ಶೀಘ್ರ ಸ್ಪಂದನೆ ಅವಶ್ಯ: ಅಕಾಲಿಕ ಮಳೆಯಿಂದ ವ್ಯಾಪಕ ಹಾನಿ

Rain
Published on

ಈ ವರ್ಷ ರಾಜ್ಯದಲ್ಲಿ ಮುಂಗಾರು ಮಳೆ ವಿಫಲವಾಗಿದ್ದರಿಂದ, ರೈತರು ಹಾನಿ ಅನುಭವಿಸಿದರು. ಮಳೆಯ ಅಭಾವದಿಂದ ಕುಡಿಯುವ ನೀರಿಗೂ ಎಷ್ಟೋ ಕಡೆ ಪರದಾಡುವಂತಾಗಿದೆ. ಆದರೆ, ವಾಯುಭಾರ ಕುಸಿತದ ಪರಿಣಾಮ ಕಳೆದ ಎರಡು-ಮೂರು ದಿನಗಳಿಂದ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಈ ಅಕಾಲಿಕ ಮಳೆಯಿಂದ ಕೃಷಿಗೆ ಪ್ರಯೋಜನವಿಲ್ಲ. ಕಾರಣ, ಹಿಂಗಾರು ಬೆಳೆ ಬಿತ್ತನೆಯ ಅವಧಿ ಮುಗಿದುಹೋಗಿದೆ. ಇದ್ದ ಬೆಳೆಗಳು ಕೂಡ ಈ ಮಳೆಯಿಂದ ಹಾನಿಗೊಳಗಾಗಿವೆ.

ಹಿಂಗಾರಿನ ಬೆಳೆಗಳಾದರೂ ಕೈಗೆ ಸಿಗುತ್ತವೆ ಎಂಬ ಆಶಯದಿಂದ ರೈತರು ಹೊಸ ಬೆಳೆಗಳನ್ನು ಬೆಳೆದು, ಫಸಲಿನ ನಿರೀಕ್ಷೆಯಲ್ಲಿದ್ದರು. ವರುಣ ಆರ್ಭಟದಿಂದ ರೈತರ ಸಂಕಷ್ಟ ಮತ್ತಷ್ಟು ಹೆಚ್ಚಿರುವುದಂತೂ ನಿಜ. ಪ್ರಕೃತಿಯ ಮುನಿಸಿಗೂ, ಮಾರುಕಟ್ಟೆಯ ಏರಿಳಿತಗಳಿಗೂ ರೈತನೇ ಮೊದಲ ಬಲಿಪಶು. ಹವಾಮಾನ ಇಲಾಖೆ ಇನ್ನೂ ಕೆಲವು ದಿನ ಮಳೆ ಮುಂದುವರಿಯುವ ಸೂಚನೆ ಕೊಟ್ಟಿರುವುದರಿಂದ ರೈತರು ಚಿಂತಾಕ್ರಾಂತರಾಗಿರುವುದಂತೂ ಹೌದು. ಸಾಂಪ್ರದಾಯಿಕ ಬೆಳೆಗಳು, ವಾಣಿಜ್ಯ ಬೆಳೆಗಳು, ತೋಟಗಾರಿಕೆ ಬೆಳೆಗಳು ಹೀಗೆ ಎಲ್ಲವೂ ಮಳೆಯ ಅವಾಂತರಕ್ಕೆ ಬಲಿಯಾಗುತ್ತಿವೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೃಷಿಯನ್ನೇ ನೆಚ್ಚಿಕೊಂಡವರ ಬದುಕು ಅಕಾಲಿಕ ಮಳೆಯಿಂದ ಅತಂತ್ರವಾಗಿದೆ.

ಅಲ್ಲದೆ, ಈ ಅಕಾಲಿಕ ಮಳೆ ನಗರಪ್ರದೇಶಗಳಲ್ಲಿ ಹೆಚ್ಚು ಸುರಿದಿದ್ದು, ಹಲವು ಬಗೆಯ ಅವಾಂತರಗಳು ಸೃಷ್ಟಿಯಾಗಿವೆ. ತಗ್ಗು ಪ್ರದೇಶಗಳು ಜಲಾವೃತವಾದರೆ, ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯಿತು. ಭಾರಿ ಮಳೆಯನ್ನು ಎದುರಿಸಲು ನಮ್ಮ ನಗರಗಳು ಸಿದ್ಧತೆ ಮಾಡಿಕೊಂಡಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ.

ಬೆಂಗಳೂರಿನಲ್ಲಿ ಮಳೆಹಾನಿಯಿಂದ ಉಂಟಾದ ಸ್ಥಿತಿಯನ್ನು ಪರಿಶೀಲಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ಮಧ್ಯರಾತ್ರಿ ಹಲವು ಪ್ರದೇಶಗಳಿಗೆ ಭೇಟಿ ನೀಡಿದರು. ಆದರೆ, ಅವಘಡಗಳು ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವುದರಿಂದ ಏನು ಪ್ರಯೋಜನ? ಬೆಂಗಳೂರು ಇರಬಹುದು ಅಥವಾ ಇತರ ನಗರಗಳಲ್ಲಿಯೇ ಆಗಿರಬಹುದು; ಅಲ್ಲಿನ ಸ್ಥಳೀಯಾಡಳಿತಗಳು ಈ ನಿಟ್ಟಿನಲ್ಲಿ ಮೊದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

ಚಂಡಮಾರುತದ ಪರಿಣಾಮ ಭಾರಿ ಮಳೆ ಸುರಿಯುವಂಥ ಸಂದರ್ಭಗಳಲ್ಲಿ ಕೈಗೊಳ್ಳುವ ಸುರಕ್ಷಾ ಕ್ರಮಗಳು ಜನರ ಜೀವ ಮತ್ತು ಆಸ್ತಿಪಾಸ್ತಿಯನ್ನು ರಕ್ಷಿಸುತ್ತವೆ. ಅಕಾಲಿಕ ಮಳೆಯ ಮುನ್ಸೂಚನೆ ಬಂದಾಗಲೂ ಇಂಥ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಅಲ್ಲದೆ, ಶಾಶ್ವತ ಪರಿಹಾರ ಕ್ರಮಗಳತ್ತ ಸ್ಥಳೀಯ ಆಡಳಿತಗಳು ಗಮನವಹಿಸಬೇಕು. ಮಳೆಸಂಬಂಧಿ ಅವಾಂತರ ಅಥವಾ ಇತರ ವಿಕೋಪಗಳು ಸಂಭವಿಸಿದಾಗ ಶೀಘ್ರ ಸ್ಪಂದನೆಯೂ ಅಷ್ಟೇ ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net