ಮಾನವೀಯ ನೆರವು: 3 ರಾಷ್ಟ್ರಗಳ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವಕ್ಕೆ ಅವಕಾಶ

Editorial
Published on

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) 2019ರಲ್ಲಿಯೇ ಅಂಗೀಕರಿಸಿತ್ತು. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್ 31ರವರೆಗೆ ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಭಾರತಕ್ಕೆ ವಲಸೆ ಬಂದ ಈ ಮೂರು ದೇಶಗಳಲ್ಲಿನ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ನೆರವಾಗುವ ಉದ್ದೇಶದ ಈ ಕಾಯ್ದೆಯು ಸಾಕಷ್ಟು ಪರ-ವಿರೋಧಗಳಿಗೆ ಕಾರಣವಾಗಿ ವಿವಾದಗಳನ್ನು ಸೃಷ್ಟಿಸಿತ್ತು. ಗೃಹ ಸಚಿವಾಲಯವು ಈಗ ಈ ಕುರಿತಂತೆ ಅಧಿಸೂಚನೆಯನ್ನು ಹೊರಡಿಸಿದ್ದು, ಗುಜರಾತ್​ನ ಎರಡು ಜಿಲ್ಲೆಗಳಾದ ಮೆಹ್ಸಾನಾ ಮತ್ತು ಆನಂದ್​ನ

ಜಿಲ್ಲಾಧಿಕಾರಿಗಳು ಈ ಮೂರು ದೇಶಗಳಿಂದ ಬಂದ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳಿಗೆ ಪೌರತ್ವ ಪ್ರಮಾಣಪತ್ರವನ್ನು ನೀಡಲು ಅವಕಾಶ ಮಾಡಿಕೊಟ್ಟಿರುವುದು ಮಾನವೀಯ ದೃಷ್ಟಿಕೋನವುಳ್ಳ ಔದಾರ್ಯದ ನಡೆಯಾಗಿ ಗೋಚರಿಸುತ್ತದೆ.

ಈ ಕಾಯ್ದೆಯಲ್ಲಿ ಪೌರತ್ವ ಪಡೆಯಲು ಮುಸ್ಲಿಮರಿಗೆ ಅವಕಾಶವನ್ನು ಕಲ್ಪಿಸಲಾಗಿಲ್ಲ ಎಂಬ ತಕರಾರು ಹಾಗೂ ಇದನ್ನು ಭಾರತದ ಮುಸ್ಲಿಮರ ವಿರುದ್ಧ ದುರ್ಬಳಕೆ ಮಾಡಿಕೊಳ್ಳಬಹುವ ಸಾಧ್ಯತೆ ಇದೆ ಆತಂಕವು ಸಿಎಎ ಮಸೂದೆಯನ್ನು ಪ್ರಸ್ತಾಪಿಸಿದ ಸಂದರ್ಭದಲ್ಲಿ ವ್ಯಕ್ತವಾಗಿತ್ತು. ನೆರೆಯ ಮೂರು ರಾಷ್ಟ್ರಗಳಲ್ಲಿರುವ ಅಲ್ಪಸಂಖ್ಯಾತ ಸಮುದಾಯದವರಿಗೆ ಮಾತ್ರ ಈ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದ್ದು, ಭಾರತೀಯ ಮುಸ್ಲಿಮರು ಯಾವುದೇ ಕಾರಣಕ್ಕೂ ಭೀತಿಪಡಲು ಕಾರಣವಿಲ್ಲ ಎಂದು ಕೇಂದ್ರ ಸರ್ಕಾರ ಮನವರಿಕೆ ಮಾಡಿಕೊಟ್ಟಿತ್ತು. ಇನ್ನು ರಾಜಕೀಯ ಕಾರಣಗಳಿಗಾಗಿ ವಿರೋಧ ಪಕ್ಷಗಳು ಸಿಎಎ ವಿರೋಧಿಸಿದ್ದವು. ಪಶ್ಚಿಮ ಬಂಗಾಳದಲ್ಲಿ ತಮ್ಮ ಮತ ಬ್ಯಾಂಕ್ ಕಾಪಾಡಿಕೊಳ್ಳುವುದಕ್ಕಾಗಿ ಮಮತಾ ಬ್ಯಾನರ್ಜಿ ಅವರು ಇದನ್ನು ತೀವ್ರವಾಗಿ ವಿರೋಧಿಸಿದ್ದರು. ಆದರೆ, ಪ್ರಮುಖ ವಿರೋಧ ಪಕ್ಷ್ವಆದ ಕಾಂಗ್ರೆಸ್ ವಿರೋಧವು ಕೇವಲ ತೋರಿಕೆಗಾಗಿ ಎಂಬಂತೆ ಭಾಸವಾಗುತ್ತಿತ್ತು.

ಐತಿಹಾಸಿಕವಾಗಿ ಹಾಗೂ ಪೌರಾಣಿಕವಾಗಿ ನೋಡಿದಾಗ ಈ ಎಲ್ಲ ದೇಶಗಳು ಅಖಂಡ ಭಾರತದ ಪ್ರದೇಶಗಳೇ ಆಗಿವೆ. ಮಹಾಭಾರತದಲ್ಲಿ ಉಲ್ಲೇಖವಾಗುವ ಪ್ರಮುಖ ಸ್ಥಳ ಗಾಂಧಾರವು ಈಗ ಆಪ್ಘಾನಿಸ್ತಾನದಲ್ಲಿದ್ದು, ಮೌರ್ಯರ ಕಾಲದಲ್ಲಿ ಅವರ ಸಾಮ್ರಾಜ್ಯದ ಭಾಗವಾಗಿತ್ತು. 9ನೇ ಶತಮಾನದವರೆಗೂ ಬೌದ್ಧ ಧರ್ಮವೇ ಇಲ್ಲಿ ಪ್ರಖರವಾಗಿ ಬೆಳೆದಿತ್ತು. 1947ರಲ್ಲಿ ಭಾರತದ ವಿಭಜನೆಯಾಗಿ ಪಾಕಿಸ್ತಾನ ನಿರ್ವಣಗೊಂಡಿತು. ತದನಂತರ 1971ರಲ್ಲಿ ಪೂರ್ವ ಪಾಕಿಸ್ತಾನವು ಸ್ವತಂತ್ರ ಬಾಂಗ್ಲಾ ದೇಶವಾಗಿ ರೂಪುಗೊಂಡಿತು. ಅಂದಿನ ಭಾರತದ ಪ್ರಧಾನಿ ಇಂದಿರಾಗಾಂಧಿ ಅವರು ಈ ನೂತನ ರಾಷ್ಟ್ರ ಸ್ಥಾಪನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಭಾರತ ವಿಭಜನೆಯಾದ ಸಂದರ್ಭದಲ್ಲಿ ನಡೆದ ಕೋಮು ಸಂಘರ್ಷಗಳಲ್ಲಿ ಗಡಿ ಭಾಗದಲ್ಲಿರುವ ಜನರು ಸಾಕಷ್ಟು ನೋವನ್ನು ಅನುಭವಿಸಿದ್ದಾರೆ. ತದನಂತರವೂ ಪಾಕಿಸ್ತಾನ ಪ್ರದೇಶಗಳಲ್ಲಿನ ಹಿಂದುಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಜನರ ಮೇಲೆ ಮೂಲಭೂತವಾದಿಗಳ ದಬ್ಬಾಳಿಕೆ ನಿರಂತರವಾಗಿ ನಡೆದುಕೊಂಡೇ ಬಂದಿದೆ. ಅಲ್ಲಿ ಮತಾಂತರ ಪ್ರಕರಣಗಳು ವ್ಯಾಪಕವಾಗಿ ನಡೆದುಕೊಂಡು ಬಂದಿರುವುದು ಈ ಆರೋಪಗಳಿಗೆ ಸಾಕಷ್ಟು ಪುಷ್ಟಿ ನೀಡುತ್ತದೆ.

ಇನ್ನು ಭಾರತವು ಅಧಿಕೃತವಾಗಿಯೂ ಹಾಗೂ ಅನಧಿಕೃತವಾಗಿಯೂ ಬೇರೆ ದೇಶಗಳಿಂದ ವಲಸೆ ಬರುವವರಿಗೆ ನೆಲೆ ಕೊಡುವಂತಹ ಮನಸ್ಥಿತಿಯನ್ನೇ ಬೆಳೆಸಿಕೊಂಡು ಬಂದಿದೆ. 1959ರಲ್ಲಿ ಚೀನಾದ ಆಕ್ರಮಣದ ಹಿನ್ನೆಲೆಯಲ್ಲಿ ತಮ್ಮ ದೇಶ ತೊರೆದ ಟಿಬೆಟ್ ನಿರಾಶ್ರಿತರಿಗೆ ಭಾರತದಲ್ಲಿ ಅಧಿಕೃತವಾಗಿ ಆಶ್ರಯವನ್ನು ಕಲ್ಪಿಸಲಾಗಿದ್ದು, ಅವರು ಬದುಕು ಕಟ್ಟಿಕೊಳ್ಳಲು ನೆಲ- ಜಮೀನುಗಳನ್ನು ಕೂಡ ಒದಗಿಸಲಾಗಿದೆ. ಇವರ ಸಂಖ್ಯೆ ಸರಿಸುಮಾರು 1.5 ಲಕ್ಷ ಇದೆ.

ಇನ್ನು, ಬಾಂಗ್ಲಾ ದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದವರ ಸಂಖ್ಯೆಯಂತೂ 2 ಕೋಟಿ ಇದೆ ಎಂದು ಅಂದಾಜಿಸಲಾಗಿದ್ದು, ಇವರಲ್ಲಿಗ ಸಾಕಷ್ಟು ಜನರು ಭಾರತೀಯ ಪೌರತ್ವದ ದಾಖಲೆಗಳನ್ನು ಕೂಡ ಅಕ್ರಮವಾಗಿ ಪಡೆದುಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಎಲ್ಲ ಸಂಗತಿಗಳನ್ನು ಅವಲೋಕಿಸಿದಾಗ, ಭಾರತದ ಜತೆ ಪೌರಾಣಿಕ, ಐತಿಹಾಸಿಕ, ಧಾರ್ವಿುಕ ನಂಟು ಹೊಂದಿರುವ ಹಾಗೂ ಅಲ್ಪಸಂಖ್ಯಾತರಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಮೂರು ರಾಷ್ಟ್ರಗಳ ಜನರಿಗೆ ಭಾರತದಲ್ಲಿ ನೆಲೆ ಒದಗಿಸುವುದು ಔಚಿತ್ಯಪೂರ್ಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net