ಸಮನ್ವಯ-ಸಹಕಾರ ಅಗತ್ಯ; ಲೆಫ್ಟಿನೆಂಟ್ ಗವರ್ನರ್ ವಿರುದ್ಧ ದೆಹಲಿ ಸಿಎಂ ಪ್ರತಿಭಟನೆ

Editorial
Published on

ದೆಹಲಿ ಸರ್ಕಾರದ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಪ್ರತಿನಿಧಿ ಎಂದೇ ಪರಿಗಣಿಸಲಾಗುವ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಮುಖ್ಯಮಂತ್ರಿಯೇ ಪ್ರತಿಭಟನೆಗಿಳಿದಿರುವುದು ಕೇಂದ್ರ ಹಾಗೂ ದೆಹಲಿ ರಾಜ್ಯಗಳ ನಡುವೆ ಅಸಹಕಾರ ಮತ್ತು ಸಂಘರ್ಷದ ವಾತಾವರಣ ತೀವ್ರವಾಗಿರುವ ಸ್ಪಷ್ಟ ಸೂಚನೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಪ್ರತ್ಯೇಕ ರಾಜಕೀಯ ಸಿದ್ಧಾಂತ ಇರುವ ಪಕ್ಷಗಳು ಅಧಿಕಾರದಲ್ಲಿದ್ದರೆ ಅಸಹಕಾರದ ವಾತಾವರಣ ಸಹಜ ಮತ್ತು ನಿರೀಕ್ಷಿತ. ಆದರೆ, ಈ ಮನಸ್ತಾಪಗಳು ಮಿತಿಯನ್ನು ಮೀರಿದರೆ ಬಿಕ್ಕಟ್ಟು ತಲೆದೋರಿ ಸುಗಮ ಆಡಳಿತ ನಡೆಸಲು ಅಡಚಣೆಯಾಗಿ ಪರಿಣಮಿಸುತ್ತದೆ.

ತಮಿಳುನಾಡಿನಲ್ಲಿ ಕೂಡ ರಾಜ್ಯಪಾಲ ಆರ್.ಎನ್.ರವಿ ಹಾಗೂ ಡಿಎಂಕೆ ಸರ್ಕಾರದ ನಡುವೆ ಕೆಲ ದಿನಗಳ ಹಿಂದೆ ಅಸಹಕಾರ ತಲೆದೋರಿತ್ತು. ರಾಜ್ಯಪಾಲರು ರಾಜ್ಯ ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣ ಓದದೇ ನಿಯಮ ಉಲ್ಲಂಘಿಸಿದ್ದಾರೆ; ಬಿ.ಆರ್.ಅಂಬೇಡ್ಕರ್ ಮತ್ತು ಪೆರಿಯಾರ್ ಅವರಂಥ ಮಹನೀಯರ ಹೆಸರುಗಳನ್ನು ಭಾಷಣದಲ್ಲಿ ಉಚ್ಚರಿಸಲು ಹಿಂಜರಿಯುವ ಮೂಲಕ ಅಗೌರವ ತೋರಿದ್ದಾರೆ ಎಂದು ಡಿಎಂಕೆ ಮುಖಂಡರು ದೂರಿದ್ದರು. ಈ ವಿವಾದ ಈಗ ತಿಳಿಗೊಂಡಿದೆ. ಆದರೆ, ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಇಂತಹ ಅಸಹಕಾರದ ವಾತಾವರಣ ವೃದ್ಧಿಯಾಗುತ್ತಲೇ ಸಾಗಿದ್ದು, ಈಗ ಬೀದಿಗಿಳಿದು ಪ್ರತಿಭಟಿಸುವ ಹಂತ ತಲುಪಿದೆ.

ರಾಜ್ಯಪಾಲರು ನಾಮಮಾತ್ರಕ್ಕೆ ರಾಜ್ಯದ ಮುಖ್ಯಸ್ಥರಾಗಿದ್ದು, ಅಧಿಕಾರವು ಬಹುತೇಕವಾಗಿ ಆಯಾ ರಾಜ್ಯ ಸರ್ಕಾರದ ಕೈಯಲ್ಲಿರುತ್ತದೆ. ದೆಹಲಿ ಈ ಮೊದಲು ಕೇಂದ್ರಾಡಳಿತ ಪ್ರದೇಶವಾಗಿದ್ದರಿಂದ ಇತರ ರಾಜ್ಯಗಳಿಗಿಂತಲೂ ಇಲ್ಲಿನ ಅಧಿಕಾರ ಹಂಚಿಕೆ ಭಿನ್ನವಾಗಿದೆ. ದೆಹಲಿಯಲ್ಲಿ ಪೊಲೀಸ್, ಭೂಮಿ, ಸಾರ್ವಜನಿಕ ಆದೇಶ ಮುಂತಾದವುಗಳ ಬಗ್ಗೆ ಲೆಫ್ಟಿನೆಂಟ್ ಗರ್ವನರ್​ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿದೆ. ಈ ಅಧಿಕಾರ ವ್ಯಾಪ್ತಿ ಮೀರಿ ಲೆಫ್ಟಿನೆಂಟ್ ಗವರ್ನರ್ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಸರ್ಕಾರಿ ಶಾಲಾ ಶಿಕ್ಷಕರನ್ನು ಫಿನ್ಲೆಂಡ್​ಗೆ ತರಬೇತಿಗಾಗಿ ಕಳುಹಿಸುವ ಪ್ರಸ್ತಾವವನ್ನು ತಡೆದಿದ್ದಾರೆ ಎಂಬ ಆರೋಪ ಕೇಜ್ರಿವಾಲ್ ಅವರದ್ದಾಗಿದೆ. ಸಂವಿಧಾನದ ಪ್ರಕಾರ ಭಾರತವು ಒಕ್ಕೂಟ ವ್ಯವಸ್ಥೆ ಇರುವ ದೇಶ. ಇದರನುಸಾರ ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ರಾಜ್ಯ ಸರ್ಕಾರಗಳು ಆಡಳಿತ ನಡೆಸುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರವನ್ನು ಹಂಚಿಕೆ ಮಾಡಲು ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಹಾಗೂ ಸಹವರ್ತಿ ಪಟ್ಟಿಯನ್ನು ಸಂವಿಧಾನದಲ್ಲೇ ಅಳವಡಿಸಲಾಗಿದೆ. ಆಡಳಿತ ಸುಗಮವಾಗಿ ಸಾಗಬೇಕಾದರೆ ಉಭಯ ಸರ್ಕಾರಗಳ ನಡುವೆ ಸಮನ್ವಯ ಹಾಗೂ ಸಹಕಾರ ಅತ್ಯಗತ್ಯ. ಕೇಂದ್ರದಂತೆ ರಾಜ್ಯ ಸರ್ಕಾರ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದಲೇ ಆಯ್ಕೆಯಾಗಿರುತ್ತದೆ. ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿರುವ ರಾಜ್ಯಪಾಲರು ಹಾಗೂ ಲೆಫ್ಟಿನೆಂಟ್ ಗವರ್ನರ್ ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಣೆ ಮಾಡುವುದು ಸೂಕ್ತ ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ಅಪೇಕ್ಷಿತ. ಸಹಜ ಭಿನ್ನಾಭಿಪ್ರಾಯವು ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳುವ ವಿವೇಚನೆಯನ್ನು ಇಬ್ಬರೂ ಪ್ರದರ್ಶಿಸಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net