

ಯಾವುದೇ ದೇಶ, ರಾಜ್ಯಗಳ ಅಭಿವೃದ್ಧಿಯಲ್ಲಿ ರಸ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದರಲ್ಲೂ, ಸರಕು ಸಾಗಣೆಗಾಗಿ ರೈಲಿಗಿಂತ ರಸ್ತೆಸಾರಿಗೆಯನ್ನು ಹೆಚ್ಚು ನೆಚ್ಚಿಕೊಂಡಿರುವ ಭಾರತದಂತಹ ದೇಶಕ್ಕೆ ಸಂಬಂಧಿಸಿ ಈ ಮಾತು ಇನ್ನೂ ಹೆಚ್ಚು ದಿಟ. ಕೇವಲ ಸರ್ಕಾರವೊಂದರಿಂದಲೇ ಇಷ್ಟು ವಿಶಾಲ ದೇಶದಲ್ಲಿ ರಸ್ತೆಯಂಥ ಮೂಲಸೌಕರ್ಯವನ್ನು ಸಮರ್ಪಕವಾಗಿ ನೀಡಲಾಗದು ಎಂಬ ಕಾರಣಕ್ಕೆ ಸಾರ್ವಜನಿಕ ಸರ್ಕಾರಿ ಪಾಲುದಾರಿಕೆ (ಪಿಪಿಪಿ) ಮಾದರಿಯನ್ನು ಜಾರಿಗೆ ತರಲಾಯಿತು. ಖಾಸಗಿಯವರು ರಸ್ತೆ ನಿರ್ವಿುಸಿ, ಅದನ್ನು ನಿಗದಿತ ಅವಧಿಯವರೆಗೆ ನಿರ್ವಹಣೆ ಮಾಡುವ ಮತ್ತು ಟೋಲ್ ಶುಲ್ಕ ಸಂಗ್ರಹಿಸುವ ಅವಕಾಶವನ್ನು ನೀಡಲಾಗುತ್ತಿದೆ. ಈ ಪರಿಕಲ್ಪನೆಯಲ್ಲಿ ಅನೇಕ ರಾಷ್ಟ್ರೀಯ ಹೆದ್ದಾರಿಗಳನ್ನು ಮತ್ತು ರಾಜ್ಯ ಹೆದ್ದಾರಿಗಳನ್ನು ನಿರ್ವಿುಸಲಾಗಿದೆ; ನಿರ್ವಿುಸಲಾಗುತ್ತಿದೆ. ಅದರಲ್ಲೂ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಬಂದಮೇಲೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಮಾಣ ಹೆಚ್ಚಿದೆ.
ಈ ಹಿಂದೆ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಸುವರ್ಣ ಚತುಷ್ಪಥ ಮೂಲಕ ಒಂದುರೀತಿಯಲ್ಲಿ ರಸ್ತೆಕ್ರಾಂತಿಗೆ ಮುನ್ನುಡಿ ಬರೆದಿದ್ದರು. ಆದರೆ ಎಷ್ಟೋ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಸರಿಯಾಗಿ ಆಗದ್ದರಿಂದಾಗಿ ಜನರು ಸಂಕಷ್ಟ ಎದುರಿಸುವಂತಾಗಿದೆ. ನಮ್ಮ ಕರ್ನಾಟಕವನ್ನೇ ತೆಗೆದುಕೊಂಡರೆ, 6,647 ಕಿಮೀ ವ್ಯಾಪ್ತಿಯ 29 ರಾಷ್ಟ್ರೀಯ ಹೆದ್ದಾರಿಗಳಿವೆ. ಆದರೆ ಕೆಲವೆಡೆ ಗುಂಡಿ ಮುಚ್ಚದಿರುವುದು, ಮಳೆಗಾಲದಲ್ಲಿ ಕಿತ್ತುಹೋದ ರಸ್ತೆ ಭಾಗವನ್ನು ಸರಿಪಡಿಸದಿರುವುದು, ಹಾಳಾದ ಸರ್ವಿಸ್ ರಸ್ತೆಗಳನ್ನು ದುರಸ್ತಿ ಮಾಡದಿರುವುದು, ರಸ್ತೆಗಳಲ್ಲಿ ವಿವಿಧ ಸೂಚನಾ ಫಲಕಗಳನ್ನು ಅಳವಡಿಸದಿರುವುದು ಮುಂತಾದ ಕಾರಣದಿಂದಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ರಸ್ತೆ ಸರಿಯಿಲ್ಲದಿದ್ದರೂ ಟೋಲ್ ಸಂಗ್ರಹ ಮಾತ್ರ ನಿಲ್ಲುವುದಿಲ್ಲ ಎಂಬುದಕ್ಕೆ ಜನರ ತೀವ್ರ ಆಕ್ರೋಶವಿದೆ. ಸೇವೆಗೆ ತಕ್ಕ ಶುಲ್ಕ ನ್ಯಾಯಯುತ. ಆದರೆ ಸೇವೆ ಸಮರ್ಪಕವಾಗಿಲ್ಲದಿದ್ದರೆ ಶುಲ್ಕ ಏಕೆ ಎಂಬ ಜನರ ಪ್ರಶ್ನೆಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಉತ್ತರಿಸಬೇಕು. ರಸ್ತೆ ನಿರ್ವಹಣೆ ಜವಾಬ್ದಾರಿ ಇರುವ ಸಂಸ್ಥೆ ಆ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಕಪು್ಪಪಟ್ಟಿಗೆ ಸೇರಿಸುವುದು ಇತ್ಯಾದಿ ಕ್ರಮ ಕೈಗೊಳ್ಳುವ ಅಧಿಕಾರ ಹೆದ್ದಾರಿ ಪ್ರಾಧಿಕಾರಕ್ಕೆ ಇದ್ದೇ ಇರುತ್ತದೆ. ರಾಜ್ಯದಲ್ಲಿನ ಹೆದ್ದಾರಿ ದುರಸ್ತಿ ಹಾಗೂ ನಿರ್ವಹಣೆ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವಾಲಯದ ಗಮನಕ್ಕೆ ತರುವುದಾಗಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿರುವುದು ಸಕಾಲಿಕವಾಗಿದೆ. ಜತೆಗೆ ಆಯಾ ಭಾಗದ ಸಂಸದರು ಸಹ ಈ ಬಗ್ಗೆ ಸಚಿವಾಲಯದ ಗಮನ ಸೆಳೆಯಬೇಕು. ನಾಲ್ಕು ವರ್ಷಕ್ಕಿಂತ ಮೇಲಿನ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲು ಈಗ ಕೇಂದ್ರ ಸರ್ಕಾರ ಮುಂದಾಗಿರುವುದು ಸಹ ಸುರಕ್ಷತೆಯ ಉದ್ದೇಶವನ್ನೇ ಹೊಂದಿದೆ. ರಸ್ತೆ ಸಮರ್ಪಕವಾಗಿದ್ದರೆ ಅಪಘಾತಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಗ್ಗಿಸಬಹುದು. ಕೇಂದ್ರ ಭೂಸಾರಿಗೆ ಸಚಿವಾಲಯ ಈ ಬಗ್ಗೆ ಗಮನಹರಿಸಲಿ.