

ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರಾಜ್ಯದ ಅರ್ಧಕ್ಕಿಂತಲೂ ಹೆಚ್ಚು ಪ್ರದೇಶ ತೀವ್ರ ಬರಪರಿಸ್ಥಿತಿಯನ್ನು ಎದುರಿಸುತ್ತಿದೆ. ರೈತರು ಸಂಕಷ್ಟಕ್ಕೀಡಾಗಿದ್ದರೆ, ಕುಡಿಯುವ ನೀರಿನ ಸಮಸ್ಯೆಯೂ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಳೆ ಕೊರತೆಯ ಪರಿಣಾಮ ವಿದ್ಯುತ್ ಉತ್ಪಾದನೆಗೂ ಭಾರಿ ಹೊಡೆತ ಬಿದ್ದಿದೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆ ಇರುವುದರಿಂದ, ಈಗಾಗಲೇ ಕೆಲ ಪ್ರದೇಶಗಳಲ್ಲಿ ಅನಧಿಕೃತ ಲೋಡ್ಶೆಡ್ಡಿಂಗ್ ಜಾರಿಯಾಗಿದೆ. ಜಲ ವಿದ್ಯುತ್, ಪವನ ವಿದ್ಯುತ್ನ ಉತ್ಪಾದನೆ ಪ್ರಮಾಣ ಕುಸಿದಿದೆ. ಮಳೆ ಕೊರತೆಯಿಂದ ಅಕ್ಟೋಬರ್ನಲ್ಲೂ ಬೇಸಿಗೆಯಂಥ ವಾತಾವರಣ ಸೃಷ್ಟಿಯಾಗಿದ್ದು, ವಿದ್ಯುತ್ನ ಬೇಡಿಕೆಯೂ ಗಣನೀಯವಾಗಿ ಹೆಚ್ಚಿದೆ. ಈ ಹೊಸ ಸವಾಲುಗಳು ಸರ್ಕಾರಕ್ಕೆ ತಲೆನೋವು ಸೃಷ್ಟಿಸಿರುವುದಂತೂ ಹೌದು. ಈ ಹಿನ್ನೆಲೆಯಲ್ಲಿ, ಪರಿಹಾರದ ಹಾದಿಗಳನ್ನು ಶೋಧಿಸುತ್ತಿರುವ ಸರ್ಕಾರ, ವಿದ್ಯುತ್ ಕೊರತೆ ನೀಗಿಸಲು ಹಂತಹಂತವಾಗಿ ಕ್ರಮ ಕೈಗೊಳ್ಳುತ್ತಿರುವುದು ಸಮಾಧಾನದ ಸಂಗತಿ.
ಇಂಧನ ಇಲಾಖೆಯ ಅಧಿಕಾರಿಗಳ ಜತೆ ಇತ್ತೀಚೆಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿದ್ಯುತ್ ಬಿಕ್ಕಟ್ಟು ಪರಿಹಾರೋಪಾಯಗಳ ಕುರಿತಂತೆ ಚರ್ಚೆ ನಡೆಸಿದ್ದರು. ಆ ಬಳಿಕ ಇಂಧನ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆದಿದ್ದು, ರಾಜ್ಯದ ಖಾಸಗಿ ವಿದ್ಯುತ್ ಉತ್ಪಾದಕರು ವಿದ್ಯುತ್ನ್ನು ಮುಕ್ತಜಾಲಕ್ಕೆ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ. ಇದಕ್ಕಾಗಿ, ವಿದ್ಯುತ್ ಕಾಯ್ದೆಯ ಸೆಕ್ಷನ್ 11 ಅಸ್ತ್ರ ಪ್ರಯೋಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ, ರಾಜ್ಯದ ಖಾಸಗಿ ವಿದ್ಯುತ್ ಉತ್ಪಾದಕರು ಮುಕ್ತಜಾಲಕ್ಕೆ ಮಾರಾಟ ಮಾಡದೆ, ಸರ್ಕಾರಕ್ಕೆ ಮಾರಾಟ ಮಾಡಬೇಕಿದೆ. ಈ ಕ್ರಮದಿಂದ ಪವನ, ಸೌರ ಇತ್ಯಾದಿ ಖಾಸಗಿ ವಿದ್ಯುತ್ ಉತ್ಪಾದಕರಿಂದ 1,500 ಮೆಗಾವಾಟ್ ಲಭಿಸುವ ಅಂದಾಜಿದೆ. ಈಗಿನ ವಿದ್ಯುತ್ ಕೊರತೆಯ ಪ್ರಮಾಣವನ್ನು ತಗ್ಗಿಸಲು ಈ ಕ್ರಮ ಪೂರಕ ಹೆಜ್ಜೆಯಾಗಿ ಪರಿಣಮಿಸಲಿದೆ.
ಪ್ರಸಕ್ತ ವರ್ಷದ ಅಕ್ಟೋಬರ್ನಿಂದ 2024ರ ಮೇವರೆಗೆ ಹೆಚ್ಚುವರಿಯಾಗಿ 600 ಮೆಗಾವಾಟ್ ವಿದ್ಯುತ್ ಹಂಚಿಕೆ ಮಾಡಬೇಕು ಎಂಬ ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ವಿದ್ಯುತ್ ಕೊರತೆಯ ಸಮಸ್ಯೆಯಿಂದ ಉದ್ಯಮಿಗಳು ಭಯಭೀತರಾಗಿದ್ದು, ಲೋಡ್ಶೆಡ್ಡಿಂಗ್ ಜಾರಿಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಈಗಿನ ಸಂದಿಗ್ಧತೆಯಲ್ಲಿ ತುರ್ತು ಕ್ರಮಗಳನ್ನು ಕೈಗೊಂಡು, ಪರಿಹಾರದ ಎಲ್ಲ ದಾರಿಗಳನ್ನು ಅನುಷ್ಠಾನಕ್ಕೆ ತರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸುವುದು ಅಗತ್ಯ. ಖಾಸಗಿ ವಿದ್ಯುತ್ ಉತ್ಪಾದಕರಿಂದ ಖರೀದಿ ಮಾಡುವ ಮೂಲಕ, ಕೊರತೆಯ ಪ್ರಮಾಣವನ್ನು ಒಂದಿಷ್ಟಾದರೂ ತಗ್ಗಿಸಬಹುದು. ವಿದ್ಯುತ್ ಕಾಯ್ದೆಯ ಸೆಕ್ಷನ್ 11ನ್ನು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಯಾವೆಲ್ಲ ಮೂಲಗಳಿಂದ ವಿದ್ಯುತ್ ಖರೀದಿ ಸಾಧ್ಯವಿದೆ, ಯಾವ ರಾಜ್ಯಗಳು ನೆರವಿಗೆ ಬರಬಹುದು ಎಂಬುದರ ಬಗ್ಗೆಯೂ ಅವಲೋಕನ ನಡೆಸಿ, ಸೂಕ್ತ ನಿರ್ಣಯಕ್ಕೆ ಬರಬೇಕು. ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಈ ಸಮಸ್ಯೆಯನ್ನು ರಾಜಕೀಯ ಕನ್ನಡಕದಿಂದ ನೋಡದೆ ರ್ತಾಕ ಪರಿಹಾರದತ್ತ ಹೆಜ್ಜೆ ಇರಿಸಬೇಕು.