ಕಣ್ಣೊರೆಸುವ ತಂತ್ರ ಬೇಡ: ಲೋಡ್​ಶೆಡ್ಡಿಂಗ್ ಸಮಸ್ಯೆ ಗಂಭೀರವಾಗಿ ಪರಿಗಣಿಸಿ

Drought
Published on

ಬೀಸುವ ದೊಣ್ಣೆಯಿಂದ ಪಾರಾದರೆ ಸಾವಿರ ವರ್ಷ ಆಯಸ್ಸು ಎಂಬ ಮಾತಿದೆ. ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಇಲಾಖೆ ಅಧಿಕಾರಿಗಳು ಈ ತಂತ್ರಕ್ಕೆ ಮೊರೆ ಹೋಗಿರುವ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯದೆಲ್ಲೆಡೆ ಅನಧಿಕೃತ ಲೋಡ್​ಶೆಡ್ಡಿಂಗ್​ನಿಂದ ವಿಶೇಷವಾಗಿ ರೈತರು ತಿರುಗಿಬೀಳುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ತುರ್ತು ಸಭೆ ಕರೆದು ಚರ್ಚೆ ಮಾಡಿದ್ದಾರೆ. ಅವರ ಕಳಕಳಿ ಶ್ಲಾಘನೀಯ. ಆದರೆ ಅಧಿಕಾರಿಗಳು ಸಮಸ್ಯೆ ಪರಿಹಾರ ಕ್ರಮಗಳ ಬದಲಾಗಿ ನವೆಂಬರ್​ವರೆಗೆ ಕಾಲ ತಳ್ಳುವ ಲೆಕ್ಕಾಚಾರದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂಧನ ಇಲಾಖೆ ಕಾಗದದ ಮೇಲೆ ರೂಪಿಸಿದ ಈ ಯೋಜನೆ ಆಕರ್ಷಕವಾಗಿದೆ. ಸಮಸ್ಯೆಗೆ ಪರಿಹಾರ ಸಿಕ್ಕರೆ ಸಾಕು ಎನ್ನುವ ಸ್ಥಿತಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಲಹೆಗೆ ಒಪ್ಪಿರುವಂತಿದೆ.

ಅಧಿಕಾರಿಗಳ ಕಾರ್ಯತಂತ್ರದ ಪ್ರಕಾರ ನಗರ-ಮಹಾನಗರಗಳನ್ನು ಹೊರತುಪಡಿಸಿ ಉಳಿದ ನಗರ-ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತ ಲೋಡ್​ಶೆಡ್ಡಿಂಗ್ ಮುಂದುವರಿಸುವುದು. ಕೃಷಿ ಪಂಪ್​ಸೆಟ್​ಗಳಿಗೆ ನಿರಂತರ ಏಳು ತಾಸು ಬದಲು ಐದು ತಾಸು ತ್ರೀಫೇಸ್ ವಿದ್ಯುತ್ ಪೂರೈಸಿ ಎರಡು ತಾಸು ಕಡಿತಗೊಳಿಸುವುದು. ಈ ಎರಡು ಕ್ರಮಗಳಿಂದ ಒತ್ತಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಬಹುದು. ನವೆಂಬರ್ ನಂತರ ಕಬ್ಬು ಕಟಾವು ಶುರುವಾಗಲಿದೆ. ಆಗ ಕೃಷಿ ಪಂಪ್​ಸೆಟ್​ಗಳ ವಿದ್ಯುತ್ ಬಳಕೆ ಇಳಿಮುಖವಾಗಲಿದೆ. ವಿದ್ಯುತ್ ವಿನಿಮಯ ಆಧಾರದಲ್ಲಿ ನವೆಂಬರ್ ನಂತರ ಉತ್ತರಪ್ರದೇಶದಿಂದ 300 ಮೆ.ವಾ. ಪಂಜಾಬ್​ನಿಂದ 600 ಮೆ.ವಾ. ಲಭಿಸಲಿದೆ. ವಿದ್ಯುತ್ ಕಾಯ್ದೆ ಸೆಕ್ಷನ್ 11ರ ಜಾರಿಯಿಂದ ಖಾಸಗಿ ಸಂಸ್ಥೆಗಳಿಂದ 800 ಮೆ. ವಾ. ದೊರೆಯಲಿದೆ. ಹೀಗಾಗಿ ನವೆಂಬರ್​ವರೆಗೆ ಬ್ಯಾಲೆನ್ಸ್ ಮಾಡಿದರೆ ನಂತರ ವಿದ್ಯುತ್ ಸಮಸ್ಯೆಗೆ ತಾನಾಗಿಯೇ ಪರಿಹಾರ ಸಿಗಲಿದೆ ಎನ್ನುವ ಲೆಕ್ಕಾಚಾರ ಅಧಿಕಾರಿಗಳದ್ದು ಎನ್ನಲಾಗಿದೆ.

ವಿದ್ಯುತ್ ಸಾಗಣೆ ಮತ್ತು ವಿತರಣೆ ಜಾಲ ನಿರ್ವಹಣೆಗೆ ಜಿಲ್ಲೆಗೊಬ್ಬ ನೋಡಲ್ ಅಧಿಕಾರಿ ನೇಮಕ ಮಾಡಿ ಲಭ್ಯ ವಿದ್ಯುತ್ತನ್ನು ಅಗತ್ಯತೆ ಅನುಸಾರ ಹಂಚಿಕೆ ಮಾಡಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನದ ಶಂಕೆಯೂ ಇದೆ.

ಗೃಹಜ್ಯೋತಿ ಯೋಜನೆ ಜಾರಿಗೆ ಮುನ್ನ 16 ಸಾವಿರ ಮೆ.ವಾ. ಬೇಡಿಕೆ ಬಂದರೂ ನಿಭಾಯಿಸುವ ಸಾಮರ್ಥ್ಯ ರಾಜ್ಯಕ್ಕಿದೆ ಎಂದು ಇಂಧನ ಇಲಾಖೆ ಹೇಳಿಕೊಂಡಿತ್ತು. ಜಲ ಮೂಲ, ಶಾಖೋತ್ಪನ್ನ ಮೂಲದಿಂದ ಲಭ್ಯತೆಯಲ್ಲೇ ಪ್ರತಿದಿನ 35 ದಶಲಕ್ಷ ಯೂನಿಟ್ ಕಡಿಮೆಯಾಗಿದೆ. ವಿನಿಮಯ ಮತ್ತು ಖರೀದಿ ಮೂಲಕ ಸರಾಸರಿ 28 ರಿಂದ 30 ದಶಲಕ್ಷ ಯೂನಿಟ್ ಪಡೆದು, ಉದ್ಯಮ-ವಹಿವಾಟಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದೆ. ಸದ್ಯದ ಖರೀದಿಯಲ್ಲಿ ದೀರ್ಘಾವಧಿ ಒಪ್ಪಂದ ವಿದ್ಯುತ್ ಸೇರಿದೆ. ಈ ಮೊತ್ತವನ್ನು ಭರಿಸುವುದಕ್ಕಾಗಿ ಗ್ರಾಹಕರಿಗೆ ವಿದ್ಯುತ್ ದರ ಹೆಚ್ಚಳದ ಬರೆ ಹಾಕಿದ್ದು, ಮತ್ತಷ್ಟು ಖರೀದಿಸಲು ಸಾಧ್ಯವೆ ? ಎಂಬ ಪ್ರಶ್ನೆ ವಿದ್ಯುತ್ ವಲಯದಿಂದ ಕೇಳಿಬರುತ್ತಿದೆ.

ವಿದ್ಯುತ್ ಸಮಸ್ಯೆ ಪರಿಹರಿಸಲು ಕ್ರಮಕೈಗೊಂಡಿದ್ದೇವೆ. ಎಲ್ಲವೂ ಅನುಷ್ಠಾನಕ್ಕೆ ಬರಲಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ ವಸ್ತುಸ್ಥಿತಿ ಬೇರೆಯೇ ಇದೆ. ಕಲ್ಲಿದ್ದಲು ಮತ್ತು ವಿದ್ಯುತ್ ಖರೀದಿಗೆ ಆರ್ಥಿಕ ಸಮಸ್ಯೆ ಇಲ್ಲ ಎಂಬ ವಿಶ್ವಾಸ ಮೂಡುವ ತನಕ ಕಾಲಹರಣ ಮಾಡುವ ಸಾಧ್ಯತೆಗಳು ಇಲ್ಲದಿಲ್ಲ. ವಿದ್ಯುತ್ ಸಮಸ್ಯೆ ಕೃಷಿ ಕ್ಷೇತ್ರದ ಮೇಲೆ ಬೀರಬಹುದಾದ ದುಷ್ಪರಿಣಾಮವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಬರ ಕಾರಣ ರೈತ ಸಮೂಹ ಸಂಕಷ್ಟದಲ್ಲಿದೆ. ಅವರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಬೇಕು. ಕಾಲವೇ ಸಮಸ್ಯೆಗೆ ಪರಿಹಾರ ಒದಗಿಸಲಿದೆ ಎನ್ನುವ ಸೂತ್ರ ಸರಿಯಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net