ಸೇವೆಯೂ ಸುಧಾರಿಸಲಿ; ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಆಯೋಗ..

Editorial
Published on

ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದ್ದು, ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾಗಿದೆ. ವೇತನ ಪರಿಷ್ಕರಣೆಗಾಗಿ ಏಳನೇ ವೇತನ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿದೆ. ದಾವಣಗೆರೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ನೇತೃತ್ವದಲ್ಲಿ ಏಳನೇ ವೇತನ ಆಯೋಗ ರಚನೆಯಾಗುತ್ತದೆ ಎಂದು ಘೋಷಿಸಿದ್ದು ಈ ಕುರಿತು ಅಧಿಕೃತ ಆದೇಶ ಪ್ರಕಟಿಸುವುದು ಮಾತ್ರ ಬಾಕಿ ಇದೆ. ಸಹಜವಾಗಿಯೇ ಈ ಕ್ರಮಕ್ಕೆ ಸರ್ಕಾರಿ ನೌಕರರು ಸಂತಸ ವ್ಯಕ್ತಪಡಿಸಿದ್ದಾರೆ.

ವೇತನ ಪರಿಷ್ಕರಣೆ ಮಾಡುವುದರಿಂದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, 3.5 ಲಕ್ಷದಷ್ಟು ನಿಗಮ, ಮಂಡಳಿ, ಪ್ರಾಧಿಕಾರಗಳ ನೌಕರ ವರ್ಗ ಹಾಗೂ 4.5 ಲಕ್ಷ ನಿವೃತ್ತ ಸರ್ಕಾರಿ ನೌಕರರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಶೇ. 40ರಷ್ಟು ವೇತನ ಹೆಚ್ಚಳವನ್ನು ನೌಕರರು ನಿರೀಕ್ಷಿಸುತ್ತಿದ್ದು, 2023ರ ಏಪ್ರಿಲ್ 1ರಿಂದ ಆರ್ಥಿಕ ಅನುಕೂಲ ಸಿಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆಗಾಗಿ ಪ್ರತಿ 5 ವರ್ಷಗಳಿಗೊಮ್ಮೆ ವೇತನ ಆಯೋಗ ರಚನೆಯನ್ನು ನಿಯಮಾನುಸಾರ ಮಾಡಬೇಕು. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಇದು ಅಪೇಕ್ಷಿತವೂ ಆಗಿರುತ್ತದೆ. ನಿಯಮಾನುಸಾರ 1966 ರಿಂದ 2017ರ ಅವಧಿಯಲ್ಲಿ 11 ವೇತನ ಆಯೋಗಗಳು ರಚನೆಯಾಗಬೇಕಿತ್ತಾದರೂ ಆಗಿದ್ದು ಮಾತ್ರ 6. ಹಿಂದೆಲ್ಲಾ ಐದು ವರ್ಷ ಕಳೆದರೂ ವೇತನ ಆಯೋಗಗಳು ರಚನೆಯಾಗುತ್ತಿರಲಿಲ್ಲ. ಆದರೆ, ಈ ಬಾರಿ 5 ವರ್ಷಗಳ ಒಳಗಾಗಿ ಆಯೋಗ ರಚನೆಯಾಗುತ್ತಿದೆ. 2018ರ ವಿಧಾನಸಭೆ ಚುನಾವಣೆಗೆ ಮುನ್ನ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವೇತನ ಆಯೋಗದ ವರದಿ ಪಡೆದು, ಅನುಷ್ಠಾನದ ಆದೇಶ ಹೊರಡಿಸಿದ್ದರು.

ರಾಜ್ಯದ ಸರ್ಕಾರಿ ನೌಕರರು ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಬೇಡಿಕೆ ಇಟ್ಟಿದ್ದಾರೆ. 2023ರಲ್ಲಿ ರಾಜ್ಯದಲ್ಲಿ ಚುನಾವಣೆ ಇರುವುದರಿಂದ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು ಸರ್ಕಾರಿ ನೌಕರರಿಗೆ ಶುಭಸುದ್ದಿ ನೀಡಬಹುದಾಗಿದೆ. ವಿಧಾನಸಭೆ ಚುನಾವಣೆ ನೀತಿಸಂಹಿತೆ ಜಾರಿಗೂ ಮುನ್ನವೇ ಆಯೋಗದಿಂದ ಮಧ್ಯಂತರ ವರದಿ ಪಡೆದು ಫೆಬ್ರವರಿ ತಿಂಗಳಲ್ಲಿ ಮಂಡನೆಯಾಗಲಿರುವ ಬಜೆಟ್​ನಲ್ಲೆ ವೇತನ ಪರಿಷ್ಕರಣೆ ತೀರ್ಮಾನ ಪ್ರಕಟಿಸುವ ಸಾಧ್ಯತೆಯೂ ಇದೆ. ಬೆಲೆ ಏರಿಕೆಯೊಂದಿಗೆ ಜೀವನ ನಿರ್ವಹಣೆಗಾಗಿ ವೇತನ ಏರಿಕೆ ಪ್ರಕ್ರಿಯೆ ಸಹಜವೇ ಎನ್ನಬಹುದು. ತಾವು ತೆಗೆದುಕೊಳ್ಳುವ ವೇತನಕ್ಕೆ ನ್ಯಾಯ ನೀಡುವ ರೀತಿಯಲ್ಲಿ ಸರ್ಕಾರಿ ನೌಕರರು ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಬೇಕೆಂಬುದು ಜನರ ನಿರೀಕ್ಷೆ. ನೌಕರಶಾಹಿಯಲ್ಲಿ ದಕ್ಷರು, ಪ್ರಾಮಾಣಿಕರು ಸಾಕಷ್ಟಿದ್ದರೂ ಒಟ್ಟಾರೆಯಾಗಿ ಸರ್ಕಾರಿ ವ್ಯವಸ್ಥೆ ಎಂದರೆ, ಭ್ರಷ್ಟಾಚಾರ, ವಿಳಂಬ ಎಂಬ ಭಾವನೆಯಿದೆ. ಈ ಜನಭಾವನೆಯನ್ನು ಬದಲಿಸಬೇಕಿದೆ. ನಾಗರಿಕರ ತೆರಿಗೆ ಹಣದಿಂದಲೇ ಸಂಬಳ ಪಡೆಯುವ ನೌಕರರು ಕಾರ್ಯನಿರ್ವಹಣೆಯಲ್ಲಿ ದಕ್ಷತೆ, ಪ್ರಾಮಾಣಿಕತೆ, ಸೇವಾ ಮನೋಭಾವ ತೋರುವುದು ಅವರ ಕರ್ತವ್ಯ. ಈಗ ತಂತ್ರಜ್ಞಾನ ಮುಂದುವರಿದಿರುವುದರಿಂದ, ಇದರ ನೆರವಿನಿಂದ ಪಾರದರ್ಶಕ ಮತ್ತು ಸುಗಮ ಆಡಳಿತ ನೀಡಲು ನೌಕರರು ಕಟಿಬದ್ಧರಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net