ಪರ್ಯಾಯ ಮಾರ್ಗದ ಜಾಣ್ಮೆ: ನಗದು ವರ್ಗಾವಣೆ ಮೂಲಕ ಅನ್ನಭಾಗ್ಯ ಯೋಜನೆ ಜಾರಿ

CM Annabhagya
Published on

ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿಗಳ ಪೈಕಿ ಒಂದಾದ ಅನ್ನ ಭಾಗ್ಯ ಯೋಜನೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಈಗ ಜಾರಿಗೊಳಿಸಿದೆ. ಈ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅಕ್ಕಿಯನ್ನು ಪೂರೈಕೆ ಮಾಡದಿರುವ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ರಾಜ್ಯ ಸರ್ಕಾರವು ಅಕ್ಕಿ ಬದಲು ಫಲಾನುಭವಿಗಳಿಗೆ ನೇರವಾಗಿ ಹಣವನ್ನು ನೀಡುವ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವ ಮೂಲಕ ತಾನು ನೀಡಿದ್ದ ಗ್ಯಾರಂಟಿಯನ್ನು ಜಾರಿಗೊಳಿಸುವಲ್ಲಿ ಜಾಣ್ಮೆಯನ್ನು ಮೆರೆದಿದೆ.

ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಮಾಸಿಕ ತಲಾ 10 ಕೆಜಿ ಅಕ್ಕಿ ನೀಡುವ ಗ್ಯಾರಂಟಿ ಜಾರಿಗೊಳಿಸಲು ರಾಜ್ಯ ಸರ್ಕಾರ ಕಳೆದ ತಿಂಗಳು ನಿರ್ಧಾರ ಕೈಗೊಂಡಿತು. ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ 5 ಕೆಜಿ ಅಕ್ಕಿಯನ್ನು ಈಗಾಗಲೇ ನೀಡಲಾಗುತ್ತಿದೆ. ಇದಕ್ಕೆ ಮತ್ತೆ 5 ಕೆಜಿ ಅಕ್ಕಿಯನ್ನು ಸೇರಿಸಿ ಫಲಾನುಭವಿಗಳಿಗೆ ನೀಡುವುದಕ್ಕಾಗಿ ಹೆಚ್ಚುವರಿ ಅಕ್ಕಿಯನ್ನು ಒದಗಿಸಲು ಕೇಂದ್ರ ಸರ್ಕಾರಕ್ಕೆ ಕೋರಿತ್ತು. ಆದರೆ, ಈಶಾನ್ಯ ರಾಜ್ಯಗಳಿಗೆ ಅಕ್ಕಿ ಒದಗಿಸಬೇಕಾಗಿರುವುದರಿಂದ ಹೆಚ್ಚುವರಿ ಅಕ್ಕಿಯನ್ನು ರಾಜ್ಯಕ್ಕೆ ನೀಡಲು ಕೇಂದ್ರ ನಿರಾಕರಿಸಿತ್ತು. ಈ ಬೆಳವಣಿಗೆಯು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಾಕಷ್ಟು ಜಟಾಪಟಿಗೆ ಕಾರಣವಾಯಿತು. ಅಕ್ಕಿ ಒದಗಿಸದೆ ಕೇಂದ್ರ ಸರ್ಕಾರ ಬಡವರ ವಿರೋಧಿ ನೀತಿ ಅನುಸರಿಸಿದೆ ಎಂದು ಕಾಂಗ್ರೆಸ್ ಆಪಾದಿಸಿದರೆ, ಕೇಂದ್ರ ಸರ್ಕಾರವನ್ನು ಕೇಳಿ ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿತು. ಈ ಹಿನ್ನೆಲೆಯಲ್ಲಿ ಅಕ್ಕಿ ದಾಸ್ತಾನು ಆಗುವವರೆಗೂ 5 ಕೆಜಿ ಅಕ್ಕಿ ಬದಲು ಹಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರತಿ ಕೆಜಿಗೆ 34 ರೂ.ನಂತೆ ಒಬ್ಬರಿಗೆ 170 ರೂಪಾಯಿ ನೀಡಲಾಗುತ್ತಿದೆ.

ಅನ್ನಭಾಗ್ಯ ಯೋಜನೆ ಜಾರಿ ಕುರಿತಂತೆ ಸರ್ಕಾರ ಮಾರ್ಗಸೂಚಿಗಳನ್ನು ಸರ್ಕಾರ ಪ್ರಕಟಿಸಿದೆ. ಜುಲೈ 20ರೊಳಗಾಗಿ ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಿದ ಪಡಿತರ ಚೀಟಿ ಕುಟುಂಬಗಳಿಗೆ ಆಗಸ್ಟ್ ತಿಂಗಳಿನಲ್ಲಿ ದುಡ್ಡು ಜಮಾ ಮಾಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಂತ್ಯೋದಯ ಕಾರ್ಡ್ ಹೊಂದಿರುವ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಕ್ಕೆ ಈ ನಗದು ವರ್ಗಾವಣೆ ಸೌಲಭ್ಯ ಸಿಗುವುದಿಲ್ಲ ಎಂದೂ ಸ್ಪಷ್ಟಪಡಿಸಿರುವುದು ಕೂಡ ಸೂಕ್ತ ಕ್ರಮವೇ ಆಗಿದೆ. ಏಕೆಂದರೆ, ಈಗಾಗಲೇ ಅಂತ್ಯೋದಯ ಕಾರ್ಡ್​ನಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಜನ ಹೊಂದಿರುವ ಕುಟುಂಬಗಳು 30 ಕೆಜಿ ಅಕ್ಕಿ ಪಡೆಯುತ್ತಿವೆ.

ಬಿಪಿಎಲ್ ಕಾರ್ಡ್​ದಾರರಿಗೆ ಅಕ್ಕಿ ಬದಲು ಹಣ ನೀಡಲು ಮುಂದಾಗಿರುವುದಕ್ಕೆ ಪಡಿತರ ವಿತರಕರು ಆಕ್ಷೇಪ ತೆಗೆದಿದ್ದಾರೆ. ಆಹಾರ ಪದಾರ್ಥಗಳ ಬದಲಾಗಿ ಹಣ ನೀಡಿದರೆ ತಮಗೆ ಕಮಿಷನ್ ಕಡಿಮೆಯಾಗಲಿದೆ ಎಂಬ ತಕರಾರು ಅವರದ್ದಾಗಿದೆ. ಆದರೆ, ಈಗ ಹೆಚ್ಚುವರಿಯಾಗಿ ನೀಡಲು ಮುಂದಾಗಿರುವ 5 ಕೆಜಿ ಅಕ್ಕಿಗೆ ಮಾತ್ರ ಹಣ ಸಂದಾಯವಾಗಲಿದ್ದು, ಉಳಿದ ಅಕ್ಕಿಯನ್ನು ಪಡಿತರ ವ್ಯವಸ್ಥೆಯ ಮೂಲಕವೇ ಪೂರೈಸಲಾಗುವುದರಿಂದ ವಿತರಕರ ಕಮಿಷನ್​ನಲ್ಲಿ ಯಾವುದೇ ಬದಲಾವಣೆ ಆಗದು ಎಂಬುದು ವಾಸ್ತವ.

ಇನ್ನು ಅಕ್ಕಿ ಬದಲು ನೇರ ಹಣ ವರ್ಗಾವಣೆ ಕ್ರಮವು ಹಲವು ಅನುಕೂಲಗಳನ್ನು ಹೊಂದಿದೆ. ಪಡಿತರ ವಿತರಕರಿಗೆ ನೀಡುವ ಕಮಿಷನ್, ಸಾಗಣೆ ವೆಚ್ಚ ಮುಂತಾದ ಖರ್ಚುಗಳು ಸರ್ಕಾರಕ್ಕೆ ಉಳಿಯಲಿವೆ. ಅಲ್ಲದೆ, ಪ್ರಾದೇಶಿಕ ಆಹಾರ ವೈವಿಧ್ಯತೆ ಕಾಪಾಡಲು ಇದು ನೆರವಾಗಲಿದೆ. ಅಕ್ಕಿ ಬದಲಾಗಿ ಜೋಳ, ರಾಗಿ ಮುಂತಾದ ತಮಗೆ ಅಗತ್ಯವಿರುವ ಆಹಾರ ಧಾನ್ಯಗಳನ್ನು ಖರೀದಿಸುವ ಅವಕಾಶವು ಫಲಾನುಭವಿಗಳಿಗೆ ಲಭ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net