

32,500 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಸಚಿವಾಲಯದ 7 ಮಲ್ಟಿ-ಟ್ರಾ್ಯಕಿಂಗ್ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಯೋಜನೆಗಳಿಗೆ ಸಂಪೂರ್ಣ ವೆಚ್ಚ ಭರಿಸಲು ಮುಂದಾಗಿದೆ. ದೇಶದ 9 ರಾಜ್ಯಗಳ 39 ಜಿಲ್ಲೆಗಳನ್ನು ಈ ಯೋಜನೆ ಒಳಗೊಂಡಿದೆ. ಆದರೆ, ಇದರಲ್ಲಿ ಕರ್ನಾಟಕದ ಯಾವುದೇ ಒಂದು ಜಿಲ್ಲೆಯು ಸೇರದಿರುವುದು ಖೇದಕರ ಸಂಗತಿಯಾಗಿದೆ.
ರೈಲ್ವೆ ಅಭಿವೃದ್ಧಿಯಲ್ಲಿ ಕರ್ನಾಟಕಕ್ಕಿಂತ ಮುಂದಿರುವ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳು ಈ ಯೋಜನೆಯಲ್ಲಿ ಸೇರಿವೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ವಂತಿಗೆ ನೀಡುವ ಮೂಲಕ ಕರ್ನಾಟಕದಲ್ಲಿ ರೈಲ್ವೆ ಅಭಿವೃದ್ಧಿ ಹೆಚ್ಚಿಸಲು ಯತ್ನಿಸಿದ್ದರೂ ರಾಜ್ಯದ ಪ್ರಗತಿ ಆಶಾದಾಯಕವಾಗಿಲ್ಲ. ಈಗಲಾದರೂ ಈ ರೈಲ್ವೆ ಯೋಜನೆಯಲ್ಲಿ ಕರ್ನಾಟಕದ, ಅದರಲ್ಲೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಸೇರಿಸುವ ನಿಟ್ಟಿನಲ್ಲಿ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯತೆ ಇದೆ.
ಹಸಿರು ಚಲನಶೀಲತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟವು ಪ್ರಧಾನ ಮಂತ್ರಿ ಇ-ಬಸ್ ಸೇವೆ ಯೋಜನೆಗೆ ಕೂಡ ಅನುಮೋದನೆ ನೀಡಿದೆ. 169 ನಗರಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ 10 ಸಾವಿರ ಎಲೆಕ್ಟ್ರಿಕ್ ಬಸ್ಗಳನ್ನು ಸಂಚಾರಕ್ಕೆ ನಿಯೋಜಿಸಲು ಈ ಯೋಜನೆಯಲ್ಲಿ ಉದ್ದೇಶಿಸಿರುವುದು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಲಿದೆ. ಎಲೆಕ್ಟ್ರಿಕ್ ವಾಹನ ನಿಯೋಜನೆ ತ್ವರಿತಗೊಳಿಸುವ ಮೂಲಕ ಗಾಳಿಯ ಗುಣಮಟ್ಟ ಸುಧಾರಿಸುವ ಗುರಿಯನ್ನು ಕೇಂದ್ರ ನೀತಿ ಆಯೋಗದ ಶೂನ್ಯ ಮಾಲಿನ್ಯ ಚಲನಶೀಲತೆ ಅಭಿಯಾನದಲ್ಲಿ ಹಾಕಿಕೊಳ್ಳಲಾಗಿದೆ. ಇದರಂಗವಾಗಿ ವಿದ್ಯುತ್ ವಾಹನ ಒದಗಿಸುವ ಯೋಜನೆಯನ್ನು ಕೇಂದ್ರ ರೂಪಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಯೋಜನೆಯ ಒಟ್ಟು ವೆಚ್ಚವನ್ನು ರೂ 57,613 ಕೋಟಿ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ರೂ. 20 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರವು ಒದಗಿಸಲಿದೆ.
ಪ್ರಧಾನಿ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೊಷಿಸಿದ ಮರುದಿನವೇ ತ್ವರಿತಗತಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಗೆ ಕೇಂದ್ರ ಸಂಪುಟವು ಅನುಮತಿ ಸೂಚಿಸಿದೆ. ನೇಕಾರರು, ಅಕ್ಕಸಾಲಿಗರು, ಲಾಂಡ್ರಿ ಕಾರ್ವಿುಕರು ಮತ್ತು ಕ್ಷೌರಿಕರು ಸೇರಿದಂತೆ ಸಾಂಪ್ರದಾಯಿಕ ಕುಶಲಕರ್ವಿುಗಳಿಗೆ 2 ಲಕ್ಷ ರೂಪಾಯಿವರೆಗೆ ಸಬ್ಸಿಡಿ ಸಾಲವನ್ನು ಒದಗಿಸುವ ಯೋಜನೆ ಇದಾಗಿದೆ. 3 ಸಾವಿರ ಕೋಟಿ ರೂ. ಆರ್ಥಿಕ ವೆಚ್ಚದೊಂದಿಗೆ ಸೆ.17ರಂದು ವಿಶ್ವಕರ್ಮ ಜಯಂತಿಯಂದು ಯೋಜನೆ ಪ್ರಾರಂಭಿಸ ಲಾಗುತ್ತಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಈ ಸಮುದಾಯಗಳ ಮತಗಳನ್ನು ಸೆಳೆಯುವ ಉದ್ದೇಶ ಇರುವಂತೆ ಕಂಡುಬಂದರೂ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಸಾಂಪ್ರದಾಯಿಕ ಕುಶಲಕರ್ವಿುಗಳ ಬದುಕಿಗೆ ಒಂದಿಷ್ಟು ನೆರವು ದೊರೆಯುವ ನಿರೀಕ್ಷೆಯನ್ನು ಈ ಯೋಜನೆ ಹುಟ್ಟುಹಾಕಿದೆ.
ಇದೇ ವೇಳೆ 14,903 ಕೋಟಿ ರೂಪಾಯಿಯ ವಿಸ್ತರಣಾ ಡಿಜಿಟಲ್ ಇಂಡಿಯಾ ಯೋಜನೆಗೆ ಅನುಮೋದನೆ ನೀಡಿದ್ದು, 6.25 ಲಕ್ಷ ಐಟಿ ವೃತ್ತಿಪರರ ಕೌಶಲ ಹೆಚ್ಚಿಸುವ ಗುರಿ ಹೊಂದಿದೆ. ಅಲ್ಲದೆ, ಇನ್ನೂ 2.65 ಲಕ್ಷ ಜನರಿಗೆ ಮಾಹಿತಿ ಭದ್ರತೆಯಲ್ಲಿ ತರಬೇತಿ ನೀಡಲು ಉದ್ದೇಶಿಸಿದೆ. ದೇಶದ ಐಟಿ ರಾಜಧಾನಿಯಾಗಿರುವ ಬೆಂಗಳೂರು ಈ ಯೋಜನೆಯ ಹೆಚ್ಚಿನ ಲಾಭ ಪಡೆದುಕೊಳ್ಳಬೇಕೆನ್ನುವುದು ಸಹಜ ನಿರೀಕ್ಷೆಯಾಗಿದೆ.