ಸೇವೆ ಹೆಸರಲ್ಲಿ ಸುಲಿಗೆ ಸಲ್ಲ: ಟ್ಯಾಕ್ಸಿ ಸೇವೆ ಒದಗಿಸುವ ಸಂಸ್ಥೆಗಳ ಅಕ್ರಮ ವ್ಯವಹಾರ

Editorial
Published on

ಪ್ರಯಾಣಿಕರಿಗೆ ಸಾರ್ವಜನಿಕ ಸಾರಿಗೆ ಸೇವೆ ಒದಗಿಸುವ ಹೆಸರಿನಲ್ಲಿ ಆಪ್ ಆಧಾರಿತ ಟ್ಯಾಕ್ಸಿಗಳ ಕಳ್ಳಾಟಕ್ಕೆ ಕಡಿವಾಣ ಹಾಕಲು ಕರ್ನಾಟಕ ಸಾರಿಗೆ ಇಲಾಖೆ ಕೊನೆಗೂ ಮುಂದಾಗಿದೆ. ಲೈಸನ್ಸ್ ಅವಧಿ ಮುಗಿದ ನಂತರವೂ ಕಾನೂನುಬಾಹಿರವಾಗಿ ಈ ಸಂಸ್ಥೆಗಳು ವಹಿವಾಟು ಮುಂದುವರಿಸಿದ್ದರೂ ಸಂಬಂಧಪಟ್ಟವರು ಯಾಕೆ ಮೌನ ವಹಿಸಿದ್ದರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಾರಿಗೆ ಇಲಾಖೆ ಈಗ ಕ್ರಮ ಕೈಗೊಂಡಿರುವುದು ಕೂಡ ಹಲವಾರು ಗ್ರಾಹಕರು ದೂರು ನೀಡಿದ ನಂತರವೇ ಆಗಿದೆ. ಓಲಾ, ಉಬರ್ ಹಾಗೂ ರ್ಯಾಪಿಡೊ ಸಂಸ್ಥೆಗಳ ಆಟೋರಿಕ್ಷಾ ಸೇವೆಗಳು ಕಾನೂನುಬಾಹಿರ ಎಂದು ಈಗ ಸಾರಿಗೆ ಇಲಾಖೆ ಘೋಷಿರುವ ಹಿನ್ನೆಲೆಯಲ್ಲಿ ಈ ಸೇವೆಗಳು ಮೂರು ದಿನಗಳಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಆಟೋ ರಿಕ್ಷಾ ಸೇವೆಯ ಕನಿಷ್ಠ ದರವನ್ನು ಮೊದಲ 2 ಕಿ.ಮೀ.ವರೆಗೆ 30 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ನಂತರದ ಪ್ರತಿ 1 ಕಿ.ಮೀ.ಗೆ 15 ರೂಪಾಯಿ ದರ ಪಡೆಯಬೇಕಾಗುತ್ತದೆ. ಆದರೆ, ಓಲಾ ಮತ್ತು ಉಬರ್ ಸಂಸ್ಥೆಗಳು 2 ಕಿ.ಮೀ.ಗಿಂತಲೂ ಕಡಿಮೆ ದೂರ ಪ್ರಯಾಣಿಸಿದರೂ 100 ರೂಪಾಯಿ ಶುಲ್ಕ ಪಡೆದುಕೊಳ್ಳುತ್ತಿವೆ ಎಂದು ಅನೇಕ ಗ್ರಾಹಕರು ಸಾರಿಗೆ ಇಲಾಖೆಗೆ ದೂರು ನೀಡುತ್ತ ಬಂದಿದ್ದರು. ಅಚ್ಚರಿಯ ಸಂಗತಿ ಎಂದರೆ ಓಲಾ, ಉಬರ್​ನಂತಹ ಸಂಸ್ಥೆಗಳಿಗೆ ಆಟೋ ರಿಕ್ಷಾ ಸೇವೆ ಒದಗಿಸಲು ಕಾನೂನುಬದ್ಧ ಅನುಮತಿಯಿಲ್ಲ. ಏಕೆಂದರೆ, ಕರ್ನಾಟಕ ಆನ್ ಡಿಮಾಂಡ್ ಟ್ರಾನ್ಸ್​ಪೋರ್ಟೆಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ನಿಯಮ 2016ರ ಪ್ರಕಾರವಾಗಿ ಈ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದ್ದು, ಇದು ಟ್ಯಾಕ್ಸಿ ಸೇವೆಗಳಿಗೆ ಮಾತ್ರವೇ ಅನ್ವಯವಾಗುತ್ತದೆ. ಅನುಮತಿ ಇಲ್ಲದಿದ್ದರೂ ಆಟೋ ರಿಕ್ಷಾ ಸೇವೆಗಳಿಗೆ ಗ್ರಾಹಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುವ ಈ ಸಂಸ್ಥೆಗಳು, ರಿಕ್ಷಾ ಚಾಲಕರಿಗೆ ಮಾತ್ರ ಕಡಿಮೆ ಬಾಡಿಗೆ ದರ ನೀಡುತ್ತ ಬಂದಿರುವುದು ಕೂಡ ಗಮನಕ್ಕೆ ಬಂದಿದೆ.

ಇದಲ್ಲದೆ, ಆಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವುದಕ್ಕಾಗಿ 2017ರಲ್ಲಿ ಪಡೆದಿದ್ದ ಅಗ್ರಿಗೇಟರ್ ಲೈಸೆನ್ಸ್ ಅವಧಿ ಕೂಡ 2021ರಲ್ಲೇ ಮುಗಿದಿದ್ದು, ಇದರ ನವೀಕರಣ ಕೂಡ ಆಗಿಲ್ಲ. ಸಾರಿಗೆ ಇಲಾಖೆಗೆ ಮಾಹಿತಿ ಕೊಡದೆ ಎರಡೂ ಸಂಸ್ಥೆಗಳ ಕಚೇರಿಗಳ ವಿಳಾಸವನ್ನೂ ಬದಲಾಯಿಸಲಾಗಿದೆ ಎಂದು ಹೇಳಲಾಗಿದೆ. ಇಷ್ಟೆಲ್ಲ ಕಾನೂನುಬಾಹಿರ ಚಟುವಟಿಕೆಗಳನ್ನು ಸಾರ್ವಜನಿಕ ಸೇವೆಯ ಹೆಸರಿನಲ್ಲಿ ರಾಜಾರೋಷವಾಗಿ ನಡೆಸುತ್ತಿದ್ದರೂ ಸಾರಿಗೆ ಇಲಾಖೆ ಅಧಿಕಾರಿಗಳು ತೋರಿಕೆಗಾಗಿ ಮಾತ್ರ ಒಂದಿಷ್ಟು ದಾಳಿ ನಡೆಸಿ, ಶೋಕಾಸ್ ನೋಟಿಸ್ ನೀಡಿದ್ದಾರೆ. ಈ ಸಂಸ್ಥೆಗಳು ಟ್ಯಾಕ್ಸಿ ಚಾಲಕರ ಜೊತೆ ಆದಾಯವನ್ನು ಹಂಚಿಕೊಳ್ಳುವ ಕುರಿತಂತೆ ತಕರಾರು ವ್ಯಕ್ತಪಡಿಸಿ ಭಾರತೀಯ ಸ್ಪರ್ಧಾ ಆಯೋಗ ಕೂಡ ಕಳೆದ ತಿಂಗಳು ಎಚ್ಚರಿಕೆ ನೋಟಿಸ್ ನೀಡಿದೆ. ಟ್ಯಾಕ್ಸಿ ಚಾಲಕರೊಂದಿಗೆ ಆದಾಯ ಹಂಚಿಕೊಳ್ಳುವ ನಿಟ್ಟಿನಲ್ಲಿ ಸ್ಪಷ್ಟ ಹಾಗೂ ಪಾರದರ್ಶಕ ನೀತಿ ರೂಪಿಸಬೇಕೆಂದು ಆದೇಶಿಸಿದೆ. ತಂತ್ರಜ್ಞಾನ ಅವಲಂಬಿತ ಸೇವೆಗಳು ಈ ದಿನಮಾನದಲ್ಲಿ ಹೆಚ್ಚು ಆದ್ಯತೆ ಪಡೆಯುತ್ತಿವೆ. ಆದರೆ ಈ ಹೆಸರಿನಲ್ಲಿ ಗ್ರಾಹಕರಿಗೆ ಅನಗತ್ಯ ಹೊರೆಯಾಗದಂತೆ ಸಂಬಂಧಿಸಿದ ಸರ್ಕಾರಿ ಇಲಾಖೆಗಳು ಸಹ ನಿಗಾ ಇಡಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net