

ಅನ್ಯರಾಜ್ಯಗಳೊಂದಿಗಿನ ವಿವಾದ, ತಂಟೆಗಳ ವಿಷಯದಲ್ಲಿ ಕರ್ನಾಟಕ ಮೆಲುದನಿಯಲ್ಲೇ ಮಾತನಾಡುತ್ತಿತ್ತು. ಆದರೆ, ನೀರಾವರಿ ಯೋಜನೆಗಳು ಮತ್ತು ಇತರ ಅಭಿವೃದ್ಧಿ ಯೋಜನೆಗಳ ವಿಚಾರದಲ್ಲಿ ನೆರೆ ರಾಜ್ಯಗಳ ಅನಗತ್ಯ ಕಿರಿಕಿರಿ ಹೆಚ್ಚಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ಪರಿಷತ್ತಿನ ಸಭೆಯಲ್ಲಿ ಖಡಕ್ ಆಗಿಯೇ ಮಾತನಾಡಿದ್ದಾರೆ. ಇಂಥದ್ದೊಂದು ಸ್ಪಷ್ಟಸಂದೇಶದ ಅಗತ್ಯವೂ ಇತ್ತು. ಇಲ್ಲದಿದ್ದರೆ, ಕರ್ನಾಟಕದ ಸೌಹಾರ್ದ, ಮೃದುಧೋರಣೆಯನ್ನು ದೌರ್ಬಲ್ಯವೆಂದು ಭಾವಿಸುವ ಸಾಧ್ಯತೆ ಇತ್ತು. ‘ನೀರಾವರಿ ಯೋಜನೆಗಳ ವಿಚಾರವಾಗಿ ನೆರೆಹೊರೆ ರಾಜ್ಯಗಳಿಗೆ ಕರ್ನಾಟಕ ಎಲ್ಲ ರೀತಿಯ ಸಹಕಾರ ನೀಡುತ್ತಿದೆ, ಹಾಗೆಯೇ ನಮ್ಮ ಯೋಜನೆಗಳಿಗೆ ಅಡ್ಡಿಪಡಿಸಿದರೆ ನಮ್ಮದೂ ಆಕ್ಷೇಪ ಎದುರಿಸಬೇಕಾಗುತ್ತದೆ. ಜಲನ್ಯಾಯ ಮಂಡಳಿ ತೀರ್ಪು ಉಲ್ಲಂಘಿಸಿ ಬೃಹತ್ ಮಟ್ಟದ ಶಾಶ್ವತ ಯೋಜನೆಗಳಿಗೆ ಶಾಸನಬದ್ಧ ಅನುಮೋದನೆ ನೀಡಬಾರದು’ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ತುಂಗಭದ್ರಾ ನದಿಗೆ ಅಡ್ಡಲಾಗಿ ಆಂಧ್ರಪ್ರದೇಶ ನಿರ್ವಿುಸುತ್ತಿರುವ ಗುಂಡ್ರವೇಲು ಯೋಜನೆ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಸಹ ಜಲಾನಯನ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳ ಪಾಲನ್ನು ನಿರ್ಧರಿಸಿಲ್ಲದಿದ್ದರೂ, ತಮಿಳುನಾಡು ಕಾವೇರಿ-ವಗೈ-ಗುಂಡಾರ್ ಸಂಪರ್ಕ ಕಾಮಗಾರಿ ಮುಂದುವರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಹೀಗೆ ಹಲವು ಯೋಜನೆಗಳು ವಿವಾದದ ಛಾಯೆಯಡಿ ಸಿಲುಕಿವೆ. ಏಕಪಕ್ಷೀಯವಾಗಿ ಅಥವಾ ಕಾನೂನಿನ ಚೌಕಟ್ಟನ್ನು ಮೀರಿ ನಿರ್ಣಯಗಳನ್ನು ಕೈಗೊಳ್ಳುವುದರಿಂದ ಇಂಥ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಮತ್ತು ಅದರಿಂದ ರಾಜ್ಯ-ರಾಜ್ಯಗಳ ನಡುವಿನ ಸೌಹಾರ್ದ ಸಂಬಂಧಕ್ಕೂ ಪೆಟ್ಟು ಬಿದ್ದು, ಜಗಳ, ವ್ಯಾಜ್ಯಗಳು ಮುಂದುವರಿಯುತ್ತವೆ. ಹಲವು ರಾಜ್ಯಗಳ ನಡುವಿನ ಜಲವಿವಾದಗಳಂತೂ ಕದನಗಳಂತೆ ಭಾಸವಾಗುತ್ತಿವೆ. ಪಂಜಾಬ್ ಮತ್ತು ಹರಿಯಾಣ, ಆಂಧ್ರಪ್ರದೇಶ ಹಾಗೂ ತೆಲಂಗಾಣ, ಹೀಗೆ ಹಲವು ರಾಜ್ಯಗಳನ್ನು ಉದಾಹರಿಸಬಹುದು.
ರಾಜ್ಯ ರಾಜ್ಯಗಳ ನಡುವೆ ಇಂಥ ಬೆಳವಣಿಗೆಗಳು ಸಲ್ಲ. ಭಾರತ ಒಕ್ಕೂಟ ವ್ಯವಸ್ಥೆಯನ್ನು ಹೊಂದಿ, ಅಭಿವೃದ್ಧಿಯ ಹಲವು ಮಾದರಿಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ. ರಾಜ್ಯಗಳ ಸಂಕಷ್ಟ-ಸಮಸ್ಯೆಗಳಿಗೆ ಕೇಂದ್ರ ಸ್ಪಂದಿಸುತ್ತ ಬಂದಿದೆ. ಅಂತೆಯೇ, ರಾಜ್ಯಗಳು ಜಾರಿಗೆ ತಂದ ಹಲವು ಮಾದರಿ ಯೋಜನೆಗಳನ್ನು ಮೆಚ್ಚಿ, ಕೇಂದ್ರವೂ ಅನುಷ್ಠಾನಕ್ಕೆ ತಂದಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ಇರುವುದರಿಂದ ರಾಜ್ಯ-ರಾಜ್ಯಗಳ ನಡುವೆ ಉತ್ತಮ ಸಂಬಂಧ, ಸೌಹಾರ್ದ, ಸಾಮರಸ್ಯ ಅಗತ್ಯ. ಈ ಅಂಶಗಳೇ ಅಭಿವೃದ್ಧಿಯ ಆಶಯಕ್ಕೆ ಮತ್ತಷ್ಟು ಬಲ ತುಂಬಬಲ್ಲವು ಕೂಡ. ಕೆಲವು ವಿಷಯಗಳಲ್ಲಿ, ಇಲ್ಲವೆ ಯೋಜನೆಗಳಿಗೆ ಸಂಬಂಧಿಸಿ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗುವುದು ದೊಡ್ಡ ವಿಷಯವಲ್ಲ. ಆದರೆ, ಅವು ಇನ್ನಷ್ಟು ಬೆಳೆದು ರಾಜ್ಯಗಳ ಹಿತಕ್ಕೆ ಮಾರಕವಾಗಿ ಪರಿಣಮಿಸಿದರೆ, ಅದು ದೊಡ್ಡ ನಷ್ಟ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಅಥವಾ ಅಸಮಾಧಾನಗಳನ್ನು ಆರಂಭಿಕ ಹಂತದಲ್ಲೇ ಮಾತುಕತೆ ಮೂಲಕ ಬಗೆಹರಿಸಿಕೊಂಡು ಯೋಜನೆಗಳು ನಿರಾಂತಕವಾಗಿ ಸಾಗಲು ಅನುವು ಮಾಡಿಕೊಡಬೇಕು. ರಾಜ್ಯಗಳ ನಡುವಿನ ಸಂಬಂಧ ಹೊಸಎತ್ತರಕ್ಕೆ ತಲುಪಿ, ಆ ಮೂಲಕ ವಿಕಾಸದ ಪಥ ವಿಸ್ತಾರವಾಗಬೇಕು. ಪ್ರತಿಷ್ಠೆಯನ್ನು ಬದಿಗಿಟ್ಟು ಸಹಕಾರದ ಮಂತ್ರ ಜಪಿಸಿದರೆ ಇದು ಅಸಾಧ್ಯವೇನಲ್ಲ.