

ಗಗನಕ್ಕೇರಿದ ಟೊಮ್ಯಾಟೋ ಬೆಲೆ ಇಳಿಮುಖವಾಗುತ್ತಿದೆ ಎಂದು ಸಮಾಧಾನಪಡುವಷ್ಟರಲ್ಲಿ ಈರುಳ್ಳಿ ಬೆಲೆ ಆಗಸದತ್ತ ಮುಖ ಮಾಡುವ ಮೂಲಕ ಆತಂಕದ ಪರಿಸ್ಥಿತಿ ಸೃಷ್ಟಿಸಿದೆ. ಕಳೆದ ತಿಂಗಳು ಟೊಮ್ಯಾಟೊ ಬೆಲೆ ದಾಖಲೆಯ ಏರಿಕೆಯನ್ನು ಕಂಡಿತ್ತು. ಪ್ರತಿ ಕೆಜಿಗೆ 200-300 ರೂಪಾಯಿ ತಲುಪಿತ್ತು. ಮಾರ್ಚ್ ಮತ್ತು ಎಪ್ರಿಲ್ ತಿಂಗಳುಗಳಲ್ಲಿ ಏಕಾಏಕಿ ಉಷ್ಣಾಂಶ ಹೆಚ್ಚಳದ ಪರಿಣಾಮವಾಗಿ ಸಸಿಗಳಿಗೆ ಹುಳು ಬಾಧೆ ಉಂಟಾಗಿ ಇಳುವರಿ ಹಾಗೂ ಗುಣಮಟ್ಟದಲ್ಲಿ ಕುಸಿತವಾಗಿತ್ತು. ಇದರಿಂದಾಗಿ ಟೊಮ್ಯಾಟೊ ಬೆಲೆ ಗಗನಮುಖಿಯಾಯಿತು.
ಈಗ ಪರಿಸ್ಥಿತಿಯಲ್ಲಿ ಒಂದಿಷ್ಟು ಸುಧಾರಣೆ ಕಂಡುಬಂದಿದ್ದು, ಟೊಮ್ಯಾಟೊ ಬೆಲೆ ಪ್ರತಿ ಕೆಜಿಗೆ 50-100 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ ಎಂದು ಸಮಾಧಾನಪಡುವಷ್ಟರಲ್ಲಿಯೇ ದಿನನಿತ್ಯ ಬಳಕೆಯ ಪ್ರಮುಖ ಆಹಾರ ಪದಾರ್ಥ ಈರುಳ್ಳಿ ಬೆಲೆ ಹೆಚ್ಚಳ ಕಾಣತೊಡಗಿದ್ದು, ಮುಂದಿನ ದಿನಗಳಲ್ಲಿ ಕಣ್ಣೀರು ತರಿಸುವ ಭೀತಿ ತಲೆದೋರಿದೆ. ಪ್ರತಿ ಕೆಜಿಗೆ 20-25 ರೂಪಾಯಿ ದರವಿದ್ದ ಈರುಳ್ಳಿ ಈಗ 30-35 ರೂಪಾಯಿ ತಲುಪಿದೆ. ಆಗಸ್ಟ್ ಅಂತ್ಯದ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನಷ್ಟು ಹೆಚ್ಚಳ ಕಂಡು, ಸೆಪ್ಟೆಂಬರ್ ತಿಂಗಳಲ್ಲಿ 70-80 ರೂಪಾಯಿವರೆಗೆ ತಲುಪಬಹುದು ಎಂದು ಕ್ರಿಸಿಲ್ ಮಾರ್ಕೆಟ್ ಆಂಡ್ ಅನಾಲಿಟಿಕ್ಸ್ ವರದಿ ಅಂದಾಜಿಸಿರುವುದು ಆತಂಕಕಾರಿ ಸಂಗತಿಯಾಗಿದೆ.
ಪ್ರಸ್ತುತ ಮುಂಗಾರು ಮಳೆಯ ಪ್ರಾದೇಶಿಕ ವಿತರಣೆಯಲ್ಲಿನ ಅನಿಶ್ಚಿತತೆಗಳು ಹಾಗೂ ಎಲ್ ನಿನೋ ಪರಿಣಾಮದಿಂದಾಗಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಆಹಾರ ಹಣದುಬ್ಬರ ಇನ್ನಷ್ಟು ಹೆಚ್ಚಾಗುವ ಅಪಾಯಗಳಿವೆ ಎಂದು ಹಣಕಾಸು ತಜ್ಞರು ಅಂದಾಜಿಸಿದ್ದಾರೆ. ದೇಶದ ಅನೇಕ ಪ್ರದೇಶಗಳಲ್ಲಿ ಮಳೆ ಕೊರತೆಯ ಕಾರಣದಿಂದಾಗಿ ಮುಂಗಾರು ಹಂಗಾಮಿನಲ್ಲಿ ಕೃಷಿಕರು ಬಿತ್ತನೆಯನ್ನೇ ಕೈಗೊಂಡಿಲ್ಲದಿರುವುದು ಆಹಾರ ಧಾನ್ಯಗಳ ಬೆಲೆ ಇನ್ನಷ್ಟು ಹೆಚ್ಚಾಗುವ ಆತಂಕಕ್ಕೆ ಕಾರಣಾಗಿದೆ. ಕಳೆದ ಕೆಲ ತಿಂಗಳುಗಳಲ್ಲಿ ಬಹುತೇಕ ಆಹಾರ ಪದಾರ್ಥಗಳ ದರ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತೊಗರಿ ಬೇಳೆ ದರ ಶೇ. 28; ಅಕ್ಕಿ ದರ ಶೇ. 10; ಉದ್ದಿನ ಬೇಳೆ ಮತ್ತು ಗೋಧಿ ಹಿಟ್ಟಿನ ದರ ಶೇ. 8ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವಾಲಯವೇ ಸಂಸತ್ತಿಗೆ ತಿಳಿಸಿದೆ.
ಅಡುಗೆ ತಯಾರಿಸುವಲ್ಲಿ ಈರುಳ್ಳಿಗೆ ಹೋಲಿಸಿದರೆ ಟೊಮ್ಯಾಟೊ ಬಳಕೆ ಪ್ರಮಾಣ ಕಡಿಮೆ ಇರುತ್ತದೆ. ಅಲ್ಲದೆ, ಟೊಮ್ಯಾಟೊಗೆ ಪರ್ಯಾಯಗಳು ಇವೆ. ಆದರೆ, ಬಹುತೇಕ ಖಾದ್ಯಗಳಲ್ಲಿ ಅತ್ಯಗತ್ಯವಾದ ಪದಾರ್ಥ ಈರುಳ್ಳಿ. ಕಳೆದ ಜನವರಿಯಿಂದ ಬೇಳೆಕಾಳುಗಳು, ಧಾನ್ಯಗಳು ಮತ್ತು ಇತರ ತರಕಾರಿದರಗಳು ದುಬಾರಿಯಾಗುತ್ತಲೇ ಸಾಗಿದ್ದರೂ ಈರುಳ್ಳಿ ದರಗಳು ಅಷ್ಟೇನು ಏರಿಕೆ ಕಂಡಿರದ ಕಾರಣ ಜನ ಸ್ವಲ್ಪ ನಿಟ್ಟುಸಿರುವ ಬಿಡುವಂತಾಗಿತ್ತು. ಆದರೆ, ಮುಂಗಾರು ಅವಧಿಯಲ್ಲಿ ಈರುಳ್ಳಿ ಬಿತ್ತನೆ ಪ್ರದೇಶದಲ್ಲಿ ಒಂದಿಷ್ಟು ಕಡಿಮೆಯಾಗಿದೆ. ಒಟ್ಟಾರೆ ಬೆಳೆ ಪ್ರದೇಶ ಸುಮಾರು ಶೇ. 8 ಕಡಿಮೆಯಾಗಿದೆ. ಅಕ್ಟೋಬರ್- ಡಿಸೆಂಬರ್ ಹೊತ್ತಿಗೆ ಹೊಸ ಬೆಳೆ ಮಾರುಕಟ್ಟೆಗೆ ಲಗ್ಗೆ ಇಡುವುದರೊಂದಿಗೆ ಈರುಳ್ಳಿ ಬೆಲೆಗಳು ಸ್ಥಿರಗೊಳ್ಳುವ ನಿರೀಕ್ಷೆ ಇರುವುದು ಒಂದಿಷ್ಟು ಆಶಾದಾಯಕ ಸಂಗತಿಯಾಗಿದೆ.