ನಿಷೇಧ, ನಿರ್ಬಂಧ ಅಗತ್ಯ: ಆನ್​ಲೈನ್ ಜೂಜು, ಲೋನ್ ಆ್ಯಪ್ ಹಾವಳಿ

Video Games
Published on

ಸಾಕಷ್ಟು ಜಾಗೃತಿ, ಮುನ್ನೆಚ್ಚರಿಕೆ, ನಿರ್ಬಂಧ ಕ್ರಮಗಳ ನಡುವೆಯೇ ಆನ್​ಲೈನ್ ಬೆಟ್ಟಿಂಗ್ ಹಾಗೂ ಲೋನ್ ಆಪ್​ಗಳ ಹಾವಳಿ ಮುಂದುವರಿದಿದೆ. ಜೂಜಿನ ಗೀಳಿಗೆ ಸಿಲುಕಿ ಗೋಳಾಡುವವರ ಹಾಗೂ ಆನ್​ಲೈನ್ ಸಾಲದ ಹೆಚ್ಚಿನ ಬಡ್ಡಿಯ ವಂಚನೆಗೆ ಸಿಲುಕಿ ಪರದಾಡುವವರ ಸಂಖ್ಯೆಯು ಹೆಚ್ಚುತ್ತಲೇ ಸಾಗಿರುವುದು ಆಂತಕಕಾರಿ ಸಂಗತಿಯಾಗಿದೆ. ಜುಲೈ 2022 ರಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, ಆಗಸ್ಟ್ 2019 ಮತ್ತು ಡಿಸೆಂಬರ್ 2021ರ ನಡುವೆ ರಾಷ್ಟ್ರೀಯ ಸೈಬರ್ ಕ್ರೖೆಮ್ ರಿಪೋರ್ಟಿಂಗ್ ಪೋರ್ಟಲ್​ನಲ್ಲಿ ಆನ್​ಲೈನ್ ಬೆಟ್ಟಿಂಗ್ ಮತ್ತು ಜೂಜಿನ ವೆಬ್​ಸೈಟ್​ಗಳ ವಿರುದ್ಧ 5,000 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ.

ಇದಲ್ಲದೆ, ಭಾರತದಲ್ಲಿ ಹೊರಭಾಗದ ವೆಬ್​ಸೈಟ್​ಗಳು ನಿರ್ಭಯವಾಗಿ ಕಾರ್ಯನಿರ್ವಹಿಸುತ್ತವೆ ಎಂದೂ ಈ ವರದಿಯಲ್ಲಿ ಹೇಳಲಾಗಿದೆ. ಆದರೆ, ಈ ರೀತಿ ವಂಚನೆಗೆ ಒಳಗಾದರೂ ಗೌರವಕ್ಕೆ ಧಕ್ಕೆ ಬರುತ್ತದೆ ಎಂಬುದು ಸೇರಿ ಅನೇಕ ಕಾರಣಗಳಿಗಾಗಿ ದೂರು ದಾಖಲಿಸದವರ ಸಂಖ್ಯೆ ಅಪಾರ ಪ್ರಮಾಣದಲ್ಲಿದೆ. ಭಾರತದ ಕಾನೂನಿನ ಪ್ರಕಾರ ಜೂಜಾಟವನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ. ಆದರೆ, ಇಂಟರ್​ನೆಟ್ ಅಸ್ತಿತ್ವದಲ್ಲಿರುವುದಕ್ಕಿಂತ ಮುಂಚೆಯೇ ಅಂಗೀಕರಿಸಲ್ಪಟ್ಟ ಕಾನೂನು ಇದಾಗಿರುವುದರಿಂದ ಆನ್​ಲೈನ್ ಜೂಜಿನ ಬಗ್ಗೆ ಯಾವುದೇ ಉಲ್ಲೇಖವನ್ನು ಹೊಂದಿಲ್ಲ. ಹೀಗಾಗಿ, ಆನ್​ಲೈನ್ ಕ್ಯಾಸಿನೊ ಮತ್ತು ಬೆಟ್ಟಿಂಗ್ ಚಟುವಟಿಕೆಗಳನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುವುದಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಪ್ರಕಾರ, ಆನ್​ಲೈನ್ ಚಟುವಟಿಕೆಗಳನ್ನು ನಿಯಂತ್ರಿಸಬಹುದಾಗಿದೆ ಹೊರತು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ.

ಆನ್​ಲೈನ್ ಗೇಮ್​ಗಳನ್ನು ನಿಷೇಧಿಸುವ ಕರ್ನಾಟಕ ಸರ್ಕಾರದ ಕಾನೂನು ನಿಬಂಧನೆಯನ್ನು ಕರ್ನಾಟಕ ಹೈಕೋರ್ಟ್ 2022ರ ಫೆಬ್ರುವರಿಯಲ್ಲಿ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ ಕರ್ನಾಟಕ ಸರ್ಕಾರವು, ಕಳೆದ ಮೂರು ವರ್ಷಗಳಲ್ಲಿ 28,000 ಪ್ರಕರಣಗಳನ್ನು ದಾಖಲಿಸುವ ಮೂಲಕ ಸೈಬರ್ ಅಪರಾಧವು ಶಿಖರ ಮಟ್ಟ ತಲುಪಿರುವುದರಿಂದ ಸಾರ್ವಜನಿಕ ಸುವ್ಯವಸ್ಥೆ ಕಾಪಾಡಿಕೊಳ್ಳಲು ಆನ್​ಲೈನ್ ಗೇಮಿಂಗ್ ವಿರುದ್ಧ ಕಾನೂನು ಅಗತ್ಯವಿದೆ ಎಂದು ಹೇಳಿದೆ.

ಆನ್​ಲೈನ್ ಗೇಮಿಂಗ್​ನಿಂದಾಗಿ ಹಲವಾರು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಕುಟುಂಬಗಳು ನಾಶವಾಗಿವೆ ಎಂಬುದರತ್ತಲೂ ಸರ್ಕಾರ ಗಮನಸೆಳೆದಿದೆ. ಈಗ ಬಿಹಾರ ಪೊಲೀಸರು ಕೂಡ 100ಕ್ಕೂ ಹೆಚ್ಚು ಜೂಜು/ಗೇಮಿಂಗ್ ಮತ್ತು ಸಾಲ ನೀಡುವ ಅಪ್ಲಿಕೇಶನ್​ಗಳನ್ನು ನಿಷೇಧಿಸುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಕೋರಿದ್ದಾರೆ. ಇಂತಹ ಲೋನ್ ಲೆಂಡಿಂಗ್ ಅಪ್ಲಿಕೇಶನ್​ಗಳ ಮೂಲಕ ಸಾಲ ಪಡೆದ ಜನರಿಗೆ ಹೆಚ್ಚಿನ ಬಡ್ಡಿ ದರದ ಸುಲಿಗೆ ಮತ್ತು ಕಿರುಕುಳದ ಬಗ್ಗೆ ಹಲವಾರು ದೂರುಗಳು ಬಂದಿವೆ. ಈ ಸಾಲದ ಅಪ್ಲಿಕೇಶನ್​ಗಳು ಗ್ರಾಹಕರ ಫೋನ್​ನಲ್ಲಿರುವ ಎಲ್ಲಾ ಮಾಹಿತಿ ಕನ್ನ ಹಾಕುತ್ತವೆ. ಸಾಲ ಮರುಪಾವತಿಸಲು ವಿಫಲವಾದರೆ, ಅವರ ಸಂಪರ್ಕ ಪಟ್ಟಿಯಲ್ಲಿರುವ ಜನರಿಗೆ ಅಶ್ಲೀಲ ಮಾಹಿತಿ ಕಳುಹಿಸಿ ಕಿರುಕುಳ ನೀಡುತ್ತವೆ ಎಂದು ಬಿಹಾರ ಪೊಲೀಸರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಆನ್​ಲೈನ್ ಜೂಜು ನಿಷೇಧಿಸುವ ಸ್ಪಷ್ಟ ಕಾನೂನನ್ನು ಕೇಂದ್ರ ಸರ್ಕಾರವು ಜಾರಿಗೆ ತರುವ ಅಗತ್ಯವಿದೆ. ಇಂಟರ್​ನೆಟ್ ಮತ್ತು ಪ್ಲೇಸ್ಟೋರ್​ನಲ್ಲಿ ಲಭ್ಯವಿರುವ ನೋಂದಾಯಿಸದ ಅಥವಾ ಕಾನೂನುಬಾಹಿರ ಸಾಲದ ಅಪ್ಲಿಕೇಶನ್​ಗಳಿಂದ ಯಾವುದೇ ಸಾಲ ತೆಗೆದುಕೊಳ್ಳದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತ ಬಂದಿದೆ. ಅಲ್ಲದೆ, ಸಾಕಷ್ಟು ಅಕ್ರಮ ಲೋನ್ ಆಪ್​ಗಳನ್ನು ನಿಷೇಧಿಸಿದೆ. ಈ ಕುರಿತು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net