ಅನುಷ್ಠಾನದ ಸವಾಲು: ಗ್ಯಾರಂಟಿ ಯೋಜನೆ ಜಾರಿಗೆ ಸಾಹಸ

Grihalakshmi
Published on

ಚುನಾವಣಾ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಕಾಂಗ್ರೆಸ್ ಸರ್ಕಾರ ಈಗಾಗಲೇ ಚಾಲನೆ ನೀಡಿದೆ. ಮೊದಲ ಸಂಪುಟ ಸಭೆಯಲ್ಲಿಯೇ ಐದೂ ಯೋಜನೆಗಳಿಗೆ ಸಮ್ಮತಿಸಿದ್ದು, ಈಗ ಅನುಷ್ಠಾನದ ಬೇರೆ ಬೇರೆ ಹಂತಗಳಲ್ಲಿವೆ. ಈ ಯೋಜನೆಗಳನ್ನು ಜನರಿಗೆ ಸರಿಯಾಗಿ ತಲುಪಿಸುವುದು ಮತ್ತು ಅರ್ಹರು ಹೊರಗುಳಿಯದಂತೆ ಎಚ್ಚರ ವಹಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದ್ದು, ಇದನ್ನು ಹೇಗೆ ನಿಭಾಯಿಸುತ್ತದೆನ್ನುವುದನ್ನು ಕಾದುನೋಡಬೇಕು. ಈ ಪೈಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಯಲ್ಲಿ ಅಷ್ಟೇನು ಗೊಂದಲಗಳಿಗೆ ಆಸ್ಪದವಿಲ್ಲ. ಏಕೆಂದರೆ ಇಲ್ಲಿ ಷರತ್ತುಗಳ ಗೋಜಲು ಕಡಿಮೆ. ಉಚಿತ ಪ್ರಯಾಣಕ್ಕೆ ಮುಂದಿನ ದಿನಗಳಲ್ಲಿ ಸ್ಮಾರ್ಟ್​ಕಾರ್ಡ್ ವಿತರಿಸಲು ಸರ್ಕಾರ ಯೋಜಿಸಿದ್ದು, ಸದ್ಯಕ್ಕೆ ಆಧಾರ್ ಕಾರ್ಡ್ ಅಥವಾ ಇತರ ದಾಖಲೆಗಳನ್ನು ಜತೆಗಿಟ್ಟುಕೊಂಡರೆ ಸಾಕು. ಹೀಗಾಗಿ ಬಸ್​ನಲ್ಲಿ ಪ್ರಯಾಣಿಸುವ ಮಹಿಳೆಯರ ಪ್ರಮಾಣ ಹೆಚ್ಚಿದೆ ಎಂಬುದನ್ನು ಬಿಟ್ಟರೆ ಉಳಿದಂತೆ ಯೋಜನೆ ಜಾರಿಯಲ್ಲಿ ಸಮಸ್ಯೆ ಕಂಡುಬರುತ್ತಿಲ್ಲ.

ಆದರೆ, ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಹಾಗೂ ಮನೆ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಯೋಜನೆಗಳ ಜಾರಿ ಅಷ್ಟು ಸಲೀಸಲ್ಲ. ಏಕೆಂದರೆ, ಯೋಜನೆಯ ಫಲಾನುಭವಿಗಳಾಗಲು ಇಲ್ಲಿ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಆದ್ದರಿಂದ ಒಂದಷ್ಟು ಮಂದಿ ಈ ಯೋಜನೆ ವ್ಯಾಪ್ತಿಗೇ ಬರುವುದಿಲ್ಲ. ಹೀಗಿದ್ದರೂ ಅರ್ಹರ ಸಂಖ್ಯೆ ಕಡಿಮೆಯೇನಿಲ್ಲ. ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಲು ಪೋರ್ಟಲ್ ತೆರೆದ ಕ್ಷಣದಿಂದಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಲಕ್ಷಾಂತರ ಜನರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ; ಸರ್ವರ್ ಸಮಸ್ಯೆಯೂ ಆಗಿದೆ. ಗೃಹಜ್ಯೋತಿ ಯೋಜನೆ ಪ್ರಕಟಿಸಿದ ತರುವಾಯದಲ್ಲಿ ಹಲವು ಗೊಂದಲ-ಅನುಮಾನಗಳೂ ತಲೆದೋರಿದ್ದವು. ಸರ್ಕಾರ ಅವನ್ನು ಆದ್ಯತೆ ಮೇಲೆ ಪರಿಹರಿಸಿ, ಈಗ ನೋಂದಣಿಗೆ ಅವಕಾಶ ಒದಗಿಸಿದೆ.

ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳ ಪರ-ವಿರೋಧ ಅಭಿಪ್ರಾಯಗಳು ಏನೇ ಇರಲಿ, ಸಾಮಾನ್ಯವಾಗಿ ಇಂಥ ಬೃಹತ್ ಯೋಜನೆಗಳನ್ನು ಜಾರಿಮಾಡಲು ಹೊರಟಾಗ ಸಮಸ್ಯೆಗಳು, ಗೊಂದಲಗಳು ಏರ್ಪಡುವುದು ಸಹಜ. ಸರ್ಕಾರದ ಯೋಜನೆಗಳ ದೈನಂದಿನ ವ್ಯವಹಾರಗಳಲ್ಲಿಯೇ ತಾಂತ್ರಿಕ ತೊಂದರೆಗಳು ಮಾಮೂಲು ಎನ್ನುವಂತಾಗಿರುವಾಗ, ಇಂಥ ದೊಡ್ಡ ಯೋಜನೆಗಳು ಬಂದಾಗ ಅಡೆತಡೆ ಸಹಜವೇ. ಆದರೆ ಈ ಸಮಸ್ಯೆಗಳನ್ನು ಎಷ್ಟು ಬೇಗ ಸರಿಪಡಿಸಿ, ಜನರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂಬುದು ಮುಖ್ಯ. ಹಾಗಾಗದಿದ್ದ ಪಕ್ಷದಲ್ಲಿ, ಯೋಜನೆಗೆ ನೋಂದಣಿ ಮಾಡಿಕೊಳ್ಳುವುದೇ ದೊಡ್ಡ ಪ್ರಯಾಸವಾಗಿಬಿಡುತ್ತದೆ; ಈ ಕಸರತ್ತಿನ ನಡುವೆ ಅರ್ಹರು ಸಹ ಯೋಜನೆಯ ವ್ಯಾಪ್ತಿಯಿಂದ ಹೊರಗುಳಿಯಬಹುದಾದ ಸಾಧ್ಯತೆ ಕೂಡ ಇರುತ್ತದೆ. ಜತೆಗೆ, ಯೋಜನೆ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡುವುದು ಕೂಡ ಮುಖ್ಯ. ಏಕೆಂದರೆ, ಮಧ್ಯವರ್ತಿಗಳು ಹುಟ್ಟಿಕೊಂಡು ಜನರಿಂದ ಹಣ ಪೀಕುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹಿಂದೆ ಇಂಥ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದ್ದಿದೆ. ಗೃಹಜ್ಯೋತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯಬಹುದಾದ ಸಂಭವನೀಯತೆ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿನಲ್ಲಿ ಬೆಸ್ಕಾಂ ಅಧಿಕಾರಿಗಳ ಜತೆ ಸಭೆ ನಡೆಸಿ, ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಹಾಗೂ ಅಕ್ರಮ ನಡೆಯದಂತೆ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿರುವುದು ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net