ಚಿಕ್ಕಬಳ್ಳಾಪುರ: ಪೊಲೀಸೊಬ್ಬರ ಮನೆ ಮೇಲೆಯೇ ಕಳ್ಳರು ದಾಳಿ ಮಾಡಿದ್ದು, ಅಡ್ಡ ಬಂದ ಎಎಸ್ಐ ಹಾಗೂ ಅವರ ಪುತ್ರನತ್ತ ಶೂಟ್ ಮಾಡಿದ್ದು, ಎಎಸ್ಐ ಪುತ್ರ ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕು ಪೇರೇಸಂದ್ರ ಗ್ರಾಮದಲ್ಲಿ ಎಎಸ್ಐ ನಾರಾಯಣಸ್ವಾಮಿ ಮನೆ ಮೇಲೆ ದಾಳಿ ನಡೆದಿದೆ. ಇವರು ಬಾಗೇಪಲ್ಲಿ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮನೆಗೆ ನುಗ್ಗಿದ್ದ ಕಳ್ಳರು, ಮನೆಯಲ್ಲಿದ್ದ ಎಎಸ್ಐ ಪತ್ನಿ ಹಾಗೂ ಸೊಸೆಗೆ ಬೆದರಿಸಿ ಮಾಂಗಲ್ಯ ಸರ ದೋಚಿದ್ದಾರೆ. ಅಲ್ಲದೆ ನಗದು-ಚಿನ್ನಾಭರಣ ಸುಲಿಗೆ ಮಾಡಿಕೊಂಡು ಪರಾರಿಯಾಗಲು ಮುಂದಾಗಿದ್ದರು.
ಅದೇ ಸಮಯಕ್ಕೆ ಹೊರಗಡೆಯಿಂದ ಎಎಸ್ಐ ಹಾಗೂ ಪುತ್ರ ಮನೆಗೆ ಬಂದಿದ್ದು, ಕಳ್ಳರನ್ನು ತಡೆದು ಹಿಡಿಯಲು ಯತ್ನಿಸಿದ್ದರು. ಆಗ ಇವರತ್ತ ಕಳ್ಳರು ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ನಾರಾಯಣಸ್ವಾಮಿ ಅವರ ಪುತ್ರ ಶರತ್ಗೆ ಗುಂಡೇಟು ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೇರೇಸಂದ್ರ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಮಗ ಹೃದಯಾಘಾತಕ್ಕೀಡಾಗಿ ಸಾವು!