ಎಚ್ಚರಿಕೆಯ ನಡೆ ಅಗತ್ಯ: ಕಾಶ್ಮೀರ ಒಳನಾಡಿನಿಂದ ಸೇನೆ ವಾಪಸಾತಿ ಚಿಂತನೆ

Editorial
Published on

ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮೂರೂವರೆ ವರ್ಷಗಳ ನಂತರ ಕಾಶ್ಮೀರ ಕಣಿವೆಯ ಒಳನಾಡು ಪ್ರದೇಶಗಳಲ್ಲಿ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಪ್ರಸ್ತಾಪದ ಬಗೆಗೆ ಈಗ ಗಂಭೀರವಾಗಿ ಚಿಂತನೆ ನಡೆಸಿರುವುದು ಕಣಿವೆ ನಾಡಿನಲ್ಲಿ ಭಯೋತ್ಪಾದನಾ ಕೃತ್ಯಗಳು ನಿಯಂತ್ರಣದಲ್ಲಿವೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ. 2019ರ ಆಗಸ್ಟ್ 5ರಂದು ಸಂವಿಧಾನ ವಿಧಿ 370 ಅನ್ನು ರದ್ದುಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಸಂದರ್ಭದಲ್ಲಿ ವ್ಯಾಪಕ ಪ್ರಮಾಣದಲ್ಲಿ ಸೇನೆಯನ್ನು ಈ ರಾಜ್ಯದಲ್ಲಿ ನಿಯೋಜಿಸಿತ್ತು. ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡಿದ್ದು ಮಾತ್ರವಲ್ಲದೆ, ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ 2019ರ ಅಕ್ಟೋಬರ್ 31ರಂದು ವಿಭಜಿಸಲಾಯಿತು. ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾದರೆ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶವಾಯಿತು. ಬದಲಾದ ಪರಿಸ್ಥಿತಿ ನಿಭಾಯಿಸಲು ಸೇನೆಯನ್ನು ವ್ಯಾಪಕ ಪ್ರಮಾಣದಲ್ಲಿ ಆಗ ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು. ಪ್ರಸ್ತುತ ಅಂದಾಜು 1 ಲಕ್ಷ 30 ಸಾವಿರ ಸೇನಾ ಸಿಬ್ಬಂದಿ ಈ ಪ್ರದೇಶದಲ್ಲಿದ್ದಾರೆ. ಈ ಪೈಕಿ ಅಂದಾಜು 80 ಸಾವಿರ ಸೈನಿಕರು ಗಡಿ ಕಾವಲು ಕಾರ್ಯದಲ್ಲಿ ತೊಡಗಿದ್ದರೆ, ರಾಷ್ಟ್ರೀಯ ರೈಫಲ್ಸ್​ನ

45,000 ಸಿಬ್ಬಂದಿ ಕಾಶ್ಮೀರದ ಒಳನಾಡಿನಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದಾರೆ. ಒಳನಾಡಿನಿಂದ ಸೇನೆಯನ್ನು ಹಿಂತೆಗೆದುಕೊಳ್ಳುವ ಪ್ರಸ್ತಾವನೆಯು ಎರಡು ವರ್ಷಗಳಿಂದ ಚರ್ಚೆಯಲ್ಲಿದ್ದು, ಈ ಕುರಿತಂತೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡರೂ ಗಡಿ ನಿಯಂತ್ರಣ ರೇಖೆಯಲ್ಲಿ ಮಾತ್ರ ಸೇನೆಯ ನಿಯೋಜನೆ ಎಂದಿನಂತೆ ಮುಂದುವರಿಯಲಿದೆ.

2019ರಲ್ಲಿ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಹಿಂತೆದುಕೊಂಡ ನಂತರ ಭಯೋತ್ಪಾದಕ ಹಿಂಸಾಚಾರ ಘಟನೆಗಳು ಮತ್ತು ಭದ್ರತಾ ಸಿಬ್ಬಂದಿಯ ಹತ್ಯೆ ಪ್ರಕರಣಗಳು ಸರಿಸುಮಾರು 50 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಸರ್ಕಾರ ಹೇಳಿದೆ. ಕಲ್ಲು ತೂರಾಟ ಘಟನೆಗಳು ಬಹುತೇಕ ಮಾಯವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಎಂದು ಅಂಕಿ-ಅಂಶಗಳು ಸೂಚಿಸುತ್ತವೆ. ಈ ಹಿನ್ನೆಲೆಯಲ್ಲಿ ಕಾಶ್ಮೀರದ ಸಾಮಾನ್ಯ ಸ್ಥಿತಿಯತ್ತ ಸಾಗುತ್ತಿರುವುದರ ಬಗೆಗೆ ಹೇಳಿಕೊಳ್ಳುವುದಲ್ಲದೆ, ಅದು ಬಹಿರಂಗವಾಗಿ ಗೋಚರಿಸುವಂತೆ ಮಾಡುವ ಉದ್ದೇಶವು ಸೇನೆಯನ್ನು ಒಳನಾಡು ಪ್ರದೇಶಗಳಿಂದ ಹಿಂತೆಗೆದುಕೊಳ್ಳುವ ಆಲೋಚನೆಯ ಹಿಂದಿದೆ. ಸಂಪೂರ್ಣ ಸೇನೆಯನ್ನು ಏಕಕಾಲದಲ್ಲಿ ಹಿಂತೆಗೆದುಕೊಳ್ಳದೆ, ಹಂತಹಂತವಾಗಿ ಒಂದೊಂದೇ ಜಿಲ್ಲೆಯಿಂದ ಹಿಂದೆಗೆಯಲು ಹಾಗೂ ಸೇನಾಪಡೆಯ ಬದಲು ಸಿಆರ್​ಪಿಎಫ್ (ಕೇಂದ್ರೀಯ ಮೀಸಲು ಪೊಲೀಸ್ ಪಡೆ) ಸಿಬ್ಬಂದಿಯನ್ನು ನಿಯೋಜಿಸಲು ಉದ್ದೇಶಿಸಿರುವುದು ಸಮಯೋಚಿತ ಹಾಗೂ ಮುಂಜಾಗ್ರತೆಯ ಆಲೋಚನೆಯೇ ಆಗಿದೆ. ಏಕೆಂದರೆ, ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಕೃತ್ಯಗಳು ತಗ್ಗಿವೆ ಹೊರತು ಸಂಪೂರ್ಣ ಸ್ಥಗಿತಗೊಂಡಿಲ್ಲ. ಆದರೂ, ಸೇನೆ ಹಿಂತೆಗೆದುಕೊಳ್ಳುವ ಪ್ರಸ್ತಾಪವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಸಂಗತಿಯೊಂದು ಅನುಕೂಲಕರವಾಗಿ ಪರಿಣಮಿಸಬಹುದಾಗಿದೆ. ಅದೆಂದರೆ, ಪಾಕಿಸ್ತಾನವು ಸದ್ಯ ಆರ್ಥಿಕವಾಗಿ ದಿವಾಳಿ ಸ್ಥಿತಿಯತ್ತ ಸಾಗಿರುವುದು ಹಾಗೂ ಕಾಶ್ಮೀರದ ಭಯೋತ್ಪಾದನೆಯನ್ನು ಪೋಷಿಸಿಕೊಂಡು ಬಂದಿರುವ ಈ ವೈರಿ ರಾಷ್ಟ್ರವೇ ಈಗ ಭಯೋತ್ಪಾದನೆ ದುಷ್ಕೃತ್ಯಗಳಿಂದ ತತ್ತರಿಸಿರುವುದು. ಕಾಶ್ಮೀರದಲ್ಲಿ ತಗ್ಗಿಸಬಹುದಾದ ಸೇನಾಬಲವನ್ನು ಚೀನಾದ ಗಡಿಗಳತ್ತ ನಿಯೋಜನೆ ಮಾಡುವ ಸಾಧ್ಯತೆ ಬಗ್ಗೆ ರಕ್ಷಣಾ ತಜ್ಞರು ಗಮನಸೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net