

ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದೆ. ಹಿಂಗಾರು ಸಹ ದುರ್ಬಲವಾಗಿದೆ. ಮಳೆಯ ಕೊರತೆಯಿಂದ ಈಗಾಗಲೇ ಜಲಬವಣೆ ತೀವ್ರಗೊಂಡಿದೆ. ವಾಡಿಕೆಯಂತೆ ಮಳೆ ಬಂದು ಜಲಮೂಲಗಳು ತುಂಬಿದರೆ, ಕೃಷಿಗೂ, ಕುಡಿಯುವ ನೀರಿಗೂ ಸಮಸ್ಯೆ ಇರುವುದಿಲ್ಲ. ಆದರೆ, ಹವಾಮಾನ ವೈಪರೀತ್ಯ, ಹೆಚ್ಚುತ್ತಿರುವ ತಾಪಮಾನದ ಪರಿಣಾಮ ಮಳೆ ಪ್ರಮಾಣ ಕಡಿಮೆ ಆಗುತ್ತಿರುವುದು ಕಳವಳಕಾರಿ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಸಮಯದಲ್ಲಿ ‘ಅಭಿವೃದ್ಧಿ’ ಬಗ್ಗೆ ಸಾಕಷ್ಟು ಆಶ್ವಾಸನೆಗಳನ್ನು ನೀಡುತ್ತವೆ. ಆದರೆ, ಯಾವುದೇ ಪಕ್ಷವು ಪರಿಸರ ಸಂರಕ್ಷಣೆಯ ಬಗ್ಗೆ ಗಟ್ಟಿದನಿಯಲ್ಲಿ ಮಾತನಾಡುವುದಿಲ್ಲ. ಇದಕ್ಕೆ ಪೂರಕವಾದ ಸಂಗತಿಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವುದಿಲ್ಲ. ಪರಿಸರಕ್ಕೆ ಸಂಬಂಧಿಸಿದ ಕಳವಳಗಳು ಆಳುವವರಿಗೆ ಹಾಗೂ ಪ್ರತಿಪಕ್ಷಗಳಿಗೆ ಇನ್ನೂ ಮುಖ್ಯ ಎನಿಸುತ್ತಿಲ್ಲ ಎಂಬುದಕ್ಕೆ ಇದು ಸಾಕ್ಷಿ.
ಒಡಲಲ್ಲಿ ಮಾಲಿನ್ಯವನ್ನು ತುಂಬಿಕೊಂಡಿರುವ ಜಲಮೂಲಗಳು ಜೀಣೋದ್ಧಾರಕ್ಕೆ ಚಾತಕಪಕ್ಷಿ ಯಂತೆ ಕಾಯುತ್ತಿವೆ. ಮಳೆಯಿಲ್ಲದ್ದರಿಂದ ಮತ್ತು ನಿರ್ವಹಣೆಯ ಕೊರತೆಯಿಂದ ಈ ವರ್ಷ ಕೆರೆಗಳು ಬೇಸಿಗೆಗೆ ಮುನ್ನವೇ ಒಣಗುತ್ತಿವೆ. ಶೇಕಡ 35ರಷ್ಟು ಕೆರೆಗಳಲ್ಲಿ ಕಾಲುಭಾಗವೂ ನೀರಿಲ್ಲ. ಶೇ.40ಕ್ಕೂ ಹೆಚ್ಚಿನ ಕೆರೆಕಟ್ಟೆಗಳಲ್ಲಿ ಸರಾಸರಿ ಅರ್ಧಕ್ಕಿಂತ ಕಡಿಮೆ ನೀರಿದೆ. ಮಲೆನಾಡು ಭಾಗ ಸೇರಿ ಕೆಲವು ಕಡೆಗಳಲ್ಲಿ ಮಾತ್ರ ಮುಕ್ಕಾಲು ಕೆರೆಯಷ್ಟು ನೀರಿನ ಸಂಗ್ರಹವಿದೆ. ಕೋಡಿ ಬಿದ್ದಿರುವ ಕೆರೆಕಟ್ಟೆಗಳ ಸಂಖ್ಯೆ ಶೇ.3ಕ್ಕಿಂತ ಕಡಿಮೆ ಇದೆ. 40 ಹೆಕ್ಟೇರ್ಗಿಂತ ಕಡಿಮೆ ಅಚ್ಚುಕಟ್ಟು ಹೊಂದಿರುವ ಕೆರೆಗಳನ್ನು ಜಿಲ್ಲಾ ಪಂಚಾಯಿತಿ ನಿಭಾಯಿಸುತ್ತಿದೆ ಎಂಬುದು ಗಮನಾರ್ಹ.
ಬೇಸಿಗೆಯ ಮುನ್ನವೇ ನದಿ, ಕೆರೆಗಳ ಒಡಲು ಖಾಲಿ ಆಗುತ್ತಿರುವುದನ್ನು ಮನಗಂಡು ನೀರನ್ನು ಹಿತಮಿತವಾಗಿ ಬಳಸುವಂತೆ ಸರ್ಕಾರ ಈಗಾಗಲೇ ಸೂಚಿಸಿದೆ. ಕಾವೇರಿ ಕಣಿವೆಯ ಪ್ರಮುಖ ನಾಲ್ಕು ಜಲಾಶಯಗಳಲ್ಲಿಯೂ ನೀರು ಸಂಗ್ರಹ ಈ ವರ್ಷ ಅರ್ಧದಷ್ಟು ಅಂದರೆ 59 ಟಿಎಂಸಿಗೆ ಕುಸಿದಿದೆ. ಸಮಸ್ಯೆ ಬಂದಾಗ ಮಾತ್ರ ಪರಿಹಾರಕ್ಕೆ ತಡಕಾಡುವ ಪದ್ಧತಿ ಬದಲಾಗಬೇಕು. ನದಿಗಳ ನಿರ್ವಹಣೆಗೆ, ಕೆರೆಗಳ ಸಂರಕ್ಷಣೆಗೆ ಸ್ಪಷ್ಟವಾದ ನೀತಿ ರೂಪಿಸಿ, ಅನುಷ್ಠಾನಕ್ಕೆ ತರಬೇಕು. ಕೆರೆಗಳ ಹೂಳು ತೆಗೆದರೆ ಹಲವು ವರ್ಷಗಳ ಕಾಲ ನೀರಿನ ಸಂಗ್ರಹಕ್ಕೆ ಅನುಕೂಲವಾಗುತ್ತದೆ. ಆದರೆ, ಬಹುತೇಕ ಕೆರೆಗಳ ಹೂಳು ತೆಗೆಯದೆ ಅದೆಷ್ಟೋ ವರ್ಷಗಳೇ ಕಳೆದಿವೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಹೂಳು ಎತ್ತುವ ಕಾರ್ಯವನ್ನು ಇನ್ನೂ ಪರಿಣಾಮಕಾರಿಯಾಗಿ ಕೈಗೆತ್ತಿಕೊಂಡರೆ, ಕೆರೆಗಳ ಸ್ವಚ್ಛತೆ ಜತೆಗೆ ಹೆಚ್ಚು ಮಾನವದಿನಗಳನ್ನು ಸೃಷ್ಟಿಸಿ, ಕಾರ್ವಿುಕರಿಗೆ ಕೆಲಸ ಒದಗಿಸಲು ಸಾಧ್ಯವಾಗುತ್ತದೆ. ಒಟ್ಟಾರೆ, ಕೆರೆಗಳನ್ನು ಸಂರಕ್ಷಿಸುವುದು ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವುದು ಎಲ್ಲರ ಕರ್ತವ್ಯ. ಇಲ್ಲಿ ಸರ್ಕಾರದ ಪಾತ್ರವಂತೂ ಪ್ರಮುಖವಾಗಿದೆ. ಜತೆಗೆ, ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಕೆರೆಗಳ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು, ಇದು ಜನಾಂದೋಲನದ ಸ್ವರೂಪವನ್ನು ಪಡೆಯಲಿ.