

ಯೌವ್ವನಾವಸ್ಥೆಯಲ್ಲಿಯೇ ಹಿಂದುತ್ವ ಹಾಗೂ ಭಾರತದ ತತ್ತ್ವಶಾಸ್ತ್ರದ ಕುರಿತು ಬೋಧನೆ ಮಾಡಿ ಇಡೀ ಜಗತ್ತೇ ಭಾರತೀಯ ಚಿಂತನೆಗಳ ಬಗೆಗೆ ಸದಭಿಪ್ರಾಯ, ಗೌರವ ಹಾಗೂ ಆಸಕ್ತಿ ಹೊಂದುವಂತೆ ಮಾಡಿದ ಶ್ರೇಯಸ್ಸು ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. 1893ರ ಸೆಪ್ಟೆಂಬರ್ 11ರಂದು ವಿಶ್ವದ ಧರ್ಮಗಳ ಸಂಸತ್ತಿನಲ್ಲಿ ಅವರು ಮಾಡಿದ ಭಾಷಣ ಜಗತ್ತಿಗೆ ಬಹುದೊಡ್ಡ ಸಂದೇಶವನ್ನೇ ನೀಡಿತು.ಈ ಭಾಷಣದಲ್ಲಿನ ಮೊದಲ ನುಡಿ ‘ಅಮೆರಿಕದ ಸಹೋದರ ಸಹೋದರಿಯರೇ.. ’ ಎಂಬುದು ಚಿರಸ್ಮರಣೀಯ. ಇಂತಹ ವೀರಸನ್ಯಾಸಿಯ ಸ್ಮರಣಾರ್ಥವಾಗಿ ಅವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ಭಾರತ ಸರ್ಕಾರವು 1984ರಲ್ಲಿ ನಿರ್ಧರಿಸಿತು. ಅದರಂತೆ ಈ ವರ್ಷ ‘ವಿಕಸಿತ ಯುವ ವಿಕಸಿತ ಭಾರತ’ ಎಂಬ ಧ್ಯೇಯವಾಕ್ಯದೊಂದಿಗೆ ದೇಶದೆಲ್ಲೆಡೆ ಯುವ ದಿನವನ್ನು ಆಚರಿಸಲಾಗುತ್ತಿದೆ.
ಸ್ವಾಮಿ ವಿವೇಕಾನಂದರು ಭಾರತದ ಯುವಜನತೆಯ ಶಕ್ತಿ- ಸಾಮರ್ಥ್ಯಗಳ ಬಗೆಗೆ ಅಪಾರ ವಿಶ್ವಾಸ ಹೊಂದಿದ್ದರು. ‘ನನಗೆ ನೂರು ಜನ ಸದೃಢ ಯುವಕರನ್ನು ನೀಡಿ, ನಾನು ಬಲಾಢ್ಯ ಜಗದ್ಗುರು ಭಾರತವನ್ನು ಕಟ್ಟುತ್ತೇನೆ; ಭಾರತದ ಯುವಶಕ್ತಿಗೆ ಸರಿಸಾಟಿಯಾಗಿ ನಿಲ್ಲುವಂತದ್ದು ಯಾವುದೂ ಇಲ್ಲ’ ಎಂದು ಅವರು ಸಾರಿದ್ದರು. ಒಂದು ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದೆ. ತರುಣರ ಪ್ರಮಾಣ ಹೆಚ್ಚಾದಂತೆ ದೇಶ ಬಲಿಷ್ಠವಾಗುತ್ತಾ ಹೋಗುತ್ತದೆ. ಅಂತೆಯೇ ಭಾರತವು ಈಗ ಯುವರಾಷ್ಟ್ರವೇ ಆಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 40ಕ್ಕಿಂಲೂ ಅಧಿಕ ಇರುವುದು ಯುವಜನತೆ. ಈ ಸಮುದಾಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ದೇಶ ವೇಗವಾಗಿ ಪ್ರಗತಿ ಸಾಧಿಸುವುದರಲ್ಲಿ ನಿಸ್ಸಂಶಯ. ಮುಂಬರುವ ದಿನಗಳಲ್ಲಿ ಚೀನಾವನ್ನು ಹಿಂದಿಕ್ಕಿ ಜಗತ್ತಿನಲ್ಲಿಯೇ ಅತಿಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾಗುವತ್ತ ಭಾರತ ಹೆಜ್ಜೆ ಹಾಕುತ್ತಿದೆ. ಈ ಜನಸಂಖ್ಯೆ ಹೆಚ್ಚಳವು ಭಾರತಕ್ಕೆ ಹೊರೆಯಾಗದು ಎಂಬುದು ಪರಿಣತರ ಅಭಿಪ್ರಾಯವಾಗಿದೆ. ಏಕೆಂದರೆ, ಭಾರತದ ಒಟ್ಟು ಜನಸಂಖ್ಯೆಯಲ್ಲಿ ಬಹುಪಾಲು ಯುವಕರೇ ಇದ್ದು, ಇವರು ದೇಶದ ಬಹುದೊಡ್ಡ ಆಸ್ತಿಯಾಗಿದ್ದಾರೆ. ತರುಣರ ಈ ಬಲವು ಭಾರತವನ್ನು ಸದೃಢಗೊಳಿಸುತ್ತದೆ ಎಂಬ ಪರಿಣತರ ಲೆಕ್ಕಾಚಾರವು ಈಗಾಗಲೇ ನಿಜವಾಗತೊಡಗಿದೆ. 2022ರಲ್ಲಿಯೇ ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ.
ದೇಶದ ಯುವಶಕ್ತಿಯನ್ನು ಮಾರ್ಗದರ್ಶನ ನೀಡಿ ಸೂಕ್ತ ರೀತಿಯಲ್ಲಿ ಬೆಳೆಸುವ ಹಾಗೂ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವ ನೀತಿಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತಿವೆ. ಎಲ್ಲ ಕ್ಷೇತ್ರಗಳಲ್ಲಿ ಯುವಕರನ್ನು ಸಬಲೀಕರಣಗೊಳಿಸುವ ಉದ್ದೇಶದೊಂದಿಗೆ ಕರ್ನಾಟಕ ಯುವ ನೀತಿಗೆ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ. ಪ್ರತ್ಯೇಕ ಯುವ ಸಬಲೀಕರಣ ನಿರ್ದೇಶನಾಲಯ, ಯುವ ಬಜೆಟ್, ಯುವ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ ವ್ಯವಸ್ಥೆ ಮುಂತಾದ ಸಂಗತಿಗಳು ಇದರಲ್ಲಿ ಅಡಕವಾಗಿವೆ. 2014ರ ರಾಷ್ಟ್ರೀಯ ಯುವ ನೀತಿಯನ್ನು ಪರಾಮಶಿಸಿ ಅಗತ್ಯ ಬದಲಾವಣೆಗಳೊಂದಿಗೆ ಹೊಸ ನೀತಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಕೂಡ ಮುಂದಾಗಿದೆ. ಯುವಜನರು ವ್ಯಸನಗಳಿಗೆ ತುತ್ತಾಗಿ ತಪು್ಪ ಮಾರ್ಗದಲ್ಲಿ ಸಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಅಂಶಗಳು ಕೂಡ ಯುವ ನೀತಿಯಲ್ಲಿವೆ. ಇವುಗಳು ಸೂಕ್ತವಾಗಿ ಜಾರಿಯಾದರೆ ಯುವ ಭಾರತದ ಕೀರ್ತಿ ಪತಾಕೆ ಜಗತ್ತಿನಲ್ಲೆಡೆ ರಾರಾಜಿಸುವುದರಲ್ಲಿ ಸಂದೇಹವೇ ಇಲ್ಲ.