ಅಕ್ರಮ ನಡೆಯದಿರಲಿ: ನೇಮಕಾತಿ ಪ್ರಕ್ರಿಯೆಗೆ ಮರುಜೀವ

PSI
Published on

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಜ್ಯದ 545 ಪೊಲೀಸ್ ಸಬ್ ಇನ್ಸ್​ಪೆಕ್ಟರ್​ಗಳ ನೇಮಕಾತಿ ಪ್ರಕ್ರಿಯೆಗೆ ಕೊನೆಗೂ ಗ್ರಹಣ ಬಿಟ್ಟಂತಾಗಿದೆ. ಮರುಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ಹೊಸದಾಗಿ ಪರೀಕ್ಷೆ ನಡೆಸಲು ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದು ಮಾಡುವಂತೆ ಹಲವು ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ, ಪಾರದರ್ಶಕವಾಗಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದೆ.

ಪೊಲೀಸ್ ಇಲಾಖೆಯ ನೇಮಕಾತಿ ಪ್ರಕ್ರಿಯೆಯ ಇತಿಹಾಸವನ್ನೊಮ್ಮೆ ಗಮನಿಸಿದರೆ, ಹಿಂದೆ ಕರ್ನಾಟಕ ಈ ವಿಷಯದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿತ್ತು. ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಂದಾಗಿ ಅದು ಸಾಧ್ಯವಾಗಿತ್ತು. ಆದರೆ ಕಳೆದೊಂದು ದಶಕದಿಂದೀಚೆಗೆ ನೇಮಕಾತಿಯಲ್ಲಿ ಅಕ್ರಮ ನುಸುಳಿತು. ಅಕ್ರಮಕ್ಕೆ ಅಂತ್ಯ ಹಾಡುವ ಸಲುವಾಗಿ ಸಂದರ್ಶನ ಪದ್ಧತಿಯನ್ನೇ ಕೈಬಿಟ್ಟು, ಕೇವಲ ಜ್ಯೇಷ್ಠತಾಪಟ್ಟಿ ಆಧರಿಸಿ 545 ಸಬ್ ಇನ್​ಸ್ಪೆಕ್ಟರ್​ಗಳ ನೇಮಕಾತಿ ಮಾಡಲು ಮೊದಲ ಬಾರಿಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

2022ರ ಜ. 19ಕ್ಕೆ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟವಾಗಿತ್ತು. ಪರೀಕ್ಷೆಗೆ ತಯಾರಿ ನಡೆಸದೆ ಇದ್ದವರ ಹೆಸರುಗಳನ್ನು ಆಯ್ಕೆಪಟ್ಟಿಯಲ್ಲಿ ಕಂಡ ಅಭ್ಯರ್ಥಿಗಳು ಅಕ್ರಮ ನಡೆದಿರುವುದನ್ನು ಬಹಿರಂಗಪಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಂದಿನ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಗೆ ದೊಡ್ಡಅಸ್ತ್ರವೇ ಲಭಿಸಿತ್ತು. ಓಎಂಆರ್ ಶೀಟ್ ತಿದ್ದಿರುವ ಬಗ್ಗೆ ಆಯ್ಕೆಯಾದ ಒಬ್ಬ ಅಭ್ಯರ್ಥಿಯೇ ಬಾಯ್ಬಿಟ್ಟಾಗ ದೊಡ್ಡ ಸಾಕ್ಷ್ಯ ಲಭಿಸಿದಂತಾಗಿತ್ತು. ತತ್ಪರಿಣಾಮ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತು. ವಿಧಿ ಇಲ್ಲದೆ ಅಧಿಸೂಚನೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸುವುದಾಗಿ ಸರ್ಕಾರ ಘೋಷಿಸಿತು. ಆದರೆ ಪ್ರಾಮಾಣಿಕ ಅಭ್ಯರ್ಥಿಗಳು ಇದನ್ನು ಒಪ್ಪದೆ, ಹೈಕೋರ್ಟ್ ಮೆಟ್ಟಿಲೇರಿದ್ದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ, ಆಯ್ಕೆಯಾಗಿದ್ದ 52 ಅಭ್ಯರ್ಥಿಗಳನ್ನು ಡಿಬಾರ್ ಮಾಡಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದಲ್ಲಿ ವಿಚಾರಣೆ ಆಯೋಗ ರಚನೆ ಮಾಡಿತು. ಈ ನಡುವೆ, ಮರುಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿ ಆಯ್ಕೆಯಾಗಿರುವವರೂ ಮತ್ತೆ ಪರೀಕ್ಷೆಗೆ ಸಜ್ಜಾಗಬೇಕಿದೆ. ಈ ಪ್ರಕರಣ ನಡೆದ ಬಳಿಕ ರಾಜ್ಯದಲ್ಲಿ ಪೊಲೀಸ್ ಇಲಾಖೆ ಹಲವು ಬಾರಿ ನೇಮಕಾತಿ ಪ್ರಕ್ರಿಯೆ ನಡೆಸಿದೆ. ಯಾವುದರಲ್ಲೂ ಅಕ್ರಮ ವರದಿಯಾಗಿಲ್ಲ. ಅದೇ ರೀತಿಯಲ್ಲಿಯೇ ಪಿಎಸ್​ಐಗಳ ನೇಮಕಾತಿಗೆ ಮರುಪರೀಕ್ಷೆಯನ್ನೂ ನಡೆಸಬೇಕು. ಅಕ್ರಮಗಳು ಪುನರಾವರ್ತನೆಯಾಗದಂತೆ, ಬ್ಲ್ಯೂಟೂತ್ ಮತ್ತಿತರ ತಾಂತ್ರಿಕ ಪರಿಕರಗಳು ಪರೀಕ್ಷೆಯಲ್ಲಿ ಬಳಕೆಯಾಗದಂತೆ ಬಹುಎಚ್ಚರದಿಂದ ಮರುಪರೀಕ್ಷೆ ನಡೆಸುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net