ಶೀಘ್ರ ಸ್ಪಂದನೆ ಅವಶ್ಯ; ಅಕಾಲಿಕ ಮಳೆಯಿಂದ ವ್ಯಾಪಕ ಹಾನಿ

Editorial
Published on

ಈ ವರ್ಷ ರಾಜ್ಯದಲ್ಲಿ ಮುಂಗಾರಿನ ಆರ್ಭಟವೂ ಜೋರಾಗಿತ್ತು. ವಾಡಿಕೆಗಿಂತ ಹೆಚ್ಚು ಸುರಿದ ಮಳೆಯು ಬೆಳೆಗಳನ್ನು ಆಪೋಶನ ತೆಗೆದುಕೊಂಡಿತು. ಉತ್ತರ ಕರ್ನಾಟಕ, ಮಲೆನಾಡು ಭಾಗದಲ್ಲಂತೂ ವ್ಯಾಪಕ ಹಾನಿಯಾಯಿತು. ಹಿಂಗಾರಿನ ಬೆಳೆಗಳಾದರೂ ಕೈಗೆ ಸಿಗುತ್ತವೆ ಎಂಬ ಆಶಯದಿಂದ ರೈತರು ಹೊಸ ಬೆಳೆಗಳನ್ನು ಬೆಳೆದು, ಫಸಲಿನ ನಿರೀಕ್ಷೆಯಲ್ಲಿದ್ದರು. ಮತ್ತೆ ವರುಣ ಆರ್ಭಟಿಸುತ್ತಿದ್ದಾನೆ. ಅಕ್ಟೋಬರ್ ಮತ್ತು ನವೆಂಬರ್​ನ ಮಳೆ ಈ ಬಾರಿ ಕರ್ನಾಟಕ ಮಾತ್ರವಲ್ಲ ದಕ್ಷಿಣ ಭಾರತದ ಇತರ ರಾಜ್ಯಗಳಲ್ಲೂ ಅಪಾರ ಹಾನಿ ಸೃಷ್ಟಿಸಿದೆ. ಪ್ರಕೃತಿಯ ಮುನಿಸಿಗೂ, ಮಾರುಕಟ್ಟೆಯ ಏರಿಳಿತಗಳಿಗೂ ರೈತನೇ ಮೊದಲ ಬಲಿಪಶು. ಈಗಂತೂ, ಕೈಗೆ ಬಂದ ತುತ್ತು ಬಾಯಿಗೆ ಬರದಂಥ ಸ್ಥಿತಿ. ಹವಾಮಾನ ಇಲಾಖೆ ಇನ್ನೂ ಕೆಲವು ದಿನ ಮಳೆ ಮುಂದುವರಿಯುವ ಸೂಚನೆ ಕೊಟ್ಟಿರುವುದರಿಂದ ರೈತರು ಚಿಂತಾಕ್ರಾಂತರಾಗಿರುವುದಂತೂ ಹೌದು. ಸಾಂಪ್ರದಾಯಿಕ ಬೆಳೆಗಳು, ವಾಣಿಜ್ಯ ಬೆಳೆಗಳು, ತೋಟಗಾರಿಕೆ ಬೆಳೆಗಳು ಹೀಗೆ ಎಲ್ಲವೂ ಮಳೆಯ ಅವಾಂತರಕ್ಕೆ ಬಲಿಯಾಗುತ್ತಿವೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೃಷಿಯನ್ನೇ ನೆಚ್ಚಿಕೊಂಡವರ ಬದುಕು ಅಕಾಲಿಕ ಮಳೆಯಿಂದ ಅತಂತ್ರವಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅಡಕೆ, ಭತ್ತ, ಮೆಕ್ಕೆಜೋಳ, ಶುಂಠಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ, ಹಾಸನ ಜಿಲ್ಲೆಯಲ್ಲಿ ರಾಗಿ ಜೋಳ, ಕಾಫಿ, ಕಾಳುಮೆಣಸು, ಮಂಡ್ಯದಲ್ಲಿ ಭತ್ತ, ರಾಗಿ, ಕಲಬುರಗಿ, ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ತೊಗರಿ, ಜೋಳ, ಈರುಳ್ಳಿ ಬೆಳೆಗಳು ಮಳೆಯಿಂದ ಹಾನಿಗೊಳಗಾಗಿವೆ. ಬೆಳೆಹಾನಿ ಮಾತ್ರವಲ್ಲ ಹಲವು ಜಿಲ್ಲೆಗಳಲ್ಲಿ ಕೃಷಿಗೆ ಆಧಾರವಾಗಿದ್ದ ಸಾಕುಪ್ರಾಣಿಗಳು ಬಲಿಯಾಗಿವೆ. ಕೆಲವೆಡೆ ಆಸ್ತಿಪಾಸ್ತಿ ಹಾನಿ, ಜೀವಹಾನಿಯ ಘಟನೆಗಳೂ ವರದಿಯಾಗಿವೆ. ಹಿಂಗಾರು ಬೆಳೆಗಳು ಕೈಹಿಡಿಯಲಿವೆ ಎಂಬ ನಿರೀಕ್ಷೆಯಲ್ಲಿದ್ದ ರೈತರು ನಿರಾಶರಾಗಿದ್ದಾರೆ. ವಾಯುಭಾರ ಕುಸಿತವೇ ಅಕಾಲಿಕ ಮಳೆಗೆ ಕಾರಣವಾಗಿದ್ದು, ಹಾನಿಯ ನಿಖರ ಪ್ರಮಾಣ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಕೃಷಿರಂಗದ ಪಾಲಿಗೆ ಇದು ಮಗದೊಂದು ಆಘಾತ. ಕರೊನಾ ಸೋಂಕಿನ ಹಾವಳಿ ಮತ್ತು ಅದನ್ನು ನಿಯಂತ್ರಿಸಲು ಜಾರಿಗೆ ತರಲಾದ ಲಾಕ್​ಡೌನ್ ಪರಿಣಾಮ ಹಲವು ರಂಗಗಳಂತೆ ಕೃಷಿರಂಗವೂ ತುಂಬ ನಷ್ಟ ಅನುಭವಿಸಿದೆ. ಈಗ ಗಾಯದ ಮೇಲೆ ಬರೆ ಎಳೆದಂತೆ ಅಕಾಲಿಕ ಮಳೆಯ ಅಬ್ಬರ.

ರೈತರು ಸಂಕಷ್ಟದಲ್ಲಿರುವಾಗ ನಮ್ಮ ಜನಪ್ರತಿನಿಧಿಗಳು ಮಾತ್ರ ರಾಜಕೀಯ ವಿಷಯಗಳನ್ನು ಇರಿಸಿಕೊಂಡೇ ಪರಸ್ಪರ ಕೆಸರೆರಚಾಟದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಈಗ ಬಿಟ್ ಕಾಯಿನ್ ಪ್ರಕರಣ ಪ್ರತಿಷ್ಠೆ, ಜಿದ್ದಾಜಿದ್ದಿಯಾಗಿ ಪರಿಣಮಸಿದ್ದು, ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿವೆ.

ರಾಜಕೀಯ ಜಂಜಾಟಗಳನ್ನು ಬದಿಗಿಟ್ಟು ಮಳೆಹಾನಿಗೆ, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಸಮಯ ಇದಾಗಿದೆ. ಎಲ್ಲ ಸಚಿವರು, ಶಾಸಕರು ಈ ವಿಷಯದಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಪ್ರತಿಪಕ್ಷಗಳು ಕೂಡ ಇಂಥ ಹೊತ್ತಲ್ಲಿ ಜನರೊಂದಿಗೆ ನಿಲ್ಲಬೇಕೆ ಹೊರತು ರಾಜಕೀಯ ವಾಗ್ವಾದಗಳಲ್ಲಿ ತೊಡಗಬಾರದು. ಹಾನಿಗೆ ಒಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡುವುದು, ರೈತರಲ್ಲಿ ಆತ್ಮವಿಶ್ವಾಸ ತುಂಬುವುದು ಜನಪ್ರತಿನಿಧಿಗಳ ಮತ್ತು ಸಂಬಂಧಿತ ಅಧಿಕಾರಿಗಳ ಮೊದಲ ಆದ್ಯತೆ ಆಗಬೇಕು. ನಷ್ಟದ ನಿಖರ ಪ್ರಮಾಣವನ್ನು ಅಂದಾಜಿಸಿ, ರೈತರಿಗೆ ಬೆಂಬಲವಾಗಿ ನಿಲ್ಲುವ ಮತ್ತು ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಪ್ರಯತ್ನಗಳು ವೇಗವಾಗಿ ನಡೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net