

ಚಂದ್ರನ ನೆಲದ ಮೇಲೆ ಗಗನನೌಕೆಯನ್ನು ಯಶಸ್ವಿಯಾಗಿ ಇಳಿಸಲು ಇಸ್ರೋ ಕೈಗೊಂಡಿರುವ ಚಂದ್ರಯಾನ- 3 ಯೋಜನೆಯು ಯಶಸ್ಸು ಸಾಧಿಸುವುದು ಇಲ್ಲವೋ ಎಂಬುದು ಇನ್ನು ಅಂದಾಜು 40 ದಿನಗಳಲ್ಲಿ ಗೊತ್ತಾಗಲಿದೆ. ಯಶಸ್ಸು ದೊರೆಯುವುದೋ ಅಥವಾ ವೈಫಲ್ಯ ಮರುಕಳಿಸುವುದೋ ಏನೇ ಇರಲಿ; ಸಾಕಷ್ಟು ಜಟಿಲವಾಗಿರುವ ಹಾಗೂ ವೈಫಲ್ಯದ ಸಾಧ್ಯತೆಯುಳ್ಳ ಯಾನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೆ ಯತ್ನಿಸಿರುವುದು ನಿಜವಾಗಿಯೂ ಶ್ಲಾಘನೀಯ ಸಂಗತಿಯಾಗಿದೆ. ಪ್ರಯತ್ನಗಳಲ್ಲಿ ಸೋಲಾದರೆ ಪರವಾಗಿಲ್ಲ; ಆದರೆ, ಪ್ರಯತ್ನ ಮಾಡದಿರುವುದು ನಿಜವಾದ ಸೋಲು ಎಂಬ ರೀತಿಯಲ್ಲಿ ಇಸ್ರೋ ವಿಜ್ಞಾನಿಗಳು ಚಂದ್ರಯಾನ- 2ರಲ್ಲಿ ಕೊನೇ ಕ್ಷಣದಲ್ಲಿ ಅನುಭವಿಸಿದ ಒಂದಿಷ್ಟು ವೈಫಲ್ಯವನ್ನು ಸವಾಲಾಗಿ ಸ್ವೀಕರಿಸಿ ಚಂದ್ರಯಾನ-3 ಯೋಜನೆಯಲ್ಲಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಿದ್ದಾರೆ.
ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಯು ಚಂದ್ರಯಾನ-1 ಯೋಜನೆಯನ್ನು 2008ರ ಅಕ್ಟೋಬರ್ನಲ್ಲಿ ಕೈಗೊಂಡಿತ್ತು. ಚಂದ್ರನ ಕಕ್ಷೆ ಸುತ್ತ ಪರಿಭ್ರಮಣೆ ಉದ್ದೇಶದ ಈ ಉಡಾವಣೆಯು ಯಶಸ್ಸನ್ನು ಕೂಡ ಕಂಡಿತ್ತು. ಈ ಮೂಲಕ ಚಂದ್ರನ ಬಳಿ ತಲುಪಿದ ಐದನೇ ಬಾಹ್ಯಾಕಾಶ ಸಂಸ್ಥೆಯಾಗಿ ಇಸ್ರೋ ಹೊರಹೊಮ್ಮಿತು. ಚಂದ್ರನಲ್ಲಿ ನೀರಿನ ಕಣಗಳಿವೆ ಎಂಬ ಅಂಶವನ್ನು ಈ ಯಾನದಲ್ಲಿ ಪತ್ತೆ ಹಚ್ಚಿದ್ದು ಮಹತ್ವದ ಸಾಧನೆಯಾಯಿತು. ಚಂದ್ರಯಾನ-1ರ ನೌಕೆಯು ಚಂದ್ರನ ಮೇಲೆ ಕಾಲಿಡದೆ, ಅದರ ಸುತ್ತ ಪರಿಭ್ರಮಣೆ ಮಾತ್ರ ಮಾಡಿತ್ತು. ತದನಂತರ ಇಸ್ರೋ 2019ರ ಜುಲೈ- ಆಗಸ್ಟ್ನಲ್ಲಿ ಚಂದ್ರಯಾನ-2 ಯೋಜನೆಯ ಮೂಲಕ ಚಂದ್ರನ ನೆಲದಲ್ಲಿ ನೌಕೆಯನ್ನು ಇಳಿಸುವ ಸಾಹಸಕ್ಕೆ ಕೈಹಾಕಿತು. 2019ರ ಜುಲೈ 22ರಂದು ಯಶಸ್ವಿಯಾಗಿ ನೌಕೆಯನ್ನು ಉಡಾಯಿಸಿತು. ಆಗಸ್ಟ್ 20ರಂದು ಚಂದ್ರನ ಕಕ್ಷೆಯನ್ನು ನೌಕೆಯು ಯಶಸ್ವಿಯಾಗಿ ಪ್ರವೇಶಿಸಿತು ಕೂಡ. ಲ್ಯಾಂಡರ್ನಲ್ಲಿನ ಐದು ಇಂಜಿನ್ಗಳು ನಿರೀಕ್ಷೆಗಿಂತ ಸ್ವಲ್ಪ ಹೆಚ್ಚಿನ ಒತ್ತಡವನ್ನು ಸೃಷ್ಟಿಸಿದ ಪರಿಣಾಮ ಅಂತಿಮ ಕ್ಷಣದಲ್ಲಿ ವೈಫಲ್ಯ ಸಂಭವಿಸಿತು. ಹೀಗಾಗಿ, ಲ್ಯಾಂಡರ್ ಒಳಗಿದ್ದ ರೋವರ್ ಚಂದ್ರನ ನೆಲದ ಮೇಲೆ ಸುಲಲಿತವಾಗಿ ಇಳಿಯಲು ಸಾಧ್ಯವಾಗಲಿಲ್ಲ. ಹೀಗಿದ್ದರೂ, ಈ ನೌಕೆಯ ಆರ್ಬಿಟರ್ ಭಾಗವು ಈಗಲೂ ಯಶಸ್ವಿಯಾಗಿ ಚಂದ್ರನ ಸುತ್ತ ಸುತ್ತುತ್ತ ತನ್ನ ಕಾಯರ್åವನ್ನು ನಿರ್ವಹಿಸುತ್ತಿರುವುದು ಈ ಯಾನವು ಸಂಪೂರ್ಣ ವೈಫಲ್ಯವನ್ನು ಅನುಭವಿಸಿಲ್ಲ ಎಂಬುದರ ಸಂಕೇತವಾಗಿದೆ.
ಚಂದ್ರಯಾನ-2ರ ಭಾಗಶಃ ವೈಫಲ್ಯ ಕೂಡ ಶ್ಲಾಘನೀಯ ಸಂಗತಿಯೇ ಆಗಿದೆ. ಏಕೆಂದರೆ, ಈ ಯೋಜನೆಯಲ್ಲಿ ಇಸ್ರೋ ತನ್ನ ನೌಕೆಯನ್ನು ಹಾರಿಸಿದ್ದು ಚಂದ್ರನ ದಕ್ಷಿಣ ಧ್ರುವಕ್ಕೆ. ಇದು ಸೂರ್ಯನ ಬೆಳಕಿನ ಅಭಾವ ಇರುವ ಕತ್ತಲುಮಯ ಪ್ರದೇಶ. ಬಾಹ್ಯಾನೌಕೆಯ ಯಂತ್ರೋಪಕರಣಗಳು ತಮಗೆ ಅಗತ್ಯವಿರುವ ಇಂಧನವನ್ನು ಪಡೆದುಕೊಳ್ಳಲು ಸೌರಶಕ್ತಿ ಅವಲಂಬಿಸಿರುತ್ತವೆ. ವಾಸ್ತವ ಹೀಗಿದ್ದರೂ ಜಟಿಲ ಸವಾಲನ್ನು ಸ್ವೀಕರಿಸಿ ಸೂರ್ಯನ ಬೆಳಕಿನ ಅಭಾವ ಇರುವ ಪ್ರದೇಶದಲ್ಲಿಯೇ ಪ್ರಯಾಣ ಕೈಗೊಂಡ ಇಸ್ರೋ ಧೈರ್ಯವನ್ನು ಮೆಚ್ಚಲೇಬೇಕು. ಮತ್ತೆ ಅಂತಹುದೆ ಎದೆಗಾರಿಕೆ ಪ್ರದರ್ಶಿಸಿರುವ ಇಸ್ರೋ, ಈ ಅಪೂರ್ಣ ಯಶಸ್ಸನ್ನು ಸಂಪೂರ್ಣವಾಗಿ ಸಾಧಿಸುವ ನಿಟ್ಟಿನಲ್ಲಿ ಚಂದ್ರಯಾನ-3 ಯೋಜನೆಯನ್ನು ಕೈಗೊಂಡಿದೆ. ಇಸ್ರೋದ ಮರುಯತ್ನ ಈ ಬಾರಿ ಯಶಸ್ಸು ಕಾಣಲಿ; ಬಾಹ್ಯಾಕಾಶ ಯಾನದಲ್ಲಿ ಭಾರತದ ಹೆಸರನ್ನು ಪ್ರಕಾಶಮಾನವಾಗಿಸಿರುವ ಇಸ್ರೋದಿಂದ ಮತ್ತೊಂದು ದಾಖಲೆ ಸೃಷ್ಟಿಯಾಗಲಿ ಎಂಬ ನಿರೀಕ್ಷೆ, ಹಾರೈಕೆ ಭಾರತೀಯರದ್ದಾಗಿದೆ.