ತ್ವರಿತ ನ್ಯಾಯದಾನದ ಪ್ರತಿಪಾದಕ: ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಇಂದು ನಿವೃತ್ತಿ

Editorial
Published on

‘ಗೆದ್ದವ ಸೋತ; ಸೋತವ ಸತ್ತ’ ಎಂಬ ಮಾತು ನ್ಯಾಯಾಲಯದ ಕಟೆಕಟೆ ಏರಿದವರ ವಿಷಯದಲ್ಲಿ ಚಾಲ್ತಿಯಲ್ಲಿದೆ. ನ್ಯಾಯದಾನದಲ್ಲಾಗುವ ತೀವ್ರ ವಿಳಂಬದ ಪರಿಣಾಮವಾಗಿ ನ್ಯಾಯಾಲಯದಲ್ಲಿ ಸೋತವರ ಜತೆಗೆ ಗೆದ್ದವರೂ ಸಂಕಷ್ಟ ಅನುಭವಿಸುತ್ತಾರೆ ಎಂಬುದನ್ನು ಸೂಚಿಸುವ ಈ ಮಾತು ವಾಸ್ತವದ ಪ್ರತೀಕವೂ ಹೌದು! ಸ್ವತಃ ವಕೀಲರಾಗಿ ಸಾಕಷ್ಟು ವರ್ಷಗಳ ಸೇವೆ ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ, ನಂತರ ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿ ಉನ್ನತ ಹುದ್ದೆ ಅಲಂಕರಿಸಿದ ನ್ಯಾ. ಉಮೇಶ ಉದಯ ಲಲಿತ್ ಅವರೀಗ ನಿವೃತ್ತಿಯಾಗಲಿದ್ದಾರೆ. ನ್ಯಾಯಾಂಗದ ಅತ್ಯುನ್ನತ ಹುದ್ದೆಯಲ್ಲಿ ಅಲ್ಪಕಾಲವೇ ಇದ್ದರೂ ನ್ಯಾಯದಾನದಲ್ಲಾಗುವ ವಿಳಂಬಗತಿಯನ್ನು ತಪ್ಪಿಸಲು ದೀರ್ಘಕಾಲಿನ ಪರಿಣಾಮಗಳುಳ್ಳ ಮಹತ್ವದ ಕ್ರಮಗಳನ್ನು ಕೈಗೊಂಡು ನ್ಯಾಯಾಂಗ ಕ್ರಿಯಾಶೀಲತೆ ಮೆರೆಯುವ ಮೂಲಕ ದಿಟ್ಟ ವ್ಯಕ್ತಿಯಾಗಿ ಕಂಗೊಳಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಲೇ ಅವರು, ಕನಿಷ್ಠ ಪಕ್ಷ ಒಂದು ಸಂವಿಧಾನ ಪೀಠವಾದರೂ ವರ್ಷ ಪೂರ್ತಿ ಕಾರ್ಯನಿರ್ವಹಿಸುವುದು ಎಂದು ಘೋಷಿಸಿದ್ದರು. ಪ್ರಕರಣಗಳ ಪಟ್ಟಿಯಲ್ಲಿ ಸ್ಪಷ್ಟತೆ ಹಾಗೂ ಪಾರದರ್ಶಕತೆ ತರುವುದಾಗಿಯೂ ವಾಗ್ದಾನ ಮಾಡಿದ್ದರು. 2017ರಲ್ಲಿ ಸುಪ್ರೀಂ ಕೋರ್ಟ್ ಮುಂದೆ ಇದ್ದ ಪ್ರಕರಣಗಳ ಸಂಖ್ಯೆ 55 ಸಾವಿರದಿಂದ 71 ಸಾವಿರಕ್ಕೆ ಏರಿತ್ತು. 2019ರ ಆಗಸ್ಟ್​ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 34ಕ್ಕೆ ಏರಿಸಿದ್ದರೂ ಬಾಕಿ ಪ್ರಕರಣಗಳ ಸಂಖ್ಯೆ ನಿಧಾನಗತಿಯಲ್ಲಿ ಹೆಚ್ಚುತ್ತಲೇ ಸಾಗಿತ್ತು. ಈ ಹಿಂದೆ ನಿವೃತ್ತರಾದ ಭಾರತದ ಮುಖ್ಯನ್ಯಾಯಮೂರ್ತಿ ಎನ್.ವಿ. ರಮಣ ಅವರು ತಮ್ಮ ಕೆಲಸದ ಕೊನೆಯ ದಿನದಂದು, ಎಲ್ಲ ಬಾಕಿ ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಾಗದೇ ಇರುವುದಕ್ಕಾಗಿ ಕ್ಷಮೆಯನ್ನೂ ಕೇಳಿದ್ದರು.

ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಯ.ಯು. ಲಲಿತ್ ಅವರ ಅಧಿಕಾರಾವಧಿಯು ಕೇವಲ 74 ದಿನಗಳಾಗಿದ್ದರೂ ಅಲ್ಪ ಸಮಯದಲ್ಲೇ ದೀರ್ಘಕಾಲ ಪರಿಣಾಮ ಬೀರುವಂತೆ ಕಾರ್ಯನಿರ್ವಹಿಸಿದ್ದಾರೆ. ಈ ಮಹತ್ವದ ಸ್ಥಾನದಲ್ಲಿ ಆಗಸ್ಟ್ 27ರಂದು ಅವರು ಅಧಿಕಾರ ವಹಿಸಿಕೊಂಡ ಒಂದು ತಿಂಗಳೊಳಗೆ ಐದು ಸಂವಿಧಾನ ಪೀಠಗಳನ್ನು ರಚಿಸಿದರು. ಕೋರ್ಟ್ ಕಲಾಪಗಳಲ್ಲಿ ವ್ಯಾಪಕವಾದ ಆಡಳಿತಾತ್ಮಕ ಬದಲಾವಣೆಗಳನ್ನು ಅವರು ಕೈಗೊಂಡರು. ಪ್ರಕರಣಗಳ ಪಟ್ಟಿ ಮಾಡುವಲ್ಲಿ ತ್ವರಿತಗತಿ ಹಾಗೂ ಪಾರದರ್ಶಕತೆಯನ್ನು ತಂದರು. ಸೆಪ್ಟೆಂಬರ್​ನಲ್ಲಿ ಸುಪ್ರೀಂ ಕೋರ್ಟ್ ತನ್ನ ನ್ಯಾಯಾಂಗದ ಸಮಯವನ್ನು ದೀರ್ಘ ಕಾಲ ಬಾಕಿ ಇರುವ ಸಾಮಾನ್ಯ ಪ್ರಕರಣಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ನಡುವೆ ವಿಭಜಿಸುವಂತೆ ಮಾಡಿದರು. ಪ್ರತಿ ಪೀಠದ ಮುಂದೆ ಪಟ್ಟಿ ಮಾಡಲಾದ ಸುಮಾರು 60 ರಿಂದ 70 ಪ್ರಕರಣಗಳು ಬರುವಂತಾಯಿತು.

ಸುಪ್ರೀಂಕೋರ್ಟ್​ನ ಎಲ್ಲ 15 ಪೀಠಗಳು ಪ್ರಕರಣಗಳ ವಿಚಾರಣೆಯನ್ನು ನಿರಂತರವಾಗಿ ನಡೆಸುವಂತೆ ನೋಡಿಕೊಂಡಿರುವುದು ಕೂಡ ನ್ಯಾ. ಲಲಿತ್ ಅವರ ಕಾರ್ಯವೈಖರಿಯ ವೈಶಿಷ್ಟ್ಯವಾಗಿದೆ. ಹೀಗಾಗಿ, ಅವರ ಅಧಿಕಾರವಧಿಯಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿ ಸಾಗಿದ್ದನ್ನು ಅಂಕಿ-ಅಂಶಗಳು ತೋರಿಸಿಕೊಡುತ್ತವೆ. 2022ರ ಸೆಪ್ಟೆಂಬರ್ 1 ರಂದು 70,310 ಪ್ರಕರಣಗಳಿದ್ದರೆ, ಅಕ್ಟೋಬರ್ 1ರಂದು ಈ ಸಂಖ್ಯೆ 69,461ಕ್ಕೆ ಇಳಿಯಿತು. ಇದೇ ಅವಧಿಯಲ್ಲಿ ಸಂವಿಧಾನ ಪೀಠದಲ್ಲಿನ ಪ್ರಕರಣಗಳ ಸಂಖ್ಯೆಯೂ 493ರಿಂದ 488 ಕ್ಕೆ ಕುಗ್ಗಿತು. ಸಂವಿಧಾನ ಪೀಠದ ವಿಚಾರಣೆಗಳ ನೇರ ಪ್ರಸಾರ ಮಾಡುವ ವಿಶಿಷ್ಟ ಪರಂಪರೆಗೂ ನ್ಯಾ.ಲಲಿತ್ ನಾಂದಿ ಹಾಡಿದರು. 74 ದಿನಗಳ ಕಿರು ಕಾಲಾವಕಾಶದಲ್ಲೇ ನ್ಯಾ. ಲಲಿತ್ ತ್ವರಿತ ನ್ಯಾಯದಾನದ ಪರವಾಗಿ ಕಾರ್ಯನಿರ್ವಹಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net