮ್ಮತೊಡಗಿದವು. ಇದು ಸಹಜವಾಗಿ ಪ್ರತಿಪಕ್ಷ ಬಿಜೆಪಿಯನ್ನು ಕೆರಳಿಸಿದೆ. ಹೀಗಾಗಿ ಪ್ರತಿ ವಿಷಯದಲ್ಲಿಯೂ ಆಡಳಿತ-ವಿಪಕ್ಷ ನಡುವೆ ವಾಕ್ಸಮರ ಮಾಮೂಲು ಎಂಬಂತಾಗಿದೆ. ಎರಡು ಕಡೆಯವರೂ ಸದಾಕಾಲ ಸಮರಸನ್ನದ್ಧರಾಗೇ ಇರುವುದು ಗೋಚರಿಸುತ್ತಿದೆ. ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳಲ್ಲಿನ ಕುಂದುಕೊರತೆಗಳನ್ನು ಬಿಜೆಪಿ ಮುನ್ನೆಲೆಗೆ ತರುವ ಯತ್ನ ಮಾಡುತ್ತಿದ್ದರೆ, ‘ನಮ್ಮ ಯೋಜನೆಗಳ ಜಾರಿಗೆ ಬಿಜೆಪಿಯವರು ಬೇಕೆಂದೇ ಅಡ್ಡಗಾಲು ಹಾಕಿ ತೊಂದರೆ ಕೊಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಆಪಾದಿಸುತ್ತಿದೆ.
ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಒಂದುಮಟ್ಟಿನ ಜಗಳ, ವಾಗ್ವಾದ, ಅಭಿಪ್ರಾಯಭೇದ ಇವೆಲ್ಲ ಸಹಜವೇ. ಹಾಗೆನೋಡಿದರೆ, ರಾಜಕಾರಣ ರಂಗೇರುವುದೇ ಹೀಗೆ. ಆದರೆ ಇದು ಅತಿಯಾಗದೆ ಒಂದು ಮಿತಿಯಲ್ಲಿರುವುದು ಮುಖ್ಯ. ಎರಡೂ ಪಕ್ಷಗಳು ಪ್ರತಿಷ್ಠೆಗೆ ಅಂಟಿಕೊಂಡು ಕೂತರೆ, ವಿಷಯಾಧಾರಿತ ಚರ್ಚೆ ಬೇರೆ ದಿಕ್ಕಿಗೆ ಹೊರಳಿ ಅದರಿಂದ ನಷ್ಟವೇ ಹೆಚ್ಚಿಗೆಯಾಗುವ ಅಪಾಯವಿರುತ್ತದೆ. ಸಾರ್ವಜನಿಕ ಹಿತವೇ ಅಂತಿಮಗುರಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿದಾಗ ಆರೋಗ್ಯಕರ ವಾತಾವರಣ ಮೂಡಿಬರಲು ಸಾಧ್ಯ. ಆದರೆ ಮೇಲಾಟದ ರಾಜಕಾರಣದಲ್ಲಿ ಇಂಥದೊಂದು ವಿವೇಕದ, ವಿವೇಚನಾಯುಕ್ತ ನಡೆಯನ್ನು ನಿರೀಕ್ಷಿಸಬಹುದೇ ಎಂಬುದು ಜನರ ಮನದಲ್ಲಿರುವ ಪ್ರಶ್ನೆ.