ಸತ್ಸಂಪ್ರದಾಯ ಮುಂದುವರಿಕೆ; ಭೂಕಂಪ ಪೀಡಿತ ಟರ್ಕಿಗೆ ಮಾನವೀಯ ನೆರವು

Editorial
Published on

ಟರ್ಕಿ ಹಾಗೂ ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಭೀಕರ ಭೂಕಂಪದಿಂದಾಗಿ ಈವರೆಗೆ 5000ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, 20 ಸಾವಿರಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಭಾರತವು ಎಂದಿನಂತೆ ಮಾನವೀಯ ನೆರವಿನ ಹಸ್ತ ಚಾಚುವ ಮೂಲಕ ತನ್ನ ಸತ್ಸಂಪ್ರದಾಯವನ್ನು ಮುಂದುವರಿಸಿದೆ. ಭಾರತೀಯ ವಾಯುಪಡೆ ವಿಮಾನಗಳ ಮೂಲಕ ಭೂಕಂಪ ಪರಿಹಾರ ಸಾಮಗ್ರಿಗಳನ್ನು ಒಳಗೊಂಡ ಮೊದಲ ದಾಸ್ತಾನನ್ನು ಕಳುಹಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಶೋಧ ಮತ್ತು ರಕ್ಷಣಾ ತಂಡದ ಸಿಬ್ಬಂದಿ, ನುರಿತ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿಗಳು, ಸುಧಾರಿತ ಡ್ರಿಲ್ಲಿಂಗ್ ಉಪಕರಣ ಮುಂತಾದವುಗಳನ್ನು ಪೀಡಿತ ಪ್ರದೇಶಕ್ಕೆ ಭಾರತ ರವಾನಿಸಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ನೆರವಿನ ಸಾಮಗ್ರಿಗಳನ್ನು ಉಚಿತವಾಗಿ ಕೊಂಡೊಯ್ಯುವುದಾಗಿ ಘೋಷಿ

ಸಿದೆ. ಪ್ರಕೃತಿ ವಿಕೋಪದಿಂದ ಯಾವುದೇ ದೇಶ ಸಂಕಷ್ಟಕ್ಕೆ ಸಿಲುಕಿದರೂ ಮಾನವೀಯ ನೆರವನ್ನು ಒದಗಿಸುವಲ್ಲಿ ಭಾರತ ಸದಾ ಮುಂಚೂಣಿಯಲ್ಲಿದ್ದುಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಭಾರತವು ಯುದ್ಧಪೀಡಿತ ಯೂಕ್ರೇನ್​ಗೆ ಆಹಾರ, ವೈದ್ಯಕೀಯ ಸಾಮಗ್ರಿಗಳ ನೆರವನ್ನು ನಿರಂತರವಾಗಿ ಒದಗಿಸುತ್ತಲೇ ಬರುತ್ತಿದೆ. ವೈರಿ ರಾಷ್ಟ್ರ ಪಾಕಿಸ್ತಾನಕ್ಕೂ ಮಾನವೀಯ ನೆರವು ಒದಗಿಸುವಲ್ಲಿ ಭಾರತ ಹಿಂದೆ ಬಿದ್ದಿಲ್ಲ. 2010ರಲ್ಲಿನ ಪಾಕಿಸ್ತಾನದ ಪ್ರವಾಹ, 2005ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭೂಕಂಪ ಸಂದರ್ಭದಲ್ಲಿ ಭಾರತ ಸಹಾಯಹಸ್ತ ಚಾಚಿತ್ತು. 2010ರಲ್ಲಿ ನೆರೆ ಹಾವಳಿ ಪರಿಹಾರಕ್ಕಾಗಿ ಪಾಕಿಸ್ತಾನಕ್ಕೆ 2 ಕೋಟಿ ಡಾಲರ್ ನೆರವನ್ನು ವಿಶ್ವ ಸಂಸ್ಥೆ ಮೂಲಕ ಒದಗಿಸಿತ್ತು. 2005ರಲ್ಲಿ ಗುಜರಾತ್ ಭೂಕಂಪದ ಸಂದರ್ಭದಲ್ಲಿ ಪಾಕಿಸ್ತಾನವೂ ಮಾನವೀಯ ನೆರವನ್ನು ಒದಗಿಸುವ ಔದಾರ್ಯ ತೋರಿತ್ತು. ಸಾವಿರಾರು ಜನರ ಸಾವು ಹಾಗೂ 3 ಕೋಟಿ ಜನರಿಗೆ ಸಂಕಷ್ಟ ತಂದ ಕಳೆದ ವರ್ಷದ ಭೀಕರ ಪ್ರವಾಹದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ನೆರವನ್ನು ಒದಗಿಸುವುದಾಗಿ ಭಾರತ ಘೋಷಿಸಿತ್ತು. ನೆರೆಯ ಶ್ರೀಲಂಕಾದ ಕಷ್ಟಕ್ಕೂ ಭಾರತ ಸ್ಪಂದಿಸಿದೆ. ಇನ್ನು ವಿದೇಶಗಳಿಗೆ ನೆರವು ನೀಡಲೆಂದೇ ಭಾರತವು ತನ್ನ ಬಜೆಟ್​ನಲ್ಲಿ ಹಣವನ್ನು ಮೀಸಲಿಡುತ್ತಿದ್ದು, ಈ ಬಾರಿ 5,408 ಕೋಟಿ ರೂ. ಹಣವನ್ನು ಇದಕ್ಕಾಗಿ ಒದಗಿಸಲಾಗಿದೆ.

ಪ್ರಾಚೀನ ಕಾಲದಿಂದಲೂ ಭಾರತವು ಶಾಂತಿ-ಸೌಹಾರ್ದದ ಸಂಪ್ರದಾಯವನ್ನೇ ಪಾಲಿಸಿಕೊಂಡು ಬಂದಿರುವುದು ವೇದ್ಯವಾಗುತ್ತದೆ. ಭಾರತೀಯರು ವಿದೇಶಿಯರ ಮೇಲೆ ಆಕ್ರಮಣ ಮಾಡಿದ ಇತಿಹಾಸ ಕಾಣಸಿಗುವುದಿಲ್ಲ. ಕೆಲ ದಶಕಗಳ ಹಿಂದೆ ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕ ಹಾಗೂ ಸೋವಿಯತ್ ರಷ್ಯಾ ನೇತೃತ್ವದ ಯಾವುದೇ ಬಣಕ್ಕೆ ಭಾರತ ಸೇರಿಕೊಳ್ಳದೆ ಅಲಿಪ್ತ ನೀತಿ ಅನುಸರಿಸಿತ್ತು. ಪ್ರಸ್ತುತ ರಷ್ಯಾ- ಯೂಕ್ರೇನ್ ಯುದ್ಧದಲ್ಲೂ ಭಾರತ ಯಾರ ಪರ ನಿಲುವನ್ನೂ ತಳೆದಿಲ್ಲ. ನ್ಯಾಟೊ ಸದಸ್ಯ ಹಾಗೂ ಐರೋಪ್ಯ ರಾಷ್ಟ್ರಗಳು ಯೂಕ್ರೇನ್​ಗೆ ಬೆಂಬಲ ನೀಡಿ, ರಷ್ಯಾದ ವಿರುದ್ಧ ದಿಗ್ಬಂಧನಗಳನ್ನು ಹೇರಿವೆ. ಆದರೆ, ಭಾರತವು ರಷ್ಯಾದ ಜತೆ ವ್ಯಾಪಾರ ಮುಂದುವರಿಸಿದ್ದರೂ, ‘ಇದು ಯುದ್ಧದ ಯುಗವಲ್ಲ’ ಎಂದು ಕಿವಿಮಾತನ್ನೂ ಹೇಳಿದೆ. ಹೀಗಾಗಿ, ಭಾರತದ ಸಮತೋಲನದ ನಡೆ ಜಾಗತಿಕ ನಾಯಕರ ಶ್ಲಾಘನೆಗೆ ಪಾತ್ರವಾಗಿದೆ. ಇಂದಿನ ಜಾಗತಿಕ ವಾತಾವರಣದಲ್ಲಿ ಹೆಚ್ಚೆಚ್ಚು ದೇಶಗಳೊಂದಿಗೆ ಸ್ನೇಹದ ಸಂಬಂಧ ಹೊಂದಿರುವುದು ಉಪಯುಕ್ತ ನಡೆಯಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net