

ರಾಷ್ಟ್ರೀಯ ಹಸಿರು ಜಲಜನಕ (ಹೈಡ್ರೋಜನ್) ಮಿಷನ್ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿ 19,744 ಕೋಟಿ ರೂ. ಅನುದಾನ ನಿಗದಿ ಮಾಡಿರುವುದು ಭಾರತವನ್ನು ಇಂಧನ ಭದ್ರತೆಯುಳ್ಳ ರಾಷ್ಟ್ರವಾಗಿ ರೂಪಿಸಬಲ್ಲ ಹಾಗೂ ಸ್ವಚ್ಛ ಇಂಧನ ತಯಾರಿಸುವ ಮೂಲಕ ಪರಿಸರ ಸಂರಕ್ಷಣೆಯುಳ್ಳ ದೂರದೃಷ್ಟಿಯ ಕ್ರಮವೆನ್ನಬಹುದು. ಜಲಜನಕವು ಒಂದು ರಾಸಾಯನಿಕ ಮೂಲಧಾತು ಆಗಿದ್ದು, ವಿಶ್ವದಲ್ಲಿ ಹೇರಳವಾಗಿ ಲಭಿಸುತ್ತದೆ. ಪ್ರಸ್ತುತ ಹಸಿರು ಜಲಜನಕ ಉತ್ಪಾದನೆಯಲ್ಲಿ ಚೀನಾ ಮುಂಚೂಣಿಯಲ್ಲಿದ್ದು ಜಾಗತಿಕವಾಗಿ ಒಟ್ಟು ಉತ್ಪಾದನೆಯ ಮೂರನೇ ಒಂದರಷ್ಟನ್ನು ಈ ದೇಶವೇ ತಯಾರಿಸುತ್ತದೆ. ತೈಲ ಹಾಗೂ ಕಲ್ಲಿದ್ದಲು ಬಳಕೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿಯುಂಟಾದರೆ, ಜಲಜನಕ ಇಂಧನವು ಪರಿಸರಸ್ನೇಹಿಯಾಗಿದೆ. ಹಸಿರು ಜಲಜನಕವನ್ನು ನೀರಿನಿಂದ ತಯಾರಿಸುವುದರಿಂದ ಇದು ಆಮ್ಲಜನಕದ ಆವಿಯನ್ನು ಮಾತ್ರ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ಉತ್ಪಾದಿಸುವಾಗ ಮಾತ್ರವಲ್ಲದೆ, ಬಳಸುವಾಗಲೂ ಮಾಲಿನ್ಯಕಾರಕ ಅನಿಲಗಳನ್ನು ಇದು ಹೊರಸೂಸುವುದಿಲ್ಲ.
ಹೀಗಾಗಿ ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಜಾಗತಿಕ ತಾಪಮಾನ ನಿಯಂತ್ರಣಕ್ಕೂ ಈ ಇಂಧನ ಬಳಕೆಯು ಉತ್ತಮ ಪರಿಹಾರವಾಗಬಹುದಾಗಿದೆ. ದೇಶೀಯವಾಗಿ ಹಸಿರು ಜಲಜನಕ ಉತ್ಪಾದನೆಯು ಆರ್ಥಿಕವಾಗಿಯೂ ಸಾಕಷ್ಟು ಕೊಡುಗೆ ನೀಡಬಹುದಾಗಿದೆ. 2030ರ ವೇಳೆಗೆ ದೇಶದಲ್ಲಿ 50 ಲಕ್ಷ ಮೆಟ್ರಿಕ್ ಟನ್ನಷ್ಟು ಹಸಿರು ಹೈಡ್ರೋಜನ್ ಉತ್ಪಾದಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಗುರಿ ಈಡೇರಿದರೆ ಪೆಟ್ರೋಲಿಯಂ ಉತ್ಪನ್ನಗಳ ಆಮದಿಗೆ ವ್ಯಯಿಸಲಾಗುವ ವೆಚ್ಚದಲ್ಲಿ 1 ಲಕ್ಷ ಕೋಟಿ ರೂಪಾಯಿಯಷ್ಟು ಹಣವು ಪ್ರತಿವರ್ಷವೂ ಕಡಿಮೆಯಾಗುತ್ತದೆ. ಈ ಮೂಲಕ ಅಪಾರ ಪ್ರಮಾಣದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ. ನವೀಕರಿಸಬಹುದಾದ ಈ ಇಂಧನ ತಯಾರಿಕೆಯಿಂದ ಆರು ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಅಂದಾಜಿಸಿರುವುದು ಕೂಡ ಶುಭ ಸೂಚನೆಯೇ ಆಗಿದೆ. ಜಲಜನಕ ಇಂಧನ ವಲಯದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸರ್ಕಾರಿ ವಲಯದ ಜತೆಗೆ ಖಾಸಗಿ ಸಹಭಾಗಿತ್ವಕ್ಕೂ ಆಸ್ಪದ ಕಲ್ಪಿಸುತ್ತಿರುವುದು ಈ ಇಂಧನ ತಯಾರಿಕೆ ಹಾಗೂ ಬಳಕೆಗೆ ವೇಗವರ್ಧನೆ ನೀಡುವಂತಹ ಕ್ರಮ ಎನ್ನಬಹುದಾಗಿದೆ.
ಇತರ ಇಂಧನಗಳಿಗೆ ಹೋಲಿಸಿದರೆ ಹಸಿರು ಜಲಜನಕವು ಹೆಚ್ಚು ಸಮರ್ಥ ಹಾಗೂ ದಕ್ಷತೆಯುಳ್ಳದ್ದಾಗಿದೆ. ತುಂಬಾ ಹಗುರವಾಗಿರುವುದರಿಂದ ಇದರ ಸಂಗ್ರಹಣೆ ಕೂಡ ಸುಲಭದ್ದಾಗಿದೆ. ವಾಣಿಜ್ಯ, ಕೈಗಾರಿಕೆ ಉದ್ದೇಶಗಳಿಗೆ ಮಾತ್ರವಲ್ಲದೆ, ಗೃಹ ಬಳಕೆಗೂ ಉಪಯೋಗಿಸಬಹುದಾಗಿದೆ. ಪ್ರಸ್ತುತ ಮನೆಗಳಲ್ಲಿ ಬಳಸುವ ನೈಸರ್ಗಿಕ ಅನಿಲ ಪೂರೈಸುವ ಪೈಪ್ಲೈನ್ಗಳ ಮೂಲಕವೇ ಇದನ್ನು ಪೂರೈಸಲು ಅವಕಾಶವಿದೆ. ವಾಹನಗಳಲ್ಲೂ ಇಂಧನವಾಗಿ ಬಳಸುವುದಕ್ಕೆ ಭಾರತದಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ಪೆಟ್ರೋಲ್, ಡೀಸೆಲ್ಗೆ ಹೋಲಿಸಿದರೆ ಇದು ಅಗ್ಗದ್ದಾಗಿದ್ದು, ದೇಶೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ತಯಾರಿಕೆ ಹಾಗೂ ಬಳಕೆ ಸಾಧ್ಯವಾದರೆ ಇನ್ನಷ್ಟು ವೆಚ್ಚ ತಗ್ಗಲಿದೆ. 2050ರ ಹೊತ್ತಿಗೆ ಭೂಮಿಯನ್ನು ಇಂಗಾಲಮುಕ್ತಗೊಳಿಸುವ ಗುರಿಯನ್ನು ಜಗತ್ತಿನ ಎಲ್ಲ ರಾಷ್ಟ್ರಗಳು ಹಾಕಿಕೊಂಡಿವೆ. ಈ ನಿಟ್ಟಿನಲ್ಲಿ ಜಲಜನಕ ತಯಾರಿಕೆ ಕಾರ್ಯಯೋಜನೆಯು ಪ್ರಮುಖ ಹೆಜ್ಜೆ ಎಂದು ಗುರುತಿಸಬಹುದಾಗಿದೆ.