ನಿಲ್ಲದ ಚೀನಾ ಚಾಳಿ: ಅರುಣಾಚಲ ಗಡಿಯಲ್ಲಿ ಚೀನಾ ಸೇನೆಯ ಕಿರಿಕ್

Editorial
Published on

‘ಹುಟ್ಟುಗುಣ ಸುಟ್ಟರೂ ಹೋಗದು’ ಎಂಬಂತೆ, ಗಡಿ ವಿಚಾರವಾಗಿ ಚೀನಾ ತನ್ನ ತಂಟೆಕೋರ ನೀತಿಯನ್ನು ಕೈಬಿಡುವುದಿಲ್ಲ ಎಂಬುದಕ್ಕೆ ಮೊನ್ನಿನ ಘಟನೆ ಮತ್ತೊಂದು ಸಾಕ್ಷಿ. ಚೀನಾ ಸೈನಿಕರು ಅರುಣಾಚಲ ಪ್ರದೇಶದ ತವಾಂಗ್ ಭಾಗದಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆ ದಾಟಿ ಭಾರತದ ಭಾಗಕ್ಕೆ ಒಳಬಂದಿದ್ದು ಈ ಸಲದ ಘರ್ಷಣೆಗೆ ಕಾರಣ. ಡಿ. 9ರಂದು ನಡೆದಿರುವ ಘರ್ಷಣೆ ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 300ರಷ್ಟಿದ್ದ ಚೀನಾ ಸೈನಿಕರು ಶಸ್ತ್ರಸಜ್ಜಿತರಾಗಿದ್ದರು ಎಂಬುದು ಅವರ ಇರಾದೆ ಏನಿತ್ತೆಂಬುದನ್ನು ಸ್ಪಷ್ಟಪಡಿಸುತ್ತದೆ. ಭಾರತದ ಸೈನಿಕರು ಈ ಅತಿಕ್ರಮಣವನ್ನು ಬಲವಾಗಿ ತಡೆದಾಗ ಘರ್ಷಣೆ ಸಂಭವಿಸಿ ಎರಡೂ ಕಡೆಯ ಕೆಲ ಸೈನಿಕರಿಗೆ ಗಾಯಗಳಾಗಿವೆ ಎಂದು ವರದಿಗಳು ಹೇಳಿವೆ.

2020ರಲ್ಲಿ ಗಲ್ವಾನ್​ನಲ್ಲಿ ನಡೆದ ತೀವ್ರ ಸಂಘರ್ಷದ ನಂತರದ ಎರಡೂ ಕಡೆಯ ಸೈನಿಕರ ನಡುವಿನ ಮೊದಲ ಪ್ರಮುಖ ಘರ್ಷಣೆ ಇದಾಗಿದೆ. ಭಾರಿ ಸನ್ನದ್ಧರಾಗಿ ಬಂದಿದ್ದ ಚೀನೀಯರಿಗೆ ಭಾರತೀಯ ಸೈನಿಕರು ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದುದರ ಅರಿವಿರಲಿಲ್ಲ. ಭಾರತೀಯರಿಗಿಂತ ಹೆಚ್ಚಿಗೆ ಚೀನಿ ಯೋಧರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಘರ್ಷಣೆ ನಂತರ, ಆ ಪ್ರದೇಶದಲ್ಲಿನ ಭಾರತೀಯ ಕಮಾಂಡರ್, ಚೀನಿ ಕಮಾಂಡರ್ ಜೊತೆ ಧ್ವಜ ಸಭೆ ನಡೆಸಿದರು. ಸದ್ಯ ಎರಡೂ ಕಡೆಯ ಸೈನಿಕರು ತಂತಮ್ಮ ಶಿಬಿರಕ್ಕೆ ವಾಪಸಾಗಿದ್ದಾರೆ. 2020 ಜೂನ್​ನಲ್ಲಿ ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಚೀನಾ ತನ್ನ ಕಡೆ ಎಷ್ಟು ಸೈನಿಕರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂಬುದನ್ನು ಈವರೆಗೂ ಅಧಿಕೃತವಾಗಿ ಹೇಳಿಲ್ಲವಾದರೂ, ಆ ಕಡೆಯ 40 ಸೈನಿಕರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಅನಧಿಕೃತ ವರದಿಗಳು ಹೇಳುತ್ತವೆ. ಆ ಸಂದರ್ಭದಲ್ಲಿ ಸಹ ಚೀನಾ ಸೈನಿಕರ ಆಕ್ರಮಣಕಾರಿ ವರ್ತನೆ ಹೊಡೆದಾಟಕ್ಕೆ ಕಾರಣವಾಗಿತ್ತು. ನಂತರದಲ್ಲಿ ಸುಮಾರು ಎರಡೂವರೆ ತಿಂಗಳ ಕಾಲ ಎರಡೂ ಕಡೆಯ ಸೈನಿಕರು ಗಡಿಯಲ್ಲಿ ಸನ್ನದ್ಧರಾಗಿ ನಿಂತಿದ್ದರಿಂದ ಯುದ್ಧ ಸನ್ನಿವೇಶ ನಿರ್ವಣಗೊಂಡಿತ್ತು. ಏಷ್ಯಾ ವಲಯದ ಎರಡು ಪ್ರಮುಖ ದೇಶಗಳು ಮುಖಾಮುಖಿಯಾಗಿ ನಿಂತಿದ್ದು ಜಾಗತಿಕವಾಗಿ ಸಹ ಆತಂಕಕ್ಕೆ ಕಾರಣವಾಗಿತ್ತು. ಕೊನೆಗೂ ಚೀನಾ ಮೊದಲು ಹಿಂದೆಗೆದು ಪರಿಸ್ಥಿತಿ ತಣ್ಣಗಾಯಿತು. ಗಡಿ ವಿಷಯದಲ್ಲಿ ಚೀನಾ ಆಗೀಗ ಇಂಥ ದುಸ್ಸಾಹಸ ತೋರುತ್ತಿರುತ್ತದೆ.

ವ್ಯಾಪಾರವಹಿವಾಟು ವಿಷಯದಲ್ಲಿ ಭಾರತ ಹಾಗೂ ಚೀನಾ ನಡುವೆ ಭರ್ಜರಿ ಸಂಬಂಧವೇ ಇದೆ. ನಮ್ಮಿಂದ ಚೀನಾಕ್ಕೆ ರಫ್ತು ಪ್ರಮಾಣ ಕಡಿಮೆ, ಆಮದು ಹೆಚ್ಚು ಎಂಬುದು ಬಿಟ್ಟರೆ ಗಡಿ ತಗಾದೆ ನಡುವೆಯೂ ವ್ಯಾಪಾರ ನಂಟು ಮುಂದುವರಿದುಕೊಂಡು ಬಂದಿದೆ. ಹೀಗಿದ್ದರೂ, ಭಾರತದ ಬೆಳವಣಿಗೆಯನ್ನು ಸಹಿಸದ ಚೀನಾ ಗಡಿ ವಿಷಯದಲ್ಲಿ ಆಗೀಗ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಆಂತರಿಕವಾಗಿ ಪರಿಸ್ಥಿತಿ ವಿಷಮಿಸಿದಾಗ ಜನರು ಹಾಗೂ ಅಂತಾರಾಷ್ಟ್ರೀಯ ವಲಯದ ಗಮನವನ್ನು ಬೇರೆಡೆಗೆ ಸೆಳೆಯಲು ಚೀನಾದ ವರಿಷ್ಠರು ಇಂಥ ಕಿಡಿಗೇಡಿತನ ಮಾಡುತ್ತಾರೆಂಬ ಗುಮಾನಿಯೂ ಇದೆ. ಇದೇನೇ ಇದ್ದರೂ, ಎಂಥದೇ ಸನ್ನಿವೇಶ ಎದುರಿಸಲು ಭಾರತ ಸಹ ಶಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net