ಸಂಪಾದಕೀಯ | ಘನತೆ ಕಾಪಾಡಿ; ರಾಜ್ಯಗಳ ಹಿತಾಸಕ್ತಿಗೆ ನೀಡಬೇಕಿದೆ ಗಮನ..

Editorial
Published on

ಭಾರತವು ಒಂದು ಗಣರಾಜ್ಯ. ಜನರು ತಮ್ಮ ಪ್ರತಿನಿಧಿಗಳನ್ನು ಚುನಾವಣೆ ಮೂಲ ಆಯ್ಕೆ ಮಾಡುವ ಪ್ರಜಾತಂತ್ರ ವ್ಯವಸ್ಥೆ ಇಲ್ಲಿದೆ. ಕೇಂದ್ರ ಮಟ್ಟದಲ್ಲಿ ಸಂಸತ್ತು ಹಾಗೂ ರಾಜ್ಯ ಮಟ್ಟದಲ್ಲಿ ವಿಧಾನಸಭೆ ರೂಪಿಸಲಾಗಿದೆ. ಸಂಸತ್ತಿನಲ್ಲಿ ಲೋಕಸಭೆಗೆ ಸದಸ್ಯರನ್ನು ಜನರು ನೇರವಾಗಿ ಚುನಾವಣೆಯಲ್ಲಿ ಆಯ್ಕೆ ಮಾಡಿದರೆ, ರಾಜ್ಯಸಭೆಗೆ ಸದಸ್ಯರು ಪರೋಕ್ಷವಾಗಿ ಆಯ್ಕೆಯಾಗುತ್ತಾರೆ. ಲೋಕಸಭೆಯಲ್ಲಿ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷವು ರಾಜ್ಯಗಳ ಹಿತಾಸಕ್ತಿಯನ್ನು ಕಡೆಗಣಿಸುವ ಅಥವಾ ರಾಜ್ಯಗಳ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ, ಎಲ್ಲ ರೀತಿಯ ಜನರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ರಾಜ್ಯಸಭೆಯನ್ನು ಅಸ್ತಿತ್ವಕ್ಕೆ ತರಲಾಗಿದೆ.

ಹೆಸರೇ ಸೂಚಿಸುವಂತೆ ಇದು ರಾಜ್ಯಗಳನ್ನು ಪ್ರತಿನಿಧಿಸುವ ಸಭೆ. ವಿವಿಧ ರಾಜ್ಯಗಳ ವಿಧಾನಸಭೆ ಸದಸ್ಯರು ಮತ ಚಲಾಯಿಸಿ ರಾಜ್ಯಸಭೆಗೆ ಪ್ರತಿನಿಧಿಗಳನ್ನು ಕಳಿಸುತ್ತಾರೆ. ರಾಜ್ಯಗಳಲ್ಲಿನ ಆಡಳಿತಾರೂಢ ಪಕ್ಷ ಮಾತ್ರವಲ್ಲ; ವಿರೋಧ ಪಕ್ಷಗಳು ಕೂಡ ತಮ್ಮ ಶಾಸಕರ ಸಂಖ್ಯೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಅವಕಾಶವಿರುವುದು ವಿಶೇಷ. ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ 245. ಇದರಲ್ಲಿ, 233 ಮಂದಿ ನೇರವಾಗಿ ರಾಜ್ಯಗಳಿಂದ ಆಯ್ಕೆಯಾಗುತ್ತಾರೆ. ಇದಲ್ಲದೆ, ವಿಜ್ಞಾನ, ಸಾಹಿತ್ಯ, ಶಿಕ್ಷಣ, ಕ್ರೀಡೆ, ಸಮಾಜಸೇವೆ ಮುಂತಾದ ಕ್ಷೇತ್ರಗಳ ಅನುಭವಿ ತಜ್ಞರನ್ನು ಗುರುತಿಸಿ ಉಳಿದ 12 ಸ್ಥಾನಗಳಿಗೆ ರಾಷ್ಟ್ರಪತಿಯವರು ನೇರವಾಗಿ ನಾಮಾಂಕಿತ ಮಾಡುವ ವ್ಯವಸ್ಥೆ ಇದೆ. ಪ್ರಸ್ತುತ ರಾಜ್ಯಸಭೆ ಚುನಾವಣೆಯಲ್ಲಿ 15 ರಾಜ್ಯಗಳಿಂದ 57 ಸದಸ್ಯರು ಆಯ್ಕೆಯಾಗಿದ್ದಾರೆ. ಹೆಸರಿಗೆ ತಕ್ಕಹಾಗೆ ಹಿರಿಯರ ಸದನದಲ್ಲಿರುವವರು ಬೌದ್ಧಿಕವಾಗಿಯೂ ಎತ್ತರದಲ್ಲಿರಬೇಕು; ಇಲ್ಲಿ ಅರ್ಥಪೂರ್ಣ, ಗಂಭೀರ ಚರ್ಚೆಗಳು ನಡೆಯಬೇಕು ಎಂಬುದು ಸಹಜ ನಿರೀಕ್ಷೆ. ಆದರೆ ಬದಲಾದ ರಾಜಕೀಯ ವ್ಯಾಕರಣದ ಹಿನ್ನೆಲೆಯಲ್ಲಿ, ಅರ್ಹತೆ ಇಲ್ಲದಿದ್ದರೂ ಹಣಬಲವುಳ್ಳವರು, ಕೈಗಾರಿಕೋದ್ಯಮಿಗಳು, ರಿಯಲ್ ಎಸ್ಟೇಟ್ ಕುಳಗಳು ಪ್ರಭಾವ ಬೀರಿ ಹಿಂಬಾಗಿಲ ಮೂಲಕ ಅಧಿಕಾರ ಪಡೆದುಕೊಳ್ಳಲು ರಾಜ್ಯಸಭೆ ಚುನಾವಣೆಯನ್ನು ಬಳಸಿಕೊಳ್ಳುತ್ತಿರುವುದು ಸಂವಿಧಾನ ನಿರ್ವತೃಗಳ ಆಶಯಕ್ಕೆ ಪೆಟ್ಟು ಕೊಡುವಂತಿದೆ ಎಂಬ ಕಳವಳ ಸಾರ್ವಜನಿಕ ವಲಯದಲ್ಲಿದೆ.

ಜನರಿಂದ ಆಯ್ಕೆಯಾದ ಶಾಸಕರು ಮತಗಳನ್ನು ಚಲಾಯಿಸುವಾಗ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಬೇಕಿದೆ. ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡುವಂತಹ ವ್ಯಕ್ತಿಗಳನ್ನು, ವಿವಿಧ ಕ್ಷೇತ್ರಗಳ ಪರಿಣತರನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಕೆಂಬ ನಿರೀಕ್ಷೆ ಜನರದ್ದಾಗಿದೆ. ಈಗ ಆಯ್ಕೆಯಾಗಿರುವ ನೂತನ ಸದಸ್ಯರು ಇದಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಮೂಲಕ ಸದನ ಗೌರವ, ಗಾಂಭೀರ್ಯವನ್ನು ಎತ್ತಿಹಿಯಬೇಕಿದೆ. ಲೋಕಸಭೆ ಅಂಗೀಕರಿಸಿದ ಯಾವುದೇ ಮಸೂದೆ ರಾಜ್ಯಸಭೆಯಲ್ಲಿ ಚರ್ಚೆಗೊಳಪಟ್ಟ ನಂತರವೇ ಅಂಗೀಕಾರವಾಗುತ್ತದೆ. ರಾಜ್ಯಸಭೆಯಿಂದ ತಿರಸ್ಕೃತಗೊಂಡ ಯಾವುದೇ ಮಸೂದೆಯನ್ನು ಲೋಕಸಭೆಯು ಪುನರ್​ಪರಿಶೀಲನೆಗೆ ಒಳಪಡಿಸಿ ಮತ್ತೆ ಅಂಗೀಕರಿಸಿದರೆ ಮಾತ್ರವೇ ಅದಕ್ಕೆ ಅನುಮೋದನೆ ದೊರೆಯುತ್ತದೆ. ಇದು ರಾಜ್ಯಸಭೆಗೆ ನಮ್ಮ ಸಂವಿಧಾನ ನೀಡಿರುವ ಮಹತ್ವ. ಈ ಮಹತ್ವವನ್ನು ಅರಿತು ರಾಜ್ಯಗಳ ಹಿತಾಸಕ್ತಿ ಕಾಪಾಡಲು ಶ್ರಮಿಸುವ ಮೂಲಕ ಪ್ರಜಾಪ್ರಭುತ್ವದ ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ಬದ್ಧತೆಯನ್ನು ಪ್ರದರ್ಶಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net