ಸಂಪಾದಕೀಯ | ವಾಗ್ದಾನ ಈಡೇರಿಸುವತ್ತ..: ದಾಖಲೆಯ 14ನೇ ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ

Siddaramaiah (5)
Published on

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಕಾಂಗ್ರೆಸ್ ಸರ್ಕಾರದ ಮುಂಗಡಪತ್ರವನ್ನು ಶುಕ್ರವಾರ ಮಂಡಿಸಿದರು. ಆರ್ಥಿಕ ವರ್ಷದ ಲೆಕ್ಕಾಚಾರದಲ್ಲಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡನೆ ಮಾಡಿದ್ದರು. ಆದರೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಹೊಸದಾಗಿ ಮುಂಗಡಪತ್ರವನ್ನು ಮಂಡನೆ ಮಾಡುವ ಸಂಪ್ರದಾಯ ಚಾಲ್ತಿಯಲ್ಲಿದೆ. ಸಿದ್ದರಾಮಯ್ಯ ಅವರು 14ನೇ ಸಲ ಬಜೆಟ್ ನೀಡಿರುವುದು ರಾಜ್ಯದಲ್ಲಿ ದಾಖಲೆ.

ಚುನಾವಣಾಪೂರ್ವದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳ ಭರವಸೆ ನೀಡಿತ್ತು. ನಂತರ ಪ್ರಣಾಳಿಕೆಯಲ್ಲಿಯೂ ಇದನ್ನು ಪುನರುಚ್ಚರಿಸಿತು. ಅದರಂತೆ, ಆರಿಸಿ ಬಂದ ನಂತರ ಮೊದಲ ಸಂಪುಟ ಸಭೆಯಲ್ಲಿಯೇ ಈ ಐದೂ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡುವ ಮೂಲಕ ತನ್ನ ಬದ್ಧತೆಯನ್ನು ಸಾಬೀತುಪಡಿಸಿತು. ಈ ಎಲ್ಲ ಯೋಜನೆಗಳು ಸೇರಿ ವಾರ್ಷಿಕ ಸುಮಾರು 50 ಸಾವಿರ ಕೋಟಿ ರೂ. ಬೇಕಾಗುತ್ತದೆನ್ನುವ ಅಂದಾಜಿನಲ್ಲಿ, ಮೂರು ಲಕ್ಷ ಕೋಟಿ ರೂ. ಬಜೆಟ್ ಗಾತ್ರದ ಕರ್ನಾಟಕದಂಥ ರಾಜ್ಯದಲ್ಲಿ (ಈ ಸಲದ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂ.) ಇಷ್ಟು ಬೃಹತ್ ಹಣಕಾಸು ಸಂಪನ್ಮೂಲ ಸಂಗ್ರಹ ಹೇಗೆ ಎನ್ನುವ ಪ್ರಶ್ನೆ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಸಹಜವಾಗಿಯೇ ಉದ್ಭವಿಸಿತ್ತು.

ಹಣಕಾಸು ವಿಚಾರದಲ್ಲಿ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರಿಗೆ ಇದು ಗೊತ್ತಿರದ ಸಂಗತಿಯೇನಲ್ಲ. ಹೀಗಾಗಿಯೇ ಅವರು ಬಜೆಟ್​ನಲ್ಲಿ ಈ ನಿಟ್ಟಿನಲ್ಲಿ ಗಮನಹರಿಸಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಬಂದ ನಂತರದಲ್ಲಿ, ಹೊಸದಾಗಿ ತೆರಿಗೆ ವಿಧಿಸುವ ಅವಕಾಶಗಳು ತೀರಾ ಸೀಮಿತವಾಗಿವೆ. ಹೀಗಾಗಿ ಸಂಪನ್ಮೂಲ ಕ್ರೋಡೀಕರಣಕ್ಕೆ ಪರ್ಯಾಯ ಹಾದಿ ಹುಡುಕುವುದು ಅನಿವಾರ್ಯವಾಗಿದೆ. ತೆರಿಗೆ ತಳಹದಿಯನ್ನು ವಿಸ್ತರಿಸುವ ಮೂಲಕ ಹೆಚ್ಚುವರಿ ಹಣಕಾಸು ಸಂಗ್ರಹಕ್ಕೆ ಸಿದ್ದರಾಮಯ್ಯ ಯೋಜಿಸಿದ್ದಾರೆ. ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರದಲ್ಲಿ ಹೆಚ್ಚಳವನ್ನು ಬಜೆಟ್​ನಲ್ಲಿ ಪ್ರಸ್ತಾಪಿಸಿದ್ದಾರೆ. ಉಳಿದಂತೆ, ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮುಂತಾದವಕ್ಕೆ ಹೆಚ್ಚುವರಿ ಆದಾಯ ಸಂಗ್ರಹ ಗುರಿ ನೀಡಲಾಗಿದೆ. ಸರ್ಕಾರ ನಿರೀಕ್ಷಿಸಿದಂತೆ ತೆರಿಗೆ ಸಂಗ್ರಹ ಜಾಸ್ತಿಯಾದಲ್ಲಿ, ಹೊರೆ ಸ್ವಲ್ಪ ತಗ್ಗಬಹುದು. ಇದರ ನಡುವೆ, ಈಗಿರುವ ಸಾಲದ ಜತೆಗೆ ಇನ್ನಷ್ಟು ಸಾಲದ ಬಗ್ಗೆ ಪ್ರಸ್ತಾಪಿಸಿದ್ದು, ರಾಜ್ಯದ ಆರ್ಥಿಕ ಸ್ಥಿತಿಗತಿ ಮೇಲೆ ಇದರ ಪರಿಣಾಮ ಕಾದುನೋಡಬೇಕಿದೆ. ಇದೇ ವೇಳೆ, ಆರ್ಥಿಕ ಇತಿಮಿತಿಗಳ ನಡುವೆಯೂ, ವಿವಿಧ ಜನವರ್ಗಗಳಿಗೆ ನೆರವಾಗಬಲ್ಲ ಕೆಲ ಹೊಸ ಯೋಜನೆಗಳನ್ನು ಸಹ ಪ್ರಕಟಿಸುವ ಮೂಲಕ, ಸರ್ಕಾರದ ಇರಾದೆಯನ್ನು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net